Advertisement

ಗಬ್ಬೂರು ಠಾಣೆಗೆ ಫಸ್ಟ್‌ ರ್‍ಯಾಂಕ್‌ ಗರಿ

12:13 PM Dec 19, 2019 | |

„ವಿಶೇಷ ವರದಿ
ದೇವದುರ್ಗ:
ಸಮೀಪದ ಗಬ್ಬೂರು ಪೊಲೀಸ್‌ ಠಾಣೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ದೇಶಕ್ಕೆ 17ನೇ ಸ್ಥಾನ ಗಳಿಸುವ ಮೂಲಕ ಜನಸ್ನೇಹಿ ಠಾಣೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಫಸ್ಟ್‌ ರ್‍ಯಾಂಕ್‌ ಪಡೆದಿದ್ದು, ಜಿಲ್ಲೆಯ ಪೊಲೀಸ್‌ ಇಲಾಖೆಗೆ ಕಿರೀಟದ ಗರಿ ಮುಡಿಗೇರಿದೆ.

Advertisement

ಪ್ರತಿವರ್ಷ ಕೇಂದ್ರ ಗೃಹ ಇಲಾಖೆ ದೇಶಾದ್ಯಂತ ಸಮೀಕ್ಷೆ ಮಾಡಿ ಟಾಪ್‌ 10 ಹಾಗೂ ಟಾಪ್‌ 20 ಶ್ರೇಣಿ ಬಿಡುಗಡೆ ಮಾಡುತ್ತದೆ. 2019-20ನೇ ಸಾಲಿನಲ್ಲಿ ಕೇಂದ್ರ ಸಚಿವ ಅಮಿತ್‌ ಷಾ ಬಿಡುಗಡೆ ಮಾಡಿದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಗಬ್ಬೂರು ಪೊಲೀಸ್‌ ಠಾಣೆ 17ನೇ ರ್‍ಯಾಂಕ್‌ ಪಡೆದಿದ್ದರೆ, ರಾಜ್ಯದಲ್ಲಿ ಟಾಪ್‌ ಒನ್‌ ಸ್ಥಾನ ಪಡೆದಿದೆ. ಇದು ಗಬ್ಬೂರು ಠಾಣೆ ಪೊಲೀಸ್‌ ಸಿಬ್ಬಂದಿ ಮಾತ್ರವಲ್ಲ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಭ್ರಮಕ್ಕೆ ಕಾರಣವಾಗಿದೆ.

ಸಾರ್ವಜನಿಕರ ಜೊತೆ ಪೊಲೀಸರ ಉತ್ತಮ ಸಂಪರ್ಕ, ಅಪರಾಧ ಪ್ರಮಾಣ, ಪೊಲೀಸ್‌ ಠಾಣೆ ಕಟ್ಟಡ, ಸಿಬ್ಬಂದಿಗಳ ಶಿಸ್ತು, ಇನ್ನಿತರ ಅಂಶಗಳನ್ನು ಪರಿಗಣಿಸಿ ವಿವಿಧ ಮಾನದಂಡಗಳನ್ನು ಸರ್ವೇಯಲ್ಲಿ ಪರಿಗಣಿಸಲಾಗುತ್ತಿದೆ. ಪೊಲೀಸ್‌ ಠಾಣೆ ಎಂದರೆ ಮಾರು ದೂರ ಹೋಗುವ ಪರಿಸ್ಥಿತಿ ಇಂದು ಬದಲಾಗಿದೆ ಎನ್ನುವುದಕ್ಕೆ ಗಬ್ಬೂರು ಠಾಣೆಯೇ ಸಾಕ್ಷಿ. ಗೃಹ ಇಲಾಖೆ ಆರಂಭಿಸಿದ ಜನಸ್ನೇಹಿ ಪೊಲೀಸ್‌ ಠಾಣೆ ಯೋಜನೆ ತಾಲೂಕಿನಲ್ಲಿ ವರ್ಕ್‌ಔಟ್‌ ಆಗಿದ್ದು, ಆಗಾಗ ನಡೆಯುವ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಸಾರ್ವಜನಿಕರು ಕೈಜೋಡಿಸುವ ಮೂಲಕ ಉತ್ತಮ ಸಂಬಂಧ  ಬೆಳೆಸಿಕೊಂಡಿದ್ದಾರೆ.

ಆಯ್ಕೆಗೆ ಮಾನದಂಡೆಗಳು ಏನು: ಕೇಂದ್ರ ಗೃಹ ಇಲಾಖೆ ಪೊಲೀಸ್‌ ಠಾಣೆಗೆ ರ್‍ಯಾಂಕ್‌ಗಳನ್ನು ನೀಡುವಾಗ ಹಲವು ಮಾನದಂಡಗಳನ್ನು ಪರಿಗಣಿಸುತ್ತದೆ. ಪೊಲೀಸರು ಸಾರ್ವಜನಿಕರೊಂದಿಗೆ ಸಂಪರ್ಕ, ಅಪರಾಧ ಪ್ರಮಾಣ, ಕ್ರೈಂ ರೇಟ್‌, ಠಾಣೆಯ ಸ್ವತ್ಛತೆ, ವಾತಾವರಣ, ಗಾರ್ಡನ್‌, ಮಹಿಳಾ ಸುರಕ್ಷತೆ, ಜನಸಂಪರ್ಕ ಸಭೆ, ಪೊಲೀಸ್‌ ಠಾಣೆ ಕಟ್ಟಡ, ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಶಿಸ್ತು, ವಸತಿ ಸೌಲಭ್ಯ, ವ್ಯಾಜ್ಯಗಳ ವಿಲೇವಾರಿ ಸೇರಿ ಹತ್ತಾರು ಅಂಶಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡಲಾಗುತ್ತಿದೆ. 2018ರ ಸಾಲಿನಲ್ಲಿ ಧಾರವಾಡ ಜಿಲ್ಲೆ ಗುಡಗೇರಿ ದೇಶದಲ್ಲಿ ಐದನೇ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

ಈ ವರ್ಷ ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್‌ ಠಾಣೆ, ವಿಜಯಪುರು ಜಿಲ್ಲೆಯ ಮನಗೂಳಿ ಪೊಲೀಸ್‌ ಠಾಣೆ, ಗದಗ ಜಿಲ್ಲೆಯ ಮುಂಡರಗಿ ಪೊಲೀಸ್‌ ಠಾಣೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಂತಿಮ ವರದಿಯಲ್ಲಿ ರಾಯಚೂರು ಜಿಲ್ಲೆಯ ಗಬ್ಬೂರು ಪೊಲೀಸ್‌ ಠಾಣೆ ರಾಜ್ಯದಲ್ಲಿ ಬೆಸ್ಟ್‌ ಠಾಣೆ ಎನ್ನುವ ರ್‍ಯಾಂಕಿಂಗ್‌ ಪಡೆದಿದೆ. ಕೇಂದ್ರ ಗೃಹ ಇಲಾಖೆಯ ರ್‍ಯಾಂಕಿಂಗ್‌, ಠಾಣೆ ಸಿಬ್ಬಂದಿ ಖುಷಿ ಇಮ್ಮಡಿಗೊಳಿಸಿದೆ.

Advertisement

ಗಬ್ಬೂರು ಪೊಲೀಸ್‌ ಠಾಣೆ ದೇಶದಲ್ಲಿ 17ನೇ ಹಾಗೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ನಮಗೆ ಹೆಮ್ಮೆ ಎನಿಸಿದೆ. ಎಸ್ಪಿ ಅವರ ಮಾರ್ಗದರ್ಶದಲ್ಲಿ ಉತ್ತಮ ಜನಸ್ನೇಹಿ ಠಾಣೆ ನಿರ್ಮಾಣ ಮಾಡಿದ್ದೇವೆ.

ಕೇಂದ್ರ ಗೃಹ ಇಲಾಖೆ ಹಲವು ಅಂಶಗಳನ್ನು ಪರಿಗಣಿಸಿ ರ್‍ಯಾಂಕಿಂಗ್‌ ನೀಡುತ್ತದೆ. ಈ ಶ್ರೇಣಿಯನ್ನು ಹೀಗೆಯೇ ಕಾಪಾಡಿಕೊಂಡು ಹೋಗುತ್ತೇವೆ.
ರಂಗಯ್ಯ,
ಪಿಎಸ್‌ಐ, ಗಬ್ಬೂರು ಪೊಲೀಸ್‌ ಠಾಣೆ

ಗಬ್ಬೂರು ಠಾಣೆಯಲ್ಲಿ
ಲಾ ಆ್ಯಂಡ್‌ ಹಾರ್ಡರ್‌
ಕಟ್ಟುನಿಟ್ಟಾಗಿ ಪಾಲನೆಯಾಗಿದ್ದು,
ಇದರಿಂದ ಅಪರಾಧ, ಕಳ್ಳತನ ಸೇರಿ
ವಿವಿಧ ಕ್ರೈಂ ಗಳು ಇಳಿಕೆಯಾಗಿವೆ.
ರಾಜ್ಯದಲ್ಲಿ ಫಸ್ಟ್‌ ಹಾಗೂ ದೇಶದಲ್ಲಿ
17ನೇ ಸ್ಥಾನ ಪಡೆದಿರುವುದು ಹೆಮ್ಮೆಯ
ವಿಷಯ. ಗಬ್ಬೂರು ಠಾಣೆ ಸಿಬ್ಬಂದಿಗೆ
ಅಭಿನಂದಿಸುವೆ.
ಡಾ| ಸಿ.ಬಿ. ವೇದಮೂರ್ತಿ,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಯಚೂರು.

Advertisement

Udayavani is now on Telegram. Click here to join our channel and stay updated with the latest news.

Next