Advertisement

ಮೆಣಸಿನಕಾಯಿ ಮಾರಾಟಕ್ಕೂ ಕೊರೊನಾ ಕರಿನೆರಳು

11:55 AM Apr 07, 2020 | Naveen |

ದೇವದುರ್ಗ: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಿದ ಮೆಣಿಸಿನಕಾಯಿ ಮಾರಾಟಕ್ಕೆ ಕೊರೊನಾ ಕರಿನೆರಳು ತಟ್ಟಿದೆ. ಕೃಷಿ ಮಾರುಕಟ್ಟೆಗಳ ವ್ಯಾಪಾರ ವಹಿವಾಟು ಸ್ತಬ್ಧವಾಗಿದ್ದರಿಂದ ಫಸಲನ್ನು ಕೋಲ್ಡ್‌ ಸ್ಟೋರೇಜ್‌ ಗಳಲ್ಲಿ ಸಂಗ್ರಹಿಸಲು ರೈತರು ಸಮಸ್ಯೆ ಎದುರಿಸುವಂತಾಗಿದೆ.

Advertisement

ತಾಲೂಕಿನ ಮಸರಕಲ್‌ ಗ್ರಾಮದಲ್ಲಿ 80 ಸಾವಿರ ಚೀಲಗಳ ಸಾಮರ್ಥ್ಯ ಹೊಂದಿರುವ ಕೋಲ್ಡ್‌ ಸ್ಟೋರೇಜ್‌ ಒಂದೇ ಇರುವ ಕಾರಣ ನೂರಾರು ರೈತರು ಅವರವರ ಜಮೀನಲ್ಲೇ ಮೆಣಸಿನಕಾಯಿ ಸಂಗ್ರಹಿಸಬೇಕಾದಂತ ಸಂಕಷ್ಟ ಬಂದಿದೆ. ಮೂರೂವರೆ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಮೆಣಸಿನಕಾಯಿ ಕಟಾವು ಆರಂಭದಲ್ಲಿ ಕ್ವಿಂಟಲ್‌ಗೆ 15ರಿಂದ 16ಸಾವಿರ ರೂ. ಬೆಲೆಯಿತ್ತು. ಇದೀಗ ಕ್ವಿಂಟಲ್‌ಗೆ 13 ಸಾವಿರ ರೂ. ಬೇಡಿಕೆ ಇದೆ. ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಏ.14ರ ವರೆಗೆ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಮಾರುಕಟ್ಟೆ ವ್ಯಾಪಾರ ಸಂಪೂರ್ಣ
ಸ್ತಬ್ಧವಾಗಿದೆ. ಶೇ.10ರಷ್ಟು ಮೆಣಸಿನಕಾಯಿ ಬಿಡಿಸುವುದು ಬಾಕಿ ಇದ್ದು, ಕೂಲಿಕಾರರನ್ನು ಹೊಲಗಳಿಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.

ರೈತರಿಗೆ ಸಂಕಷ್ಟ: ಬ್ಯಾಡಗಿ, ಗುಂಟೂರು ಮೆಣಸಿನಕಾಯಿಗೆ ಆರಂಭದಲ್ಲೇ ಉತ್ತಮ ಬೆಲೆ ಇತ್ತು. ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರುಕಟ್ಟೆ ವ್ಯಾಪಾರ- ವಹಿವಾಟು ಸ್ತಬ್ಧವಾಗಿದೆ. ಹೀಗಾಗಿ ಉತ್ತಮ ಇಳುವರಿ ಬಂದು, ಯೋಗ್ಯ ದರವಿದ್ದರೂ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಒಂದಿಲ್ಲೊಂದು ಸಮಸ್ಯೆ: ಉತ್ತಮ ಇಳುವರಿ ಬಂದಾಗ ಪ್ರತಿವರ್ಷ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ನಾರಾಯಣಪುರ ಬಲದಂಡೆ ನೀರಾವರಿ
ಸೌಲಭ್ಯ ದೊರೆತ ಬಳಿಕ ತಾಲೂಕು ಶೇ.80ರಷ್ಟು ನೀರಾವರಿ ಹೊಂದಿದೆ. ಕೃಷಿ ಚಟುವಟಿಕೆ ಚುರುಕಾಗಿದ್ದು, ಬೆಳೆ ಸಂಗ್ರಹಿಸಲು ಅಗತ್ಯ ಸ್ಟೋರೇಜ್‌ನ ವ್ಯವಸ್ಥೆ
ಇಲ್ಲದಂತಾಗಿದೆ. ಮಸರಕಲ್‌ ಗ್ರಾಮದಲ್ಲಿ ಒಂದೇ ಸ್ಟೋರೇಜ್‌ ಇರುವುದರಿಂದ ಮೆಣಸಿನಕಾಯಿ ಬೆಳೆ ಸಂಗ್ರಹಿಸಲು ರಾಯಚೂರು ಸಾತ್‌ಮೈಲ್‌ ಕ್ರಾಸ್‌,
ಆಸ್ಕಿಹಾಳ ಕೋಲ್ಡ್‌ ಸ್ಟೋರೇಜ್‌ಗೆ ಮೊರೆ ಹೋಗುವಂತಾಗಿದೆ. ಮಾರುಕಟ್ಟೆ ಸ್ತಬ್ಧವಾದ ಹಿನ್ನೆಲೆಯಲ್ಲಿ ಹತ್ತಾರು ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆದ
ರೈತರು ಹರಸಾಹಸ ಪಡುವಂತಾಗಿದೆ.

ಬೇಸಿಗೆ ಬಿಸಿಲಿನಲ್ಲಿ ಸಂಗ್ರಹಿಸಿದ ಮೆಣಸಿನಕಾಯಿಯನ್ನು ಕಾಯುವಂತ ಸ್ಥಿತಿ ಬಂದೊದಗಿದೆ. ಲಾಕ್‌ಡೌನ್‌ ಮುಗಿದ ನಂತರವೇ ಮೆಣಸಿನಕಾಯಿ
ಮಾರಾಟಕ್ಕೆ ವಿಘ್ನ ದೂರವಾಗಲಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಇಲ್ಲಿನ ರೈತರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು
ಮುಂದಾಗಬೇಕು ಎಂದು ರೈತ ಮುಖಂಡ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next