Advertisement

ಅಂಬೇಡ್ಕರ್‌ ಹಾಸ್ಟೇಲ್‌ ಕಾಮಗಾರಿ ಆಮೆಗತಿ

12:12 PM Jan 24, 2020 | |

ದೇವದುರ್ಗ: ತಾಲೂಕಿನ ಗಲಗ ಗ್ರಾಮದಲ್ಲಿರುವ ಪರಿಶಿಷ್ಟ ಪಂಗಡ ವರ್ಗಗಳ ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆಗೆ ಸುಣದಕಲ್‌ ಗ್ರಾಮದ ಹೊರವಲಯದಲ್ಲಿ ಸ್ವಂತ ಕಟ್ಟಡ ನಿರ್ಮಿಸುತ್ತಿದ್ದು, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಹೀಗಾಗಿ ಬಾಡಿಗೆ ಕಟ್ಟಡದಲ್ಲಿ ಹಲವು ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಾಗಿದೆ.

Advertisement

ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ನಿಲಯ ಗಲಗ ಗ್ರಾಮದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿ 6, 7, 8ನೇ ತರಗತಿ ಸೇರಿ 150 ವಿದ್ಯಾರ್ಥಿಗಳಿದ್ದಾರೆ. ಬೋಧನೆ ಮತ್ತು ವಸತಿ ಒಂದೇ ಕಟ್ಟಡದಲ್ಲಿ ನಡೆಯುತ್ತಿದೆ. ಚಿಕ್ಕ-ಚಿಕ್ಕ ಕೋಣೆಗಳಿರುವುದರಿಂದ ಶಿಕ್ಷಕರಿಗೆ ಪಾಠ ಮಾಡಲು, ಮಕ್ಕಳಿಗೆ ಕಲಿಯಲು ತೊಂದರೆ ಆಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೊಠಡಿ, ಶೌಚಾಲಯ ಸೌಲಭ್ಯವಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪರದಾಡುವಂತಾಗಿದೆ. ಬಾಲಕ, ಬಾಲಕಿಯರಿಗಾಗಿ ಪ್ರತ್ಯೇಕ ಕೊಠಡಿಗಳಿವೆ. ಬಾಲಕಿಯರಿಗೆ ಮಾತ್ರ ಶೌಚಗೃಹವಿದ್ದು, ಅವು ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಅನಿವಾರ್ಯವಾಗಿ ಬಾಲಕಿಯರು ಬಳಸುತ್ತಿದ್ದಾರೆ.

ಬಾಲಕರು ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸುವಂತಾಗಿದೆ. ಆಮೆಗತಿ ಕಾಮಗಾರಿ: ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆಯಿಂದ ಸುಣದಕಲ್ಲ ಗ್ರಾಮದ ಹೊರವಲಯದಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. 9 ಎಕರೆ 5 ಗುಂಟೆ ಜಮೀನಿನಲ್ಲಿ 16 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮಾನ್ವಿ ಮೂಲದ ಎಂ. ಈರಣ್ಣ ಎಂಬವರು ಗುತ್ತಿಗೆ ಪಡೆದಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದ್ದರೂ ಇನ್ನೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನು ಈ ಕಟ್ಟಡದಲ್ಲಿ ಪ್ರಾಚಾರ್ಯ, ಶಿಕ್ಷಕ-ಶಿಕ್ಷಕಿಯರಿಗೆ ಪ್ರತ್ಯೇಕ ಕೊಠಡಿಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. 6, 7 ಮತ್ತು 8ನೇ ತರಗತಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಊಟದ ಕೋಣೆ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್‌ ತರಬೇತಿಗೆ ಪ್ರತ್ಯೇಕ ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.

ಪೂರೈಕೆ ಆಗದ ಕಲಿಕಾ ಸಾಮಗ್ರಿ: ವಸತಿ ಶಾಲೆ ವಿದ್ಯಾರ್ಥಿಗಳಿಗೆ ಕಲಿಕೆ ಸಾಮಗ್ರಿಗಳನ್ನು ಸರ್ಕಾರವೇ ಪೂರೈಸುತ್ತದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಕಲಿಕಾ ಸಾಮಗ್ರಿ ಪೂರೈಕೆ ಆಗಿಲ್ಲ ಎನ್ನಲಾಗಿದೆ. ಹೀಗಾಗಿ ವಿದ್ಯಾರ್ಥಿಗಳೇ ಸ್ವಂತ ಖರ್ಚಿನಲ್ಲಿ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ಖರೀದಿಸಿದ್ದಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಕರವೇ ಅಧ್ಯಕ್ಷ ಬಸವರಾಜ ಗೋಪಾಳಪುರ ಆಗ್ರಹಿಸಿದ್ದಾರೆ.

Advertisement

ಕಾಯಂ ಶಿಕ್ಷಕರೇ ಇಲ್ಲ:
ಗಲಗ ಗ್ರಾಮದ ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಪ್ರಾಚಾರ್ಯ ಸೇರಿ ವಿಷಯವಾರು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರೇ ಪಾಠ ಮಾಡುತ್ತಿದ್ದಾರೆ. ಮೇಲ್ವಿಚಾರಕ ಹುದ್ದೆ ಕೂಡ ಖಾಲಿ ಇದ್ದು, ತಾತ್ಕಾಲಿಕ ಮೇಲ್ವಿಚಾರಕರೇ
ಪ್ರಾಚಾರ್ಯ ಹುದ್ದೆ ಜತೆಗೆ ವಸತಿ ನಿಲಯ ವಾರ್ಡನ್‌ ಹುದ್ದೆ ನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್‌ ಶಿಕ್ಷಕ ಹುದ್ದೆ ಭರ್ತಿ ಇದೆ.

ವಸತಿ ನಿಲಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗಿದೆ.
ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇದೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು.
ಚಿದಾನಂದ ಕುರಿ,
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಯಚೂರು

ಆದಷ್ಟು ಬೇಗನೆ ಕಟ್ಟಡ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಾಗುವುದು.
ಮಾಲತೇಶ, ಎಇ

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next