Advertisement

ಹತ್ತಿ ಖರೀದಿ ಕೇಂದ್ರ ಆರಂಭ

01:52 PM Dec 18, 2019 | Naveen |

ನಾಗರಾಜ ತೇಲ್ಕರ್‌

Advertisement

ದೇವದುರ್ಗ: ಕೃಷಿ ಮಾರುಕಟ್ಟೆಯಿಂದ ಪಟ್ಟಣದ ಹೊರವಲಯದಲ್ಲಿರುವ ಸಂದೀಪ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಸಿಸಿ ಕಂಪನಿ ಹತ್ತಿ ಖರೀದಿ ಕೇಂದ್ರ ಆರಂಭಿಸಿದೆ. ಸುತ್ತಲಿನ ಗ್ರಾಮಗಳ ರೈತರು ಹತ್ತಿ ಮಾರಾಟಕ್ಕೆ ತರುತ್ತಿದ್ದು, ಹತ್ತಿ ಮಾರಲು ಎರಡು ದಿನ ಕಾಯುವಂತಾಗಿದೆ.

ಪಟ್ಟಣದಲ್ಲಿ 20ಕ್ಕೂ ಹೆಚ್ಚು ಹತ್ತಿ ಜಿನ್ನಿಂಗ್‌ ಫ್ಯಾಕ್ಟರಿಗಳಿವೆ. ಆದರೆ ಒಂದೇ ಕೇಂದ್ರದಲ್ಲಿ ಹತ್ತಿ ಖರೀದಿಸುತ್ತಿರುವುದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ಸುತ್ತಲಿನ ಗ್ರಾಮಗಳಿಂದ ನಿತ್ಯ 20ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಇತರೆ ವಾಹನಗಳಲ್ಲಿ ರೈತರು ಹತ್ತಿ ತುಂಬಿಕೊಂಡು ಬರುತ್ತಿದ್ದಾರೆ. ರಸ್ತೆಯುದ್ದಕ್ಕೂ ಹತ್ತಿ ತುಂಬಿಕೊಂಡ ವಾಹನಗಳು ನಿಂತಿರುತ್ತವೆ.

ಹತ್ತಿ ಮಾರಲು ಬೇಕಾದ ದಾಖಲೆಗಳು: ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ಮಾರಲು ರೈತರು ಅಗತ್ಯ ದಾಖಲೆ ಸಲ್ಲಿಸಬೇಕಿದೆ. ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌, ಬೆಳೆ ದೃಢೀಕರಣ ಪ್ರಮಾಣಪತ್ರ ನೀಡಬೇಕು. ಸಂದೀಪ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಸಿಸಿ ಕಂಪನಿ ಹತ್ತಿ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್‌ ಹತ್ತಿಗೆ 5,500 ರೂ. ದರ ನಿಗದಿ ಮಾಡಲಾಗಿದೆ. ಖಾಸಗಿ ಜಿನ್ನಿಂಗ್‌ ಫ್ಯಾಕ್ಟರಿಗಳಲ್ಲಿ 5,100 ರೂ. ದರ ಇದೆ. ಹತ್ತಿ ಖರೀದಿ ಕೇಂದ್ರದಲ್ಲಿ ಹತ್ತಿ ಮಾರಿದ ರೈತರಿಗೆ 7ರಿಂದ 10 ದಿನದಲ್ಲಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.

ಎರಡು ದಿನ ಕಾಯಬೇಕು: ದೇವದುರ್ಗ ತಾಲೂಕು ಸೇರಿ ಶಹಾಪುರು, ಲಿಂಗಸುಗೂರು, ಸುರಪುರ ಸೇರಿದಂತೆ ಇತರೆ ತಾಲೂಕಿನಿಂದ ನೂರಾರು ರೈತರು ಹತ್ತಿ ಮಾರಲು ದೇವದುರ್ಗಕ್ಕೆ ಆಗಮಿಸುತ್ತಾರೆ. ಹತ್ತಿ ತೂಕ ಮಾಡಿ ಮಾರುವ ಪ್ರಕ್ರಿಯೆ ಮುಗಿಸಲು ಎರಡು ದಿನವಾದರೂ ಕಾಯಬೇಕು. ಹೀಗಾಗಿ ಸಂದೀಪ ಜಿನ್ನಿಂಗ್‌ ಫ್ಯಾಕ್ಟರಿ ರಸ್ತೆಯಲ್ಲಿ ಟ್ರ್ಯಾಕ್ಟರ್‌ ಗಳ ಸರದಿಯಲ್ಲಿ ನಿಲ್ಲುತ್ತಿವೆ.

Advertisement

25ಸಾವಿರ ಹೆಕ್ಟೇರ್‌ ಪ್ರದೇಶ: ಪಟ್ಟಣ ಸೇರಿ ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಈ ಬಾರಿ ರೈತರು ಹತ್ತಿ ಬಿತ್ತಿದ್ದು, ಉತ್ತಮ ಇಳುವರಿ ಬಂದಿದೆ. ಖುಷ್ಕಿ ಪ್ರದೇಶದಲ್ಲಿ 8,608 ಹೆಕ್ಟೇರ್‌, ನೀರಾವರಿ ಪ್ರದೇಶದಲ್ಲಿ 16,783 ಹೆಕ್ಟೇರ್‌ ಸೇರಿ ಒಟ್ಟು 25,391 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಎಸ್‌.ಪ್ರಿಯಾಂಕಾ ತಿಳಿಸಿದ್ದಾರೆ.

ಆಗ್ರಹ: ದೇವದುರ್ಗ ಪಟ್ಟಣದಲ್ಲಿ ಒಂದೇ ಹತ್ತಿ ಖರೀದಿ ಕೇಂದ್ರ ಆರಂಭಿಸಿದ್ದರಿಂದ ರೈತರಿಗೆ ತೊಂದರೆ ಆಗುತ್ತಿದೆ. ರೈತರು ಎರಡ್ಮೂರು ದಿನ ಕಾಯಬೇಕಿದೆ. ಈ ಬಾರಿ ಹತ್ತಿ ಉತ್ತಮ ಇಳುವರಿ ಬಂದಿದ್ದು, ದೇವದುರ್ಗ ಸೇರಿ ಸುತ್ತಲಿನ ತಾಲೂಕಿನ ರೈತರು ದೇವದುರ್ಗಕ್ಕೆ ಹತ್ತಿ ತರುತ್ತಿದ್ದಾರೆ. ಆದ್ದರಿಂದ ಎಪಿಎಂಸಿ ವತಿಯಿಂದ ಪಟ್ಟಣದ ಜಿನ್ನಿಂಗ್‌ ಫ್ಯಾಕ್ಟರಿಗಳಲ್ಲಿ ಹೆಚ್ಚುವರಿ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತ ಸಂಘದ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರದ ಸಿಸಿ ಕಂಪನಿ ವತಿಯಿಂದ ಸಂದೀಪ ಜಿನ್ನಿಂಗ್‌ ಫ್ಯಾಕ್ಟರಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ಹೆಚ್ಚುವರಿ ಕೇಂದ್ರ ಆರಂಭಿಸುವಂತೆ ರೈತರ ಬೇಡಿಕೆ ಇದೆ. ಆದರೆ ಉಳಿದ ಜಿನ್ನಿಂಗ್‌ ಫ್ಯಾಕ್ಟರಿಗಳು ಖರೀದಿ ಕೇಂದ್ರ ಆರಂಭಿಸಲು ಮುಂದೆ ಬಂದಿಲ್ಲ.
ತಿಮ್ಮಪ್ಪ ನಾಯಕ,
ಕೃಷಿ ಮಾರುಕಟ್ಟೆ ಮೇಲ್ವಿಚಾರಕ

Advertisement

Udayavani is now on Telegram. Click here to join our channel and stay updated with the latest news.

Next