Advertisement

ಆಧಾರ್‌ ನೋಂದಣಿಗೆ ತಪ್ಪದ ಪರದಾಟ

02:55 PM Jul 12, 2019 | Naveen |

ದೇವದುರ್ಗ: ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗೆ ಸಾರ್ವಜನಿಕರು ಇಡೀ ದಿನ ದುಡಿಮೆ, ಕೆಲಸ ಕಾರ್ಯ ಬಿಟ್ಟು ಬ್ಯಾಂಕ್‌ ಮುಂದೆ ನಿಲ್ಲುವ ಶಿಕ್ಷೆ ತಪ್ಪದಂತಾಗಿದೆ.

Advertisement

ತಾಲೂಕಿನ ಜಾಲಹಳ್ಳಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಆಧಾರ್‌ ನೋಂದಣಿ ಕೇಂದ್ರ ಇದೆ. ದಿನಕ್ಕೆ 20 ಟೋಕನ್‌ ಮಾತ್ರ ನೀಡಲಾಗುತ್ತಿದೆ. ಹೀಗಾಗಿ ನೂರಾರು ಜನ ರಾತ್ರಿಯೇ ಆಗಮಿಸಿ ಬ್ಯಾಂಕ್‌ ಎದುರು ಮಲಗಿ ಬೆಳಗ್ಗೆ ಟೋಕನ್‌ ಪಡೆಯುತ್ತಿದ್ದಾರೆ. ನಿತ್ಯ ಅಲೆದಾಡಿದರೂ ಕೆಲವರಿಗೆ ಟೋಕನ್‌ ಸಿಗುತ್ತಿಲ್ಲ. ಆಧಾರ್‌ ನೋಂದಣಿ ಆಗುತ್ತಿಲ್ಲ. ಗ್ರಾಮೀಣ ಮತ್ತು ಪಟ್ಟಣದ ಜನತೆ ತಮ್ಮ ನಿತ್ಯದ ದುಡಿಮೆ, ಕೆಲಸ ಕಾರ್ಯ ಬಿಟ್ಟು ಮಕ್ಕಳು, ಮರಿಗಳೊಂದಿಗೆ ಬ್ಯಾಂಕ್‌ ಎದುರು ಕಾಯುವಂತಾಗಿದೆ. ಇದಕ್ಕಾಗಿ ಗ್ರಾಮೀಣ ಜನತೆ ನಿತ್ಯ ನೂರಾರು ರೂ. ಬಸ್‌ಗೆ ಸುರಿಯುವಂತಾಗಿದೆ.

ಆಧಾರ್‌ ನೋಂದಣಿಗಾಗಿ ಸಾರ್ವಜನಿಕರು ಅನುಭವಿಸುತ್ತಿರುವ ಗೋಳನ್ನು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಕೇಳುವ ಸ್ಥಿತಿಯಲ್ಲಿಲ್ಲ. ನಾಲ್ಕು ಹೋಬಳಿ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಆಧಾರ್‌ ನೋಂದಣಿ ಸೌಲಭ್ಯ ಕಲ್ಪಿಸಬೇಕೆಂದು ವಿವಿಧ ಸಂಘಟನೆಗಳು ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಆದರೆ ಒಂದಿಲ್ಲೊಂದು ತಾಂತ್ರಿಕ ಸಮಸ್ಯೆ ಹೇಳುತ್ತ ಜಾರಿಕೊಳ್ಳುತ್ತಿದೆ.

ನೆಟ್ವರ್ಕ್‌ ಸಮಸ್ಯೆ: ಕೆಲವೊಮ್ಮೆ ಆಧಾರ್‌ ನೋಂದಣಿ ಸರದಿ ಬಂದರೂ ನೆಟೆವರ್ಕ್‌ ಕೈಕೊಡುತ್ತದೆ. ಹೀಗಾಗಿ ಟೋಕನ್‌ ಪಡೆದವರು ಆದಿನ ಕೆಲಸ ಆಗದಿದ್ದರೆ ಮತ್ತೇ ಮಾರನೆ ದಿನ ಬರಬೇಕು. ಸರಕಾರದ ಸೌಲಭ್ಯ ಪಡೆಯಲು, ಮಕ್ಕಳ ಶಾಲಾ ದಾಖಲಾತಿ, ಬ್ಯಾಂಕ್‌ ಖಾತೆ ತೆರೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಹೊಸದಾಗಿ ನೋಂದಣಿ, ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ಇನ್ನಿತರ ತಿದ್ದುಪಡಿಗಾಗಿ ಪರದಾಡುವಂತಾಗಿದೆ.

ದೇವದುರ್ಗದಲ್ಲೂ ತಪ್ಪದ ಪರದಾಟ: ಪಟ್ಟಣದ ಮಿನಿ ವಿಧಾನಸೌಧದ ಸರ್ವೇ ಕಚೇರಿ ಪಕ್ಕದ ಒಂದು ಕೋಣೆಯಲ್ಲಿ ಆಧಾರ್‌ ನೋಂದಣಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ದಿನಕ್ಕೆ 30 ಟೋಕನ್‌ ನೀಡುವುದರಿಂದ ಬಹುತೇಕರು ಬಂದು ವಾಪಸ್‌ ಹೋಗುವಂತ ಸ್ಥಿತಿ ಇದೆ. ಟೋಕನ್‌ ಸಿಗದೇ ಇದ್ದಾಗ ಹತ್ತಾರು ಜನರು ಗುಂಪು ಕಟ್ಟಿಕೊಂಡು ತಹಶೀಲ್ದಾರ್‌ಗೆ ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಇಂಥ ಸಮಸ್ಯೆ ಬಗ್ಗೆ ಹೆಚ್ಚು ಗಮನಹರಿಸದೇ ಇರುವುದರಿಂದ ನಿತ್ಯ ಗ್ರಾಮೀಣ ಜನರು ಆಧಾರ್‌ ನೋಂದಣಿಗಾಗಿ ಪರದಾಡುವಂತಾಗಿದೆ. ಜಿಲ್ಲಾಡಳಿತ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ರೈತ ರಾಮಪ್ಪ ಆಗ್ರಹಿಸಿದರು.

Advertisement

ದಿನಕ್ಕೆ ಕೇವಲ 20 ಟೋಕನ್‌ ಕೊಡುವುದರಿಂದ ಬಹಳ ಸಮಸ್ಯೆ ಉಂಟಾಗುತ್ತಿದೆ. ಬಹುತೇಕ ಜನರು ರಾತ್ರಿ ಬ್ಯಾಂಕ್‌ ಮುಂದೆ ಮಲಗುತ್ತಿದ್ದಾರೆ. ನಾಡಕಚೇರಿಗಳಲ್ಲಿ ಆಧಾರ್‌ ನೋಂದಣಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಮತ್ತು ತಾಲೂಕು ಆಡಳಿತ ಗಮನಹರಿಸಬೇಕು.
ನರಸಣ್ಣ ನಾಯಕ,
ಜಾಲಹಳ್ಳಿ ರೈತ ಸಂಘದ ಅಧ್ಯಕ್ಷ

ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಆಧಾರ್‌ ನೋಂದಣಿ ಕೇಂದ್ರ ಸ್ಥಾಪನೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ದಿನಕ್ಕೆ 20ರಿಂದ 30 ಟೋಕನ್‌ ನೀಡುವ ವ್ಯವಸ್ಥೆ ಮಾಡಲಾಗಿದೆ.
ಮಂಜುನಾಥ,
ತಹಶೀಲ್ದಾರ್‌ ದೇವದುರ್ಗ

Advertisement

Udayavani is now on Telegram. Click here to join our channel and stay updated with the latest news.

Next