Advertisement

ಶೂ-ಸಾಕ್ಸ್‌ ಖರೀದಿಗೆ ಹಣ ಬಿಡುಗಡೆ

05:03 PM Aug 21, 2019 | Naveen |

ದೇವದುರ್ಗ: ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ವಿತರಿಸುವ ಸಲುವಾಗಿ ಶೂ ಸಾಕ್ಸ್‌ ಖರೀದಿಸಲು 1.27 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.

Advertisement

ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳು ಗತಿಸಿದೆ. ರಾಜ್ಯ ಸರಕಾರ ಇದೀಗ ಶಿಕ್ಷಣ ಇಲಾಖೆಗೆ ಶೂ ಸಾಕ್ಸ್‌ ಖರೀದಿಗೆ ಅನುದಾನ ಬಿಡುಗಡೆ ಮಾಡಿದೆ. ಶೂ ಸಾಕ್ಸ್‌ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಎಸ್‌ಡಿಎಂಸಿ ಅನುಮೋದಿತ ಸಮಿತಿ ರಚಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಶೂ ಸಾಕ್ಸ್‌ ಖರೀದಿಸಲು ಸರಕಾರಿ ಶಾಲೆಯಲ್ಲಿ ಸಮಿತಿ ರಚಿಸಲಾಗಿದೆ. ಎಸ್‌ಡಿಎಂಸಿ, ಮುಖ್ಯ ಶಿಕ್ಷಕರ ಮೂವರಲ್ಲಿ ಒಬ್ಬ ಪುರುಷ ಸದಸ್ಯ, ಇಬ್ಬರೂ ಮಹಿಳೆ ಸದಸ್ಯರು ಸೇರಿ ಸಮಿತಿ ರಚಿಸಲಾಗಿದೆ. ಸಮಿತಿ ಸೂಚನೆಯಂತೆ ಶೂ ಸಾಕ್ಸ್‌ ಪ್ರಕ್ರಿಯೆ ನಡೆಯಬೇಕು ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ. ಮುಖ್ಯ ಶಿಕ್ಷಕರ ಬ್ಯಾಂಕ್‌ ಖಾತೆಗೆ ಈಗಾಗಲೇ ಅನುದಾನ ಜಮಾ ಮಾಡಲಾಗಿದೆ.

1ರಿಂದ 5ನೇ ತರಗತಿ ವಿದ್ಯಾರ್ಥಿಗೆ 265 ರೂ. 6ರಿಂದ 8ನೇ ತರಗತಿ ವಿದ್ಯಾರ್ಥಿಗೆ 295ರೂ. 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ಅನುದಾನ ನೀಡಲಾಗಿದೆ. ಶೂ ಸಾಕ್ಸ್‌ ಅನುದಾನ ಕುರಿತು ಶಾಲೆ ಮುಖ್ಯ ಶಿಕ್ಷಕರು ಬ್ಯಾಂಕ್‌ಗೆ ಅಲೆದಾಡುತ್ತಿದ್ದಾರೆ. ಒಬ್ಬರಿಗೂ ಒಂದೊಂದು ಹೇಳಿಕೆ ನೀಡುವ ಅಧಿಕಾರಿಗಳ ಗೊಂದಲದಿಂದಾಗಿ ಇಲ್ಲಿವರೆಗೆ ಶೂ ಸಾಕ್ಸ್‌ ಖರೀದಿಗೆ ಮುಹೂರ್ತ ಕೂಡಿ ಬಂದಿಲ್ಲ. ಹೀಗಾಗಿ ಬಡಮಕ್ಕಳ ಆಸೆಗೆ ತಣ್ಣೀರು ಎರಚಿದಂತಾಗಿದೆ ಎಂದು ಪಾಲಕರು ದೂರಿದ್ದಾರೆ.

ಉಚಿತ ಶೂ ಮತ್ತು ಸಾಕ್ಸ್‌ ವಿತರಣೆಗೆ ಸಂಬಂಧಿಸಿದಂತೆ ವೆಬ್‌ಸೈಟ್ ಮಾಡಲಾಗಿದೆ. ಖರೀದಿ ಪ್ರಕ್ರಿಯೆ ಮುಗಿದ ನಂತರ ವೆಬ್‌ಸೈಟ್‌ನಲ್ಲಿ ಎಲ್ಲ ಸರಕಾರಿ ಶಾಲೆ ಮುಖ್ಯ ಶಿಕ್ಷಕರು ಖರೀದಿ ಮಾಹಿತಿಯನ್ನು ಬಿಆರ್‌ಪಿ ಮತ್ತು ಸಿಆರ್‌ಪಿಗಳ ಮೂಲಕ ಅಪ್‌ಲೋಡ್‌ ಮಾಡಬೇಕು. ಕ್ಷೇತ್ರಶಿಕ್ಷಣಾಧಿಕಾರಿ ಹಂತದಲ್ಲಿ ಪರಿಶೀಲಿಸಿ ಜಿಲ್ಲಾ ಉಪನಿರ್ದೇಶಕರಿಗೆ ಮಾಹಿತಿ ನೀಡಲಾಗುತ್ತಿದೆ.

ಶೂ ಸಾಕ್ಸ್‌ ಮಾರಾಟ ಮಾಡುವ ಡೀಲರ್‌ ಸಂಸ್ಥೆ ಜಿಎಸ್‌ಟಿ ಸಂಖ್ಯೆ, ಸಂಸ್ಥೆ ವಿವರ, ಮೂರು ಕೊಟೇಶನ್‌ ಪ್ರತಿಗಳು. ಒಂದು ಜತೆ ಪಾದರಕ್ಷೆಗೆ ತಗಲುವ ವೆಚ್ಚ ಹಾಗೂ ಖರೀದಿ ಒಟ್ಟು ಮೌಲ್ಯ ಮಾಹಿತಿ ಆದೇಶದ ಅನುಮೋದನೆಯನ್ನು ತಂತ್ರಾಂಶದ ಮೂಲಕವೇ ಮಾಡತಕ್ಕದು ಎಂಬ ನಿಯಮ ಇದೆ.

Advertisement

1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಸಾಕ್ಸ್‌ ಖರೀದಿ ಪ್ರಕ್ರಿಯೆ ಆರಂಭಿಸಲು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ, ಬಿಆರ್‌ಪಿ, ಸಿಆರ್‌ಪಿ ಅಧಿಕಾರಿಗಳು ಹಸ್ತಕ್ಷೇಪ ಮಾಡದಂತೆ ಸೂಚಿಸಲಾಗಿದೆ. ಸರಕಾರ ಸರ್ಕಾರಿ ಶಾಲೆ 300ಕ್ಕೂ ಹೆಚ್ಚು ಪ್ರಾಥಮಿಕ, 32 ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಬ್ಯಾಂಕ್‌ ಖಾತೆಗೆ ಈಗಾಗಲೇ ಅನುದಾನ ಜಮಾ ಮಾಡಲಾಗಿದೆ. ಹೀಗಾಗಿ ಶಾಲಾ ಹಂತದಲ್ಲೇ ಶೂ ಸಾಕ್ಸ್‌ ಖರೀದಿ ಪ್ರಕ್ರಿಯೆ ನಡೆಯಬೇಕು. ಕಳೆದ ವರ್ಷ ರಾಜಕೀಯ ಪ್ರಭಾವಿಗಳು ಕಮೀಷನ್‌ ದಂಧೆಗೆ ಬಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ಕಳಪೆ ಗುಣಮಟ್ಟದ ಶೂ ಸಾಕ್ಸ್‌ ಖರೀದಿಸಲಾಗಿತ್ತು. ಈ ವರ್ಷ ಅಂತಹ ದಂಧೆ ನಡೆಯದಂತೆ ಮುಖ್ಯ ಶಿಕ್ಷಕರು ಮುನ್ನಚ್ಚರಿಕೆ ವಹಿಸಬೇಕು ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹನುಮಂತಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next