ನಾಗರಾಜ ತೇಲ್ಕರ್
ದೇವದುರ್ಗ: ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದ್ದ ರಿಂದ ಕಳೆದ 10-12 ದಿನಗಳಿಂದ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಕೃಷ್ಣೆ ಉಕ್ಕಿ ಹರಿಯುತ್ತಿದ್ದು, ಸೇತುವೆಗಳು ಮುಳುಗಡೆ ಆಗಿವೆ. ಇದರಿಂದಾಗಿ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಸದ್ಯಕ್ಕೆ ಬ್ರೇಕ್ ಬಿದ್ಧಂತಾಗಿದೆ.
ತಾಲೂಕಿನಲ್ಲಿ ಹರಿದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಅವ್ಯಾಹತವಾಗಿ ಮರಳು ಸಂಗ್ರಹ ಮತ್ತು ಸಾಗಾಟ ನಡೆಯುತ್ತಿತ್ತು. ಇಲ್ಲಿನ ಮರಳನ್ನು ಹೂವಿನಹೆಡಗಿ ಸೇತುವೆ ಮಾರ್ಗವಾಗಿ ಕಲಬುರಗಿ ಜಿಲ್ಲೆಗೆ ಸಾಗಿಸಲಾಗುತ್ತಿತ್ತು. ಈಗ ಹೂವಿನಹೆಡಗಿ ಸೇತುವೆ ಮುಳುಗಡೆ ಆಗಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತವಾಗಿದೆ. ಕರ್ಕಿಹಳ್ಳಿ, ಪರ್ತಾಪುರ, ಜೋಳದಹೆಡಗಿ, ಗೂಗಲ್ ಸೇರಿ ಇತರೆ ಸ್ಟಾಕ್ ಯಾರ್ಡ್ ವ್ಯಾಪ್ತಿಗೆ ನದಿ ನೀರು ನುಗ್ಗಿದೆ. ಹೀಗಾಗಿ ಟಿಪ್ಪರ್‌ಗಳ ಓಡಾಟಕ್ಕೂ ಬ್ರೇಕ್ ಬಿದ್ದಿದೆ. ಅಕ್ರಮ ಮರಳು ದಂಧೆಗೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾದರೂ ಬ್ರೇಕ್ ಬಿದ್ದಿದ್ದಿಲ್ಲ. ಈಗ ಉಕ್ಕಿ ಹರಿಯುವ ಮೂಲಕ ಕೃಷ್ಣೆಯೇ ಅಕ್ರಮ ಮರಳು ದಂಧೆಗೆ ತಾತ್ಕಾಲಿಕ ಕಡಿವಾಣ ಹಾಕಿದಂತಾಗಿದೆ.
ಕೊಪ್ಪರ, ಕರ್ಕಿಹಳ್ಳಿ, ಹೇರುಂಡಿ, ಬಾಗೂರ, ಗೂಗಲ್, ಲಿಂಗದಹಳ್ಳಿ, ಬುಂಕಲದೊಡ್ಡಿ, ಚಿಂಚೋಡಿ ಸೇರಿ ಇತರೆ ನದಿತೀರದ ಗ್ರಾಮಗಳಲ್ಲಿರುವ ಟಿಪ್ಪರ್‌ಗಳು ನಿಶ್ಯಬ್ದವಾಗಿ ನಿಂತಿವೆ. ನದಿಪಾತ್ರದ ಗ್ರಾಮಗಳಲ್ಲಿ ಅಲ್ಲಲ್ಲಿ ಮರಳು ಸಂಗ್ರಹಿಸಲಾಗಿದೆ. ಕೆಲವೆಡೆ ನದಿ ತೀರದ ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳು ಕೂಡಾ ಕೃಷ್ಣಾ ನದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರೆ, ಮತ್ತೆ ಕೆಲವೆಡೆ ಕೊಚ್ಚಿ ಹೋಗುವ ಭೀತಿ ಆವರಿಸಿದೆ. ಹೀಗಾಗಿ ತಾಲೂಕಿನ ಗ್ರಾಮಗಳಲ್ಲಿ ಬೃಹತ್ ಟಿಪ್ಪರ್‌ಗಳ ಓಡಾಟವಿಲ್ಲದೇ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮರಳು ದುಬಾರಿ: ನದಿ ತಿನದಿತೀರದ ಕೆಲ ಗ್ರಾಮಗಳ ವ್ಯಾಪ್ತಿಯ ದೂರದ ಜಮೀನಿನಲ್ಲಿ ಮರಳು ಸಂಗ್ರಹಿಸಲಾಗಿದೆ. ಬೆಳ್ಳಂಬೆಳಗ್ಗೆ ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿದೆ. ಈಗ ಕೃಷ್ಣಾ ನದಿಗೆ ಪ್ರವಾಹ ಬಂದಿದ್ದರಿಂದ ಮರಳು ಸಂಗ್ರಹ ಮತ್ತು ಸಾಗಾಟಕ್ಕೆ ತಾತ್ಕಾಲಿಕವಾಗಿ ಕಡಿವಾಣ ಬಿದ್ದಿದ್ದರಿಂದ ಮರಳಿನ ಬೆಳೆಯೂ ಅಧಿಕವಾಗಿದೆ. ಕೃಷ್ಣಾ ನದಿ ತುಂಬುವ ಪೂರ್ವದಲ್ಲಿ ಒಂದು ಟ್ರ್ಯಾಕ್ಟರ್ ಮರಳಿಗೆ 1200 ರಿಂದ 1500 ರೂ. ಇದ್ದ ಬೆಲೆ ಈಗ ಸುಮಾರು 3 ಸಾವಿರಕ್ಕೆ ತಲುಪಿದೆ ಎನ್ನಲಾಗಿದೆ. ಇದು ಬಡವರಿಗೆ ಹೊರೆಯಾಗಿ ಪರಿಣಮಿಸಿದೆ.
ರಸ್ತೆ ದುರಸ್ತಿಗೆ ಆಗ್ರಹ: ನದಿ ತೀರದ ಗ್ರಾಮಗಳಲ್ಲಿ ಮರಳು ಸಾಗಾಟದಿಂದ ರಸ್ತೆಗಳು ಹಾಳಾಗಿ ಹೋಗಿವೆ. ಕೊಪ್ಪರ, ರಾಮನಾಳ, ಯಮನಾಳ, ಲಿಂಗದಹಳ್ಳಿ, ಪರ್ತಾಪುರ, ಬಾಗೂರು, ನೀಲವಂಜಿ ಸೇರಿ ಇತರೆ ಗ್ರಾಮಗಳ ರಸ್ತೆಗಳು ವಾಹನಗಳಿರಲಿ ಜನ ಸಂಚರಿಸಲಾರದಷ್ಟು ಹದಗೆಟ್ಟಿವೆ. ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಮೌನೇಶ, ಸಿದ್ದಲಿಂಗಪ್ಪ ಆಗ್ರಹಿಸಿದ್ದಾರೆ.