ದೇವದುರ್ಗ: ದೇವದುರ್ಗ ವಿಧಾನಸಭಾ ಕ್ಷೇತ್ರವನ್ನು ಬರಗಾಲ ಪ್ರದೇಶ ಪಟ್ಟಿಯಿಂದ ಕೈಬಿಡಲಾಗಿದೆ. ಎಲ್ಲ ಗ್ರಾಪಂಗಳ ಅನುದಾನ ಮತ್ತು ಇತರೆ ಅನುದಾನಗಳಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅನಿವಾರ್ಯತೆ ಇದೆ. ಅಧಿಕಾರಿಗಳು ಮುಂಜಗ್ರತಾ ಕ್ರಮ ಕೈಗೊಂಡು ನೀರಿನ ಭವಣೆ ಬರದಂತೆ ನಿಗಾ ವಹಿಸಬೇಕು ಎಂದು ಶಾಸಕ ಕೆ. ಶಿವನಗೌಡನಾಯಕ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಹೊರಾಂಗಣದಲ್ಲಿ ಗುರುವಾರ ನಡೆದ ಕುಡಿಯುವ ನೀರು ಮತ್ತು ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಭೀತಿಯಿಂದ ಪುಣೆ, ಮುಂಬೈ, ಬೆಂಗಳೂರು, ಗೋವಾದಿಂದ ಕೂಲಿ ಕಾರ್ಮಿಕರು ತಾಲೂಕಿಗೆ ಮರಳಿ ಬಂದಿದ್ದಾರೆ. ಅವರಿಗೆ ಕೂಡಲೇ ಉದ್ಯೋಗ ಒದಗಿಸಿ ಕೂಲಿ ಮತ್ತು ಕೆಲಸ ನೀಡಬೇಕು. ಪ್ರತಿ ಗ್ರಾಪಂ ಮಟ್ಟದಲ್ಲಿ 1000ದಿಂದ 1500 ಜಾಬ್ ಕಾರ್ಡ್ ಹೆಚ್ಚಿಸಿ ಮೇ 7ರೊಳಗೆ ಹೊಸ ಕೂಲಿಕಾರ್ಮಿಕರ ಪಟ್ಟಿ ನೀಡಬೇಕು. ಗ್ರಾಮದಲ್ಲಿ ಜನರ ಬೇಡಿಕೆ ಪರಿಗಣಿಸಿ ಉದ್ಯೋಗ ಖಾತ್ರಿ ಯೋಜನೆ ಕ್ರಿಯಾಯೋಜನೆಗೆ ಸೇರಿಸಬೇಕು. ಎಲ್ಲ 33 ಗ್ರಾಪಂಗಳ ಕ್ರಿಯಾಯೋಜನೆಗೆ ರೂಪಿಸಿ ಗಮನಕ್ಕೆ ತಂದರೆ ಅನುಮೋದನೆ ಕೊಡಿಸಲಾಗುವದು ಎಂದು ತಾಪಂ ಪ್ರಭಾರಿ ಇಒ ವೆಂಕಟೇಶ ಗಲಗ ಅವರಿಗೆ ಸೂಚಿಸಿದರು.
ಎಲ್ಲ ಪಿಡಿಒಗಳು ಕಡ್ಡಾಯವಾಗಿ ಕೇಂದ್ರ ಸ್ಥಳದಲ್ಲಿ ವಾಸಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟದ ಕುರಿತು ಗಮನ ನೀಡಬೇಕು ಎಂದು ಹೇಳಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ| ಬನದೇಶ ಕೈಗೊಂಡಿರುವ ಕ್ರಮಗಳು ಮತ್ತು ಕಾರ್ಯಾಚರಣೆ ಮಾಡಿರುವ ಕುರಿತು ಸಭೆಗೆ ಮಾಹಿತಿ ನೀಡಿದರು.
ಜಾಲಹಳ್ಳಿ, ಮಸರಕಲ್ ಗ್ರಾಮಗಳ 110ಕೆವಿ ಮತ್ತು ದೇವದುರ್ಗ ಪಟ್ಟಣದಲ್ಲಿ 210ಕೆವಿ ವಿದ್ಯುತ್ ಘಟಕ ನಿರ್ಮಾಣ ಹಂತದಲ್ಲಿ ವಿಳಂಬವಾಗುತ್ತಿದೆ. ದೊಡ್ಡಿ, ತಾಂಡಾಗಳಲ್ಲಿ ಇನ್ನೂ ವಿದ್ಯುತ್ ಸೌಕರ್ಯ ಇಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕ ರಸ್ತೆಗಳನ್ನು ಅಗಲೀಕರಣ ಮಾಡಲು ಅನುದಾನ ನೀಡಲಾಗಿದೆ. ವಿದ್ಯುತ್ ಕಂಬ ಸ್ಥಳಾಂತರವಾಗುತ್ತಿಲ್ಲ. ಹೀಗೇಕೆ ಮಾಡುತ್ತಿರುವಿರಿ ಎಂದು ಜೆಸ್ಕಾಂ ಎಇಇ ಬಸವರಾಜ ಚವ್ಹಾಣ ಅವರನ್ನು ಶಾಸಕರು ಪ್ರಶ್ನಿಸಿದರು.
ಜೆಸ್ಕಾಂ ಎಂಡಿಯೊಂದರಿಗೆ ದೂರವಾಣಿಯಲ್ಲಿ ಮಾತನಾಡಿ,ಖಾಲಿ ಇರುವ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲು ಕೋರಿದರು. ತಹಶೀಲ್ದಾರ್ ಮಧುರಾಜ ಯಾಳಗಿ, ಸಿಪಿಐ ಆರ್.ಎಂ. ನದಾಫ್, ಬಿಇಒ ಆರ್. ಇಂದಿರಾ, ಸಹಾಯಕ ಕೃಷಿ ನಿರ್ದೇಶಕಿ ಡಾ| ಎಸ್. ಪ್ರಿಯಾಂಕಾ, ಲೋಕೋಪಯೋಗಿ ಇಲಾಖೆ ಇಇ ಬಿ.ಬಿ. ಪಾಟೀಲ, ಜಿಪಂ ಎಇಇ ಮಹಾದೇವಪ್ಪ ನಾಯಕ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎಸ್. ಬಸವರಾಜ ಸಿಡಿಪಿಒ ಮಹೇಶ ನಾಯಕ, ಪಿಎಸ್‌ಐ ಎಲ್.ಬಿ.ಅಗ್ನಿ ಇದ್ದರು.