ದೇವದುರ್ಗ: ಕಳೆದ ಒಂದೂವರೆ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಇದೀಗ ಮೀಸಲಾತಿ ಪ್ರಕಟವಾಗಿದೆಯಾದರೂ ಕಾಂಗ್ರೆಸ್ ಮತ್ತು ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ.
ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿದೆ. ಮೂವರು ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವುದು ಅನಿವಾರ್ಯವಾಗಿದೆ. ಹೀಗಾಗಿ ಜೆಡಿಎಸ್ ಸದಸ್ಯರಿಗೆ ಬೇಡಿಕೆ ಬಂದಿದೆ. ಆದರೆ ಸದಸ್ಯರ ನಡೆ ಬಹಳ ನಿಗೂಢವಾಗಿದೆ.
ಜೆಡಿಎಸ್ ಹೈಕಮಾಂಡ್ ಸೂಚನೆಯಂತೆ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೋ ಎನ್ನುವ ಕುತೂಹಲ ಮೂಡಿಸಿದೆ. ಪುರಸಭೆ 23 ಸ್ಥಾನಗಳ ಬಲ ಹೊಂದಿದೆ. ಕಾಂಗ್ರೆಸ್ 11, ಬಿಜೆಪಿ 8, ಜೆಡಿಎಸ್ 3, ಸೇರಿ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯೆ ಎನ್ನಲಾಗುತ್ತಿದೆ. ಪುರಸಭೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಸದಸ್ಯರನ್ನು ಸೆಳೆಯಲು ತಂತ್ರ ಹೆಣೆಯುತ್ತಿದ್ದಾರೆ. ಮೀಸಲಾತಿ ಪ್ರಕಟವಾಗುವ ಮೊದಲು ನಿಮಗೆ ಬೆಂಬಲ ನೀಡುತ್ತೇವೆ ಎನ್ನುತ್ತಿದ್ದ ಜೆಡಿಎಸ್ ಸದಸ್ಯರು ಇದೀಗ ರಾಗ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್, ಬಿಜೆಪಿ ನಾಮುಂದೇ ತಾಮುಂದೇ ಎನ್ನುವ ಪೈಪೋಟಿಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ದಿನಾಂಕ ಘೋಷಣೆ ನಂತರ ಬೇಡಿಕೆ ಮತ್ತಷ್ಟು ಹೆಚ್ಚಾಗಲಿದೆ. ಜೆಡಿಎಸ್ ಹೈಕಮಾಂಡ್ ಯಾವ ಪಕ್ಷದ ಮೇಲೆ ವಿಶ್ವಾಸ ವ್ಯಕ್ತಪಡಿಸಲಿದೆ ಎನ್ನುವುದು ನಿಗೂಢವಾಗಿದೆ. ಕಾಂಗ್ರೆಸ್ ಸದಸ್ಯರು ಪಕ್ಷೇತರ ಸೇರಿ ಜೆಡಿಎಸ್ ಬೆಂಬಲಿದೊಂದಿದೆ ಅಧಿಕಾರ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ 8 ಸದಸ್ಯರು ಶಾಸಕ, ಸಂಸದ ಸೇರಿ ಜೆಡಿಎಸ್ ಬೆಂಬಲ ಪಡೆದು ಪುರಸಭೆ ಗದ್ದುಗೆ ಹಿಡಿಯಲು ತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಒಂದು ವೇಳೆ ಆಪರೇಷನ್ ಕಮಲ ನಡೆದರೂ ಆಚ್ಚರಿ ಇಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಮೂವರು ಸದಸ್ಯರು ಆಕ್ಷಾಂಕಿಗಳಿದ್ದಾರೆ. ಬಿಜೆಪಿಯಲ್ಲಿ ಒಬ್ಬ ಸದಸ್ಯೆ ಇದ್ದಾರೆ.