Advertisement

ನಷ್ಟದತ್ತ ಕೃಷಿ-ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌

12:15 PM Feb 10, 2020 | Naveen |

ದೇವದುರ್ಗ: ಪಟ್ಟಣದ ಮಿನಿ ವಿಧಾನಸೌಧ ಹಿಂದೆ ಇರುವ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಿಂದ ಸಾಲ ಪಡೆದವರು ಸಾಲ ಮನ್ನಾ ನಿರೀಕ್ಷೆಯಲ್ಲಿ ಸಾಲ ಮರುಪಾವತಿಗೆ ಹಿಂದೇಟು ಹಾಕುತ್ತಿರುವುದರಿಂದ ಬ್ಯಾಂಕ್‌ 10 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ.

Advertisement

ಸರ್ಕಾರದ ಯೋಜನೆಯಡಿ ಅರ್ಜಿ ಸಲ್ಲಿಸುವ ರೈತರಿಗೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ನಬಾರ್ಡ್‌ ನಿಂದ ಸಾಲ ಪಡೆದು ರೈತರಿಗೆ ಸಾಲ ವಿತರಿಸುತ್ತಿದೆ. ಪೈಪ್‌ಲೈನ್‌ ಅಳವಡಿಕೆ, ಹೈನುಗಾರಿಕೆ, ಕುರಿ ಸಾಕಾಣಿಕೆ, ಟ್ರ್ಯಾಕ್ಟರ್‌ ಸೌಲಭ್ಯ ಸೇರಿ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವ ರೈತರಿಗೆ 1 ಲಕ್ಷದಿಂದ ಆರೇಳು ಲಕ್ಷ ರೂ. ಸಾಲ ನೀಡಲಾಗಿದೆ. 128 ರೈತ ಫಲಾನುಭವಿಗಳು ಅಸಲು, ಬಡ್ಡಿ ಸಕಾಲಕ್ಕೆ ಮರು ಪಾವತಿಸುತ್ತಿದ್ದಾರೆ. 448 ರೈತರು ಸರಿಯಾಗಿ ಸಾಲ ಮರುಪಾವತಿಸದ್ದರಿಂದ ಬ್ಯಾಂಕ್‌ ನಷ್ಟ ಅನುಭವಿಸುತ್ತಿದೆ.

ಇನ್ನು ಬ್ಯಾಂಕ್‌ ಸಿಬ್ಬಂದಿ ಬಾಡಿಗೆ ವಾಹನದಲ್ಲಿ ಹಳ್ಳಿ-ಹಳ್ಳಿಗೆ ಅಲೆದು ಸಾಲ ಮರು ಪಾವತಿಗೆ ಜಾಗೃತಿ ಮೂಡಿಸುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ವಸೂಲಾಗುತ್ತಿಲ್ಲ ಎನ್ನಲಾಗಿದೆ.

ಕಟ್ಟಡ ಶಿಥಿಲ: 1970ರಲ್ಲಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಕಟ್ಟಡ ನಿರ್ಮಿಸಲಾಗಿದೆ. ಸುಮಾರು 50 ವರ್ಷದ ಈ ಕಟ್ಟಡ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಸಂಪೂರ್ಣ ಶಿಥಿಲಗೊಂಡಿದೆ. ಎರಡಂತಸ್ತಿನ ಕಟ್ಟಡ ಎಲ್ಲೆಂದರಲ್ಲಿ ಶಿಥಿಲಗೊಂಡಿದೆ.

ಮೇಲ್ಛಾವಣಿ ಸಿಮೆಂಟ್‌ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ. ಕಟ್ಟಡ ಎಲ್ಲಿ ಬೀಳುವುದೋ ಎಂಬ ಆತಂಕದಲ್ಲೇ ಸಿಬ್ಬಂದಿ ಕಾರ್ಯ ನಿರ್ವಹಿಸುವಂತಾಗಿದೆ. ಕಟ್ಟಡದಲ್ಲಿನ ಒಂದು ಕೊಠಡಿಯ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದು, ಕೊಠಡಿಗೆ ಬೀಗ ಜಡಿಯಲಾಗಿದೆ. ಉಳಿದ ಕೊಠಡಿಗಳು ಯಾವಾಗ ಬೀಳುತ್ತವೆಯೋ ಎನ್ನುವ ಭಯ ಸಿಬ್ಬಂದಿಯನ್ನು ಕಾಡುತ್ತಿದೆ.

Advertisement

ಅಧಿಕಾರಕ್ಕಾಗಿ ಪೈಪೋಟಿ: ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ಆಡಳಿತ ಮಂಡಳಿ ರಚನೆಗೆ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತದೆ ವಿನಃ ಬ್ಯಾಂಕ್‌ನ ಅಭಿವೃದ್ಧಿಗೆ ಯಾರೊಬ್ಬರೂ ಮುಂದಾಗಿಲ್ಲ.

1970ರಿಂದ ಇಲ್ಲಿಯವರೆಗೆ ಸುಮಾರು 35ರಿಂದ 40ಕ್ಕೂ ಹೆಚ್ಚು ಜನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಆದರೆ ಬ್ಯಾಂಕ್‌ ಅಭಿವೃದ್ಧಿಗೆ ಯಾರೊಬ್ಬರೂ ಮುಂದಾಗಿಲ್ಲ. ಕಟ್ಟಡ ನಿರ್ವಹಣೆಗೆ ಅನುದಾನ ತರುತ್ತಿಲ್ಲ.

ಸೌಲಭ್ಯ ಕೊರತೆ: ಇನ್ನು ಬ್ಯಾಂಕ್‌ನಲ್ಲಿ ಗ್ರಾಹಕರು, ಸಿಬ್ಬಂದಿಗೆ ಸೌಲಭ್ಯ ಕೊರತೆ ಇದೆ. ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲ. ಇಂತಹ ಸಮಸ್ಯೆಗಳ ಬಗ್ಗೆ ಕಾರ್ಯ ನಿರ್ವಹಿಸಬೇಕಿದೆ ಎನ್ನುತ್ತಾರೆ ಸಿಬ್ಬಂದಿ.

‌ಸಕಾಲಕ್ಕೆ ಸಾಲ ಮರು ಪಾವತಿ ಆಗದ್ದರಿಂದ ಬ್ಯಾಂಕ್‌ 10 ಕೋಟಿ ರೂ. ನಷ್ಟ ಅನುಭವಿಸುತ್ತಿದೆ. ಹಳ್ಳಿ ಹಳ್ಳಿಗಳಿಗೆ ಅಲೆದು ಸಾಲ ಮರುಪಾವತಿಸುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿರ್ವಹಣೆ ಕೊರತೆಯಿಂದಾಗಿ ಬ್ಯಾಂಕ್‌ ಕಟ್ಟಡ ಶಿಥಿಲಗೊಂಡಿದೆ.
ಕೆ.ಈರಣ್ಣ,
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ ವ್ಯವಸ್ಥಾಪಕ

„ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next