ದೇವದುರ್ಗ: ಪಟ್ಟಣದಲ್ಲಿನ ಕಾರಾಗೃಹ ದುರಸ್ತಿಗೊಳಿಸಿ ಅಗತ್ಯ ಸೌಲಭ್ಯ ಕಲ್ಪಿಸಿದ್ದರೂ ಪುನಾರಂಭ ಮಾಡದ್ದರಿಂದ ಸಣ್ಣಪುಟ್ಟ ಪ್ರಕರಣಗಳಲ್ಲಿ ಬಂಧಿತ ಕೈದಿಗಳನ್ನು ಲಿಂಗಸುಗೂರು ಇಲ್ಲವೇ ರಾಯಚೂರು ಜೈಲಿಗೆ ಕರೆದೊಯ್ಯಬೇಕಿದೆ. ಇದರಿಂದ ಪೊಲೀಸರು ಅಲೆದಾಡುವಂತಾಗಿದೆ.
ಇಲ್ಲಿನ ಕಾರಾಗೃಹ ಶಿಥಿಲಗೊಂಡಿದ್ದರಿಂದ 40 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಕುಡಿಯುವ ನೀರು, ಬಾಗಿಲು ದುರಸ್ತಿ ಇತರೆ ಸೌಲಭ್ಯ ಕಲ್ಪಿಸಲಾಗಿದೆ. ಕಾಮಗಾರಿ ಹೊಣೆಯನ್ನು ಪಿಡಬ್ಲೂಡಿ ಇಲಾಖೆಗೆ ವಹಿಸಲಾಗಿತ್ತು. ಆದರೆ ಕೈದಿಗಳ ಸಂಖ್ಯೆ ಕೊರತೆ ಮತ್ತು ಇತರೆ ನೆಪವೊಡ್ಡಿ ಕಾರಾಗೃಹ ಆರಂಭಕ್ಕೆ ಹಿಂದೇಟು ಹಾಕಲಾಗುತ್ತಿದೆ. ಅಲ್ಲದೇ ಇಲ್ಲಿನ ಕಾರಾಗೃಹ ಸಿಬ್ಬಂದಿ, ಅಧಿಕಾರಿಗಳನ್ನು ಬೇರೆಡೆ ನಿಯೋಜನೆ ಮಾಡಲಾಗಿದೆ. ಜಿಲ್ಲಾ ಕಾರಾಗೃಹ ಅಧಿಕಾರಿಗಳು ಇಲ್ಲಿನ ಕಾರಾಗೃಹ ಆರಂಭಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ.
ಪೊಲೀಸರ ಅಲೆದಾಟ: ದೇವದುರ್ಗ ಕಾರಾಗೃಹ ಆರಂಭಿಸಲು ಹಿಂದೇಟು ಹಾಕುತ್ತಿರುವುದರಿಂದ ಕಳ್ಳತನ ಸಣ್ಣಪುಟ್ಟ ಅಪರಾಧ, ಕೊಲೆ ಮುಂತಾದ ಪ್ರಕರಣಗಳಲ್ಲಿ ಬಂಧಿಯಾಗುವ ಆರೋಪಿಗಳನ್ನು ಲಿಂಗಸುಗೂರು ಇಲ್ಲವೇ ರಾಯಚೂರು ಕಾರಾಗೃಹಕ್ಕೆ ಕಳಿಸಲಾಗುತ್ತಿದೆ. ಕೋರ್ಟ್‌ನಲ್ಲಿ ಪ್ರಕರಣ ನಡೆಯುವಾಗ ಕೈದಿಗಳನ್ನು ಪಟ್ಟಣಕ್ಕೆ ಕರೆತರಲು ಮತ್ತೇ ಆಯಾ ಜೈಲಿಗೆ ಬಿಟ್ಟು ಬರಲು ಪೊಲೀಸರು ಅಲೆದಾಡಬೇಕಿದೆ. ಅಲ್ಲದೇ ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರೂ ಅಲೆದಾಡಬೇಕಿದೆ. ಇನ್ನು ಜೈಲಿನಲ್ಲಿ ಬಂಧಿಯಾಗುವ ಕೈದಿಗಳ ಸಂಬಂಧಿಕರು ಮಾತನಾಡಿಸಿಕೊಂಡು ಬರಲು ಲಿಂಗಸುಗೂರು, ರಾಯಚೂರಿಗೆ ಅಲೆದಾಡುವಂತಾಗಿದೆ. ಇದರಿಂದ ಸಮಯ, ಹಣ ವ್ಯರ್ಥವಾಗುತ್ತಿದೆ.
ವಸತಿಗೃಹಗಳು ಖಾಲಿ: ಕಾರಾಗೃಹದಿಂದ ಸುಮಾರು ಅರ್ಧ ಕಿ.ಮೀ. ಅಂತರದಲ್ಲಿ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಸತಿಗೃಹಗಳಿವೆ. ಇವುಗಳನ್ನು 9 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಆರೇಳು ವಸತಿಗೃಹಗಳು ಇದ್ದರೂ ಒಬ್ಬರೇ ಅಧಿಕಾರಿ ವಾಸವಿದ್ದಾರೆ. ವಸತಿಗೃಹಗಳ ಸುತ್ತ ಜಾಲಿಗಿಡಗಳು ಬೆಳೆದಿವೆ. ಹಾವು, ಚೇಳು, ಇತರೆ ವಿಷಜಂತುಗಳ ವಾಸಸ್ಥಾನವಾಗಿದೆ. ಇನ್ನು ವಸತಿಗೃಹಕ್ಕೆ ಕುಡಿಯುವ ನೀರಿನ ಸೌಲಭ್ಯ, ಬೀದಿ ದೀಪಗಳ ಸೌಲಭ್ಯ ಇಲ್ಲದ್ದರಿಂದ ಈ ಪ್ರದೇಶ ಬಿಕೋ ಎನ್ನುತ್ತಿದೆ.
ಕೈದಿಗಳ ಸಂಖ್ಯೆ ಇಳಿಮುಖ: ಕೈದಿಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಇಲ್ಲಿನ ಕಾರಾಗೃಹವನ್ನು ಮೇಲಾಧಿಕಾರಿಗಳು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ ಎನ್ನಲಾಗಿದೆ. ಅಧಿಕಾರಿ ಸೇರಿ ಒಟ್ಟು 8 ಜನ ಸಿಬ್ಬಂದಿ ಇದ್ದರು. ಒಬ್ಬ ಸಿಬ್ಬಂದಿಗೆ 5ರಿಂದ 6 ಜನ ಕೈದಿಗಳು ಇರಬೇಕು. 8 ಜನ ಸಿಬ್ಬಂದಿಗೆ ತಕ್ಕಂತೆ ಇಲ್ಲಿ 40 ಜನ ಕೈದಿಗಳು ಇರಬೇಕೆಂಬ ನಿಯಮವಿದೆ. ಆದರೆ ಕೈದಿಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಜೈಲು ಆರಂಭಕ್ಕೆ ಮೇಲಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇಲ್ಲಿರುವ ಸಿಬ್ಬಂದಿಯನ್ನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಬೇರೆ ಜಿಲ್ಲೆಗಳಿಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗಿದೆ. ಆದರೆ ಜೈಲಿನಲ್ಲಿ ಕೈದಿಗಳಿರದಿದ್ದರೂ, ವಸತಿಗೃಹಗಳಲ್ಲಿ ಸಿಬ್ಬಂದಿ ಇರದಿದ್ದರೂ ಇವುಗಳ ದುರಸ್ತಿಗೆ 40 ಲಕ್ಷ ರೂ. ವ್ಯಯಿಸಿದ್ದು ವ್ಯರ್ಥವಾಗಿದೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಾರಾಗೃಹ ಆರಂಭಕ್ಕೆ ಮುಂದಾಗಬೇಕೆಂದು ದಲಿತ ಮುಖಂಡ ಆಂಜನೇಯ ಆಗ್ರಹಿಸಿದ್ದಾರೆ.
ಕೈದಿಗಳ ಸಂಖ್ಯೆ ಇಳಿಮುಖವಾದ್ದರಿಂದ ಕಾರಾಗೃಹ ಆರಂಭಿಸಿಲ್ಲ. ಇಲ್ಲಿನ ಸಿಬ್ಬಂದಿಗಳನ್ನು ಬೇರೆ ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ.
ಡಿ.ಆರ್. ಅಂದಾನಿ,
ಅಧೀಕ್ಷಕರು, ಜಿಲ್ಲಾ ಕಾರಾಗೃಹ
ಪಿಡಬ್ಲ್ಯೂಡಿ ಇಲಾಖೆಯಿಂದ 40 ಲಕ್ಷ ರೂ. ವೆಚ್ಚದಲ್ಲಿ ಕಾರಾಗೃಹ, 9 ಲಕ್ಷ ರೂ. ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹಗಳನ್ನು ದುರಸ್ತಿ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದೆ.
ಬಿ.ಬಿ. ಪಾಟೀಲ
ಪಿಡಬ್ಲೂಡಿ ಎಇಇ
ನಾಗರಾಜ ತೇಲ್ಕರ್