Advertisement

ದೇವದುರ್ಗದಲ್ಲಿ ಶವಸಂಸ್ಕಾರಕ್ಕೂ ಸ್ಥಳಾಭಾವ!

07:03 PM Apr 19, 2021 | Team Udayavani |

ದೇವದುರ್ಗ: ಪಟ್ಟಣದ ವ್ಯಾಪ್ತಿ ದಿನೇ ದಿನೇ ವಿಸ್ತಾರಗೊಳ್ಳುತ್ತಿದ್ದು, ಮೂಲಭೂತ ಸೌಲಭ್ಯಗಳ ಜತೆ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೂ ಸ್ಥಳಾಭಾವ ಎದುರಾಗಿದೆ. ನಿರಾಶ್ರಿತರಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಾಲೂಕಿನ ಬಹುತೇಕ ಹಳ್ಳಿ ತಾಂಡಾ ದೊಡ್ಡಿಗಳಲ್ಲಿ ಸ್ಮಶಾನದ ಸಮಸ್ಯೆ ಕಾಡುತ್ತಿದೆ.

Advertisement

ತಾಂಡಾ ದೊಡ್ಡಿಯಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನ ಇಲ್ಲದೇ ಇರುವುದರಿಂದ ಅವರವರ ಜಮೀನಲ್ಲೇ ಅಂತ್ಯ ಸಂಸ್ಕಾರ ಮಾಡಬೇಕಾದ ಸಂಕಷ್ಟ ಬಂದೊದಗಿದೆ. ಸರ್ಕಾರಿ ಸ್ಥಳದಲ್ಲಿರುವ ಬಹುತೇಕ ಸ್ಮಶಾನಗಳು ತುಂಬಿ ಹೋಗಿವೆ. ಕೆಲವರು ಸಂಸ್ಕಾರ ಮಾಡಿದ ಮೇಲೆ ಹಿರಿಯರ ಸ್ಮರಣಾರ್ಥ ಸಮಾಧಿಗಳನ್ನು ಕಟ್ಟುತ್ತಿದ್ದು, ಇದರಿಂದ ಸ್ಥಳಾಭಾವ ಎದುರಾಗುತ್ತಿದೆ. ಬಹುತೇಕ ಸ್ಮಶಾನಗಳು ನಿರ್ವಹಣೆ ಇಲ್ಲದೆ ಜಾಲಿ ಕಂಟಿ ಬೆಳೆದಿದೆ.

ಮೃತಪಟ್ಟಾಗ ಮಾತ್ರ ಅಂತ್ಯಸಂಸ್ಕಾರ ಮಾಡುವಷ್ಟು ಜಾಗ ಸ್ವತ್ಛತೆ ಮಾಡಿಕೊಂಡು ಶವ ಸಂಸ್ಕಾರ ಮಾಡುವಂತಹ ಸ್ಥಿತಿ ಇದೆ. ಪುರಸಭೆ ಮತ್ತು ಗ್ರಾಮ ಪಂಚಾಯಿತಿಗಳು ಸ್ಮಶಾನಗಳ ಸ್ವತ್ಛತೆ ಕುರಿತು ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಸಾಮಾನ್ಯವಾಗಿದೆ. ಹಿಂದೆ ಹೂತ ಶವಗಳ ಅಸ್ಥಿ ತೆಗೆದೇ ಸಂಸ್ಕಾರ ಮಾಡುವ ಸ್ಥಿತಿ ಬಂದಿದೆ. ಕೆಲ ಹಳ್ಳಿಗಳಲ್ಲಿ ಸರಕಾರಿ ಜಾಗ ಲಭ್ಯವಿದ್ದರೂ ಮಂಜೂರು ಮಾಡಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಹಲವಾರು ದೊಡ್ಡಿಗಳಿವೆ. ಒಂದೊಂದು ದೊಡ್ಡಿಯಲ್ಲಿ ಕನಿಷ್ಠ 400ರಿಂದ 500 ಜನ ವಾಸಿಸುತ್ತಿದ್ದಾರೆ. ಬಹುತೇಕ ಕುಟುಂಬಗಳು ಜಮೀನುಗಳಲ್ಲೇ ವಾಸಿಸುತ್ತಿದ್ದಾರೆ. ಯಾರಾದರೂ ಮೃತಪಟ್ಟರೆ ಜಮೀನುಗಳಲ್ಲೇ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ. ತಳವಾರದೊಡ್ಡಿ, ಮರಿಗೆಮ್ಮ ದಿಬ್ಬಿ ತಾಂಡಾ, ಗುಂಡುಲೇರದೊಡ್ಡಿ, ಕ್ಯಾದಿಗೇರದೊಡ್ಡಿ, ಮಟ್ಟಲೇರದೊಡ್ಡಿ ಕಾಳೇರದೊಡ್ಡಿ, ಜಕ್ಕಲೇರದೊಡ್ಡಿ ಸೇರಿ ಇತರೆ ದೊಡ್ಡಿಗಳು ಪಟ್ಟಣದಿಂದ ಆರೇಳು ಕಿ.ಮೀ. ಅಂತರದಲ್ಲಿವೆ. ದೊಡ್ಡಿಗಳಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬಕ್ಕೆ ಒಂದೆರಡು ಎಕರೆ ಜಮೀನಿದೆ. ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಜಮೀನಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ಪಟ್ಟಣದ ಬೂದಿ ಬಸವೇಶ್ವರ ಮಠದಲ್ಲಿರುವ ಮೇಲ್ವರ್ಗದವರಿಗೆ ಸೇರಿದ ಸ್ಮಶಾನ ಒತ್ತುವರಿ ಆಗಿದೆ ಎನ್ನಲಾಗುತ್ತಿದೆ. ಸ್ಮಶಾನ ಸುತ್ತಲೂ ಅಂಗಡಿ ಮುಂಗಟ್ಟುಗಳು ತಲೆ ಎತ್ತಿವೆ. ಸ್ಮಶಾನ ಪಕ್ಕದಲೇ ಮನೆಗಳಿದ್ದು, ಒಳಗೆ ಎಲ್ಲೆಂದರಲ್ಲಿ ಜಾಲಿಗಿಡಗಳು ಬೆಳೆದು ಅವ್ಯವಸ್ಥೆ ಆಗರವಾಗಿದೆ. ಅಂತ್ಯಸಂಸ್ಕಾರ ಮಾಡುವಾಗ ಸ್ಮಶಾನದ ಬಗ್ಗೆ ಇದ್ದ ಕಾಳಜಿ ಸಂಸ್ಕಾರ ನಂತರ ಮನೆಗೆ ಬಂದ ಮೇಲೆ ಆರೋಪದ ಕೂಗು ಮೌನವಾಗುತ್ತದೆ.

Advertisement

ಪಟ್ಟಣ ವ್ಯಾಪ್ತಿಯಲ್ಲಿರುವ ಹಲವು ಸಮುದಾಯದ ಸ್ಮಶಾನಗಳು ನಿರ್ವಹಣೆ ಕೊರತೆ ಹಿನ್ನೆಲೆ ಅವ್ಯವಸ್ಥೆ ಗೂಡಾಗಿವೆ. ಗೌತಮ ವಾರ್ಡ್‌ನಲ್ಲಿರುವ ಸ್ಮಶಾನದಲ್ಲಿ ಶವ ಸುಟ್ಟು ಹಾಕುವ ಸೌಲಭ್ಯ ಕಲ್ಪಿಸಿದ್ದು, ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದೆ. ತಿಮ್ಮಪ್ಪನಕರೆ, ಮಲ್ಲಯ್ಯ ಚರ್ಮಿ, ಸಿಪತಗೇರಾ ಸೇರಿ ಇತರೆಡೆ ಸ್ಮಶಾನಗಳಿವೆ. ಇಲ್ಲಿ ಹಿಂದುಳಿದ ಜನಾಂಗ ಇತರೆ ಸಮುದಾಯಗಳ ಶವ ಸಂಸ್ಕಾರ ಮಾಡಲಾಗುತ್ತದೆ.

ಇಲ್ಲಿನ ಸ್ಮಶಾನಗಳು ಅವ್ಯವಸ್ಥೆ ಆಗರವಾಗಿದ್ದು, ಸ್ವತ್ಛತೆ ಗಗನ ಕುಸುಮವಾಗಿದೆ. ಪಟ್ಟಣದಲ್ಲಿ 10 ಸಾವಿರಕ್ಕೂ ಅ ಧಿಕ ಮುಸ್ಲಿಮರಿದ್ದಾರೆ. ಎರಡು ಖಬರಸ್ಥಾನ ಇವೆ. ಜಾಮೀಯ ಮಸೀದ್‌ ಬಳಿ, ಗೌರಂಪೇಟೆ, ಬಸ್‌ ನಿಲ್ದಾಣ, ಡಾ|ಬಿ.ಆರ್‌. ಅಂಬೇಡ್ಕರ್‌ ವೃತ್ತ, ದರ್ಬಾರ್‌ ಹತ್ತಿರ ಇರುವ ಮುಸ್ಲಿಮರು ಮೃತಪಟ್ಟರೆ ಒಂದೂವರೆ ಕಿ.ಮೀ. ನಡೆದುಕೊಂಡು ಖಬರಸ್ಥಾನಕ್ಕೆ ಬರಬೇಕು. ಹಳ್ಳಿಗಳಲ್ಲಿ ರುದ್ರಭೂಮಿ ಬೇಡಿಕೆ ಹೆಚ್ಚಾಗಿದೆ. ಹಳ್ಳಕೊಳ್ಳ ದಾಟಿ ಶವ ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಬೇಕಾದ ಸ್ಥಿತಿ ಬಂದಿದೆ. ಹಳ್ಳಿಗಳಲ್ಲಿ ರುದ್ರಭೂಮಿ ಬೇಡಿಕೆ ಹೆಚ್ಚಿರುವ ಕಾರಣ ಯಾವುದೇ ಸಮುದಾಯಗಳ ಜನರು ಮೃತಪಟ್ಟರೆ ಶವ ಸಂಸ್ಕಾರ ಮಾಡುವುದಕ್ಕೆ ರುದ್ರಭೂಮಿ ಸೌಲಭ್ಯ ಕಲ್ಪಿಸಲು ಸ್ಥಳೀಯ ಶಾಸಕರು ಗಮನ ಹರಿಸಬೇಕು.

ಸ್ಮಶಾನಗಳ ಸ್ವತ್ಛತೆ ಜತೆ ಮೂಲಭೂತ ಸೌಲಭ್ಯಗಳು ಕಲ್ಪಿಸುವಂತೆ ಈಗಾಗಲೇ ಕೆಲ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇಲ್ಲಿನ ಸಮಸ್ಯೆ ಕುರಿತು ಹಂತ ಹಂತವಾಗಿ ಬಗೆಹರಿಸಲಾಗುತ್ತದೆ.
*ಶರಣಪ್ಪ, ಮುಖ್ಯಾಧಿಕಾರಿ, ಪುರಸಭೆ

*ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next