Advertisement

ಕ್ಲಬ್ ಆವರಣ ಕುಡುಕರ ತಾಣ

06:29 PM Oct 18, 2019 | Team Udayavani |

„ನಾಗರಾಜ ತೇಲ್ಕರ್‌
ದೇವದುರ್ಗ:
ಪಟ್ಟಣದ ಕೋರ್ಟ್‌ ವ್ಯಾಪ್ತಿಯ ಸಾರ್ವಜನಿಕ ಕ್ಲಬ್‌ ಆವರಣ ಹಗಲು ಸಭೆ, ಸಮಾರಂಭಗಳಿಗೆ ವೇದಿಕೆ ಆದರೆ, ರಾತ್ರಿ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ. ಸಾರ್ವಜನಿಕ ಕ್ಲಬ್‌ ಆವರಣದಲ್ಲಿ ತಾಲೂಕು ಆಡಳಿತದಿಂದ ವಿವಿಧ ಜಯಂತ್ಯುತ್ಸವ, ರಾಷ್ಟ್ರೀಯ ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

Advertisement

ಈ ಆವರಣ ಕೋರ್ಟ್‌ ವ್ಯಾಪ್ತಿಗೆ ಒಳಪಟ್ಟಿದೆ. ಪಕ್ಕದಲ್ಲೇ ಸಿಪಿಐ ಕಚೇರಿ, ಪೊಲೀಸ್‌ ಠಾಣೆ, ಕಾಂಪೌಂಡ್‌ಗೆ ಹೊಂದಿಕೊಂಡು ತಾಲೂಕು ಸರ್ಕಾರಿ ಆಸ್ಪತ್ರೆ, ಹಸನಿ ದರ್ಗಾ, ಬಸವಣ್ಣ ದೇವಸ್ಥಾನ ಮತ್ತು ಮನೆಗಳಿವೆ. ಸಭೆ, ಸಮಾರಂಭ, ಸಾಂಸ್ಕೃತಿಕ ಚಟುವಟಿಕೆಗಳ ವೇದಿಕೆಯಾದ ಸಾರ್ವಜನಿಕ ಆವರಣ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡೆ, ಪುಂಡ ಪೋಕರಿಗಳ ಅನೈತಿಕ ತಾಣವಾಗಿ ಮಾರ್ಪಡುತ್ತಿರುವುದು ದುರಂತದ ಸಂಗತಿ. ಕ್ಲಬ್‌ ಆವರಣದಲ್ಲಿನ ವಿದ್ಯುತ್‌ ಕಂಬದಲ್ಲಿ ದೀಪಗಳನ್ನು ಹಾಕಿದರೂ ಕುಡುಕರು, ಕಿಡಿಗೇಡಿಗಳು ವೈರ್‌ ತೆಗೆದು ದೀಪ ಆರಿಸಿ ಕತ್ತಲಲ್ಲಿ ಮದ್ಯಗೋಷ್ಠಿ ನಡೆಸುತ್ತಾರೆ. ಮದ್ಯದ ಬಾಟಲಿ, ಪೌಚ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಚೀರಾಡುವುದು, ಕೇಕೆ ಹಾಕುವುದು, ಅಸಭ್ಯವಾಗಿ ವರ್ತಿಸುತ್ತಾರೆ. ಇದರಿಂದ ಸುತ್ತಲಿನವರಿಗೆ ಕಿರಿಕಿರಿ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಾಯು ವಿಹಾರಕ್ಕೆ ಬರುವವರಿಗೆ ಕಿರಿಕಿರಿ: ನಿತ್ಯ ಬೆಳಗ್ಗೆ ಸಾರ್ವಜನಿಕ ಆವರಣಕ್ಕೆ ಮಹಿಳೆಯರು, ಪುರುಷರು, ವೃದ್ದರು ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಮಕ್ಕಳು, ಯುವಕರು, ವಕೀಲರು, ನೌಕರರು ಇಲ್ಲಿ ಕ್ರಿಕೆಟ್‌, ಇತರೆ ಕ್ರೀಡೆ ಆಡುತ್ತಾರೆ. ಆದರೆ ಆವರಣದಲ್ಲಿ ಬಿದ್ದ ಮದ್ಯದ ಬಾಟಲಿ, ಪೌಚ್‌, ಇತರೆ ವಸ್ತುಗಳ ದರ್ಶನದಿಂದ ಯಾಕಾದರೂ ಇಲ್ಲಿಗೆ ಬರುತ್ತೇವೋ ಎಂಬ ಬೇಸರ ಮೂಡುತ್ತಿದೆ.

ಪೊಲೀಸ್‌ ಇಲಾಖೆ ಮೌನ: ಸಾರ್ವಜನಿಕ ಆವರಣ ಪಕ್ಕವೇ ಪೊಲೀಸ್‌ ಠಾಣೆ ಇದ್ದರೂ ಪೊಲೀಸರು ಇಲ್ಲಿ ಪುಂಡ, ಪೋಕರಿಗಳ ಹುಚ್ಚಾಟಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿಲ್ಲ. ಶಾಲಾ-ಕಾಲೇಜು ಆವರಣದಲ್ಲಿ ಮದ್ಯ ಸೇವಿಸಲು ಕಡಿವಾಣ ಹಾಕಿರುವ ಪೊಲೀಸರು ಸಾರ್ವಜನಿಕ ಕ್ಲಬ್‌ ಆವರಣದಲ್ಲೂ ಇಂತಹ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಕೀಲರ ಗಮನಕ್ಕೆ: ಇನ್ನು ಸಾರ್ವಜನಿಕ ಕ್ಲಬ್‌ ಸುತ್ತಲಿನ ವ್ಯಾಪಾರಸ್ಥರು ಆವರಣದಲ್ಲಿ ನಡೆಯುತ್ತಿರುವ ಕಿಡಿಗೇಡಿಗಳ ಕೃತ್ಯದ ಬಗ್ಗೆ ವಕೀಲರ ಸಂಘದ ಗಮನಕ್ಕೆ ತಂದಿದ್ದಾರೆನ್ನಲಾಗಿದೆ. ಪೊಲೀಸ್‌ ಮತ್ತು ವಕೀಲರು, ನ್ಯಾಯಾಲಯದ ಸಿಬ್ಬಂದಿ ಸಾರ್ವಜನಿಕ ಕ್ಲಬ್‌ ಆವರಣದಲ್ಲಿ ಕುಡುಕರು, ಕಿಡಿಗೇಡಿಗಳು, ಪುಂಡಪೋಕರಿಗಳ ಕೃತ್ಯಕ್ಕೆ ಕಡಿವಾಣ ಹಾಕಬೇಕೆಂದು ಹಿರಿಯ ನಾಗರಿಕರಾದ ವಿಶ್ವನಾಥ ಇತರರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next