Advertisement

ನೀರು ಪೂರೈಸಿದವರಿಗಿಲ್ಲ ಹಣ

01:23 PM Nov 29, 2019 | Team Udayavani |

ದೇವದುರ್ಗ: ಆಗಸ್ಟ್‌ ತಿಂಗಳಲ್ಲಿ ಉಂಟಾದ ನೆರೆ ಹಾವಳಿಗೆ ಕೃಷ್ಣಾ ನದಿ ಉಕ್ಕಿ ಹರಿದ ಪರಿಣಾಮ ಪಟ್ಟಣಕ್ಕೆ ನೀರು ಪೂರೈಕೆ ಸ್ಥಗಿತವಾಗಿದ್ದರಿಂದ 15 ದಿನ ಟ್ಯಾಂಕರ್‌ ಮೂಲಕ ಪಟ್ಟಣದ ಜನತೆಗೆ ನೀರು ಪೂರೈಸಿದ ಟ್ಯಾಂಕರ್‌ ಮಾಲೀಕರಿಗೆ ಈವರೆಗೆ ಪುರಸಭೆ ಹಣ ಪಾವತಿಸದ್ದರಿಂದ ಅವರು ನಿತ್ಯ ಪುರಸಭೆಗೆ ಅಲೆದಾಡುವಂತಾಗಿದೆ.

Advertisement

ನಾರಾಯಣಪುರ ಜಲಾಶಯ ಭರ್ತಿಯಾಗಿದ್ದರಿಂದ ಕೃಷ್ಣಾನದಿಗೆ ಲಕ್ಷಾಂತರ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ಪಟ್ಟಣಕ್ಕೆ ನೀರು ಪೂರೈಸುವ ಗಾಗಲ್‌ ಬಳಿಯ ಜಾಕ್‌ ವೆಲ್‌ನಲ್ಲಿ ವಿದ್ಯುತ್‌ ಪರಿವರ್ತಕ ಸೇರಿ ಇತರೆ ಯಂತ್ರೋಪಕರಣ ದುರಸ್ತಿಗೀಡಾಗಿದ್ದವು. ಈ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸ್ಥಗಿತವಾಗಿತ್ತು. ಹೀಗಾಗಿ ಪುರಸಭೆ ಖಾಸಗಿ ವ್ಯಕ್ತಿಗಳ ಬೋರ್‌ವೆಲ್‌ನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಿದ್ದರು.

ಆದರೆ ಮೂರು ತಿಂಗಳಾದರೂ ಪುರಸಭೆ ಮುಖ್ಯಾಧಿಕಾರಿಗಳು ನೀರು ಪೂರೈಸಿದ ಟ್ಯಾಂಕರ್‌ ಮಾಲೀಕರಿಗೆ ಹಣ ಪಾವತಿಸದ್ದರಿಂದ ಅವರು ನಿತ್ಯ ಪುರಸಭೆಗೆ ಅಲೆದಾಡುತ್ತಿದ್ದಾರೆ. ಮುಖ್ಯಾಧಿಕಾರಿ ದಿನಕ್ಕೊಂದು ನೆಪ ಹೇಳಿ ಸತಾಯಿಸುತ್ತಿದ್ದಾರೆ.

40 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಿ ಜಿಲ್ಲಾಧಿಕಾರಿ ಅನುಮತಿಗೆ ಪ್ರಸ್ತಾವನೆ ಕಳಿಸಲಾಗಿದೆ. ಮೂರು ತಿಂಗಳಾದರೂ ಅನುದಾನ ಬಂದಿಲ್ಲ ಎನ್ನಲಾಗುತ್ತಿದೆ. ಇದರಿಂದ ಬೇಸತ್ತ ಟ್ಯಾಂಕರ್‌ ಮಾಲೀಕರು ಬಿಲ್‌ ಪಾವತಿಗಾಗಿ ವಾರ್ಡ್‌ಗಳ ಸದಸ್ಯರ ಬೆನ್ನತ್ತಿದ್ದಾರೆ.

ಕಚೇರಿಗೆ ಬಾರದ ಮುಖ್ಯಾಧಿಕಾರಿ: ವಾರದಲ್ಲಿ ಮೂರು ದಿನ ಮಾತ್ರ ಪುರಸಭೆಗೆ ಬರುವ ಮುಖ್ಯಾಧಿಕಾರಿ  ಉಳಿದ ದಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಿಟಿಂಗ್‌ ನೆಪಹೇಳಿ ಜಾರಿಕೊಳ್ಳುತ್ತಿದ್ದಾರೆ. ಫೋನ್‌ ಮೂಲಕ ಸಂಪರ್ಕಿಸಿದರೂ ಮುಖ್ಯಾಧಿಕಾರಿ ಕರೆ ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.

Advertisement

ಇಂದೋ, ನಾಳೆ ಎನ್ನುವ ಅಧಿಕಾರಿಗಳ ಹುಸಿ ಭರವಸೆ ಸಮಸ್ಯೆಗೆ ಕಾರಣವಾಗಿದೆ. ಮಾಲೀಕರು ಕಚೇರಿಗೆ ಬಂದಾಗ ಅಧಿಕಾರಿ ಕೈಗೆ ಸಿಗುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸುತ್ತಿಲ್ಲ. ಪುರಸಭೆಯಲ್ಲಿ ಮುಖ್ಯಾಧಿಕಾರಿ ಮತ್ತು ಆಡಳಿತ ಮಂಡಳಿ ಇಲ್ಲದೇ ಪುರಸಭೆ ಆಡಳಿತ ಜಿಡ್ಡುಗಟ್ಟಿದೆ. ಇದಕ್ಕೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಪುರಸಭೆ ಆಡಳಿತ ಹಳಿ ತಪ್ಪಿದ್ದರಿಂದ ಪಟ್ಟಣದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಮುಕ್ತಿ ಸಿಗದಾಗಿದೆ. ಪುರಸಭೆ ಸಿಬ್ಬಂದಿ, ಅಧಿಕಾರಿಗಳು ಆಡಿದ್ದೇ ಆಟವಾಗಿದೆ ಎಂದು ಕರವೇ ಮುಖಂಡ ಉಸ್ಮಾನ ಗೌರಂಪೇಟೆ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next