ದೇವದುರ್ಗ: ತಾಲೂಕಿನ ಜಾಲಹಳ್ಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ನಿರ್ಲಕ್ಷ್ಯದಿಂದ ದಿನದಿಂದ ದಿನಕ್ಕೆ ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ಜೂಜಾಟ ಹೆಚ್ಚುತ್ತಿದ್ದು, ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಮಟ್ಕಾ: ಜಾಲಹಳ್ಳಿ ಸೇರಿ ಸುತ್ತಲಿನ ಗ್ರಾಮಗಳ ಹೊಟೇಲ್, ಪಾನ್‌ಶಾಪ್, ಕಿರಾಣಿ ಅಂಗಡಿ ಸೇರಿ ಎಲ್ಲೆಂದರಲ್ಲಿ ಮಟ್ಕಾ ನಂಬರ್ ಬರೆಯುವವರ ಸಂಖ್ಯೆ ಹೆಚ್ಚಿದೆ. ಸಂಜೆಯಾಗುತ್ತಿದ್ದಂತೆ ಮಟ್ಕಾ ದಂಧೆ ಜೋರಾಗಿ ನಡೆಯುತ್ತದೆ. ಗೌಪ್ಯವಾಗಿ ಮಟ್ಕಾ ನಂಬರ್ ಬರೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬಡವರು, ಕೂಲಿ ಕಾರ್ಮಿಕರು ದುಡಿದ ಹಣವನ್ನೆಲ್ಲ ಮಟ್ಕಾಕ್ಕೆ ಸುರಿದು ಬೀದಿಗೆ ಬರುತ್ತಿದ್ದಾರೆ. ಕುಟುಂಬಗಳು ಹಾಳಾಗುತ್ತಿವೆ. ಗ್ರಾಮದ ಮುಖಂಡರು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದರೂ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಮದ್ಯಕ್ಕೆ ದುಪ್ಪಟ್ಟು ದರ: ಸರಕಾರ ಮದ್ಯ ಮಾರಾಟ ಅಂಗಡಳಿಗೆ ಪರವಾನಗಿ ನೀಡಿದೆ. ಆದರೆ ಜಾಲಹಳ್ಳಿ, ಚಿಂಚೋಡಿ, ಕಕ್ಕಲದಿನ್ನಿ, ಅಮರಾಪುರು, ಮುಂಡರಗಿ, ಗಲಗ, ಗಾಣದಾಳ, ಯರಗುಡ್ಡ, ಸೋಮಮರಡಿ, ಬುಂಕಲದೊಡ್ಡಿ, ನೀಲವಂಜಿ, ಬಾಗೂರು ಸೇರಿ ಇತರೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ.
ಕಿರಾಣಿ ಅಂಗಡಿ, ಪಾನ್‌ಶಾಪ್, ಹೊಟೇಲ್ ಸೇರಿ ಇತರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದು, ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದ್ದರಿಂದ ಕುಡುಕರ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಇನ್ನು ಕುಟುಂಬಗಳಲ್ಲಿ ನೆಮ್ಮದಿ ಇಲ್ಲದಾಗಿದೆ. ಮದ್ಯವ್ಯಸನಿಗಳ ಅಸಭ್ಯ ವರ್ತನೆಗೆ ಮಹಿಳೆಯರು ರಾತ್ರಿ ಗ್ರಾಮಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ.
ಕಚೇರಿ ಮಾನ್ವಿಯಲ್ಲಿ: ದೇವದುರ್ಗ ಪಟ್ಟಣದಲ್ಲಿ ಅಬಕಾರಿ ಕಚೇರಿ ಇಲ್ಲ. ಅಬಕಾರಿ ಕಚೇರಿ ಮಾನ್ವಿ ತಾಲೂಕಿನಲ್ಲಿರುವುದರಿಂದ ತಾಲೂಕಿನ್ಯಾದಂತ ಅಕ್ರಮ ಮದ್ಯ ಮಾರಾಟ ಹೆಚ್ಚಿದೆ. ಅಬಕಾರಿ ಇಲಾಖೆ ಅ ಧಿಕಾರಿಗಳು ಆಗಾಗ ಪಟ್ಟಣದ ಮದ್ಯದಂಗಡಿಗಳಿಗೆ ಭೇಟಿ ನೀಡಿ ಹೋಗುತ್ತಾರೆ. ಆದರೆ ಗ್ರಾಮೀಣ ಪ್ರದೇಶದತ್ತ ತಲೆ ಹಾಕುತ್ತಿಲ್ಲ. ಪಟ್ಟಣದ ಮದ್ಯದಂಗಡಿಗಳಿಂದಲೇ ಗ್ರಾಮೀಣ ಪ್ರದೇಶಕ್ಕೆ ಮದ್ಯ ಸರಬರಾಜು ಆಗುತ್ತಿದೆ. ಅಕ್ರಮ ಮದ್ಯ ಮಾರಾಟಗಾರರು ಪಟ್ಟಣದ ಮದ್ಯದಂಗಡಿಗಳಿಂದ ವಿವಿಧ ಬ್ರ್ಯಾಂಡ್ ನ ಮದ್ಯ ತೆಗೆದುಕೊಂಡು ಹೋಗಿ ಮಾರುತ್ತಿದ್ದಾರೆ.
ಕ್ರಮಕ್ಕೆ ಆಗ್ರಹ: ಜಾಲಹಳ್ಳಿ ಸೇರಿ ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ, ಮಟ್ಕಾ ಹಾವಳಿ ತಡೆಗೆ ಕ್ರಮ ಕೈಗೊಳ್ಳುವಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇನ್ನಾದರೂ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇವುಗಳಿಗೆ ಕಡಿವಾಣ ಹಾಕಬೇಕೆಂದು ತಾಲೂಕು ರೈತ ಸಂಘದ ಅಧ್ಯಕ್ಷ ನರಸಣ್ಣ ನಾಯಕ ಜಾಲಹಳ್ಳಿ ಆಗ್ರಹಿಸಿದ್ದಾರೆ.