Advertisement

ದೇವಧರ್‌ ಟ್ರೋಫಿ ಕ್ರಿಕೆಟ್‌: ಇಂಡಿಯಾ ಸಿ 232 ರನ್‌ ಜಯಭೇರಿ

12:55 AM Nov 02, 2019 | Sriram |

ರಾಂಚಿ: ಆರಂಭಿಕರಾದ ಮಾಯಾಂಕ್‌ ಅಗರ್ವಾಲ್‌ ಮತ್ತು ಶುಭಮನ್‌ ಗಿಲ್‌ ಅವರ ಶತಕದ ಅಬ್ಬರಕ್ಕೆ ತತ್ತರಿಸಿದ ಇಂಡಿಯಾ ಎ ತಂಡ ಸತತ 2 ಸೋಲುಂಡು “ದೇವಧರ್‌ ಟ್ರೋಫಿ’ ಏಕದಿನ ಪಂದ್ಯಾವಳಿಯಿಂದ ಹೊರಬಿದ್ದಿದೆ.

Advertisement

ಶುಕ್ರವಾರ ರಾಂಚಿಯಲ್ಲಿ ನಡೆದ 2ನೇ ಮುಖಾಮುಖೀಯಲ್ಲಿ ಇಂಡಿಯಾ ಸಿ 232 ರನ್ನುಗಳ ಭಾರೀ ಅಂತರದಿಂದ ಇಂಡಿಯಾ ಎ ತಂಡಕ್ಕೆ ಸೋಲುಣಿಸಿತು. ಮೊದಲ ಪಂದ್ಯದಲ್ಲಿ ಹನುಮ ವಿಹಾರಿ ಸಾರಥ್ಯದ ಇಂಡಿಯಾ ಎ 108 ರನ್ನುಗಳಿಂದ ಇಂಡಿಯಾ ಬಿ ತಂಡಕ್ಕೆ ಶರಣಾಗಿತ್ತು.

ಶನಿವಾರದ ಅಂತಿಮ ಲೀಗ್‌ ಪಂದ್ಯದಲ್ಲಿ ಇಂಡಿಯಾ ಬಿ ಮತ್ತು ಇಂಡಿಯಾ ಸಿ ತಂಡಗಳು ಮುಖಾಮುಖೀಯಾಗಲಿವೆ. ಈ ತಂಡಗಳೇ ಸೋಮವಾರದ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿವೆ.

ಇಂಡಿಯಾ ಸಿ ಭರ್ಜರಿ ಆಟ
ಮೊದಲು ಬ್ಯಾಟಿಂಗ್‌ ನಡೆಸಿದ ಇಂಡಿಯಾ ಸಿ 3 ವಿಕೆಟಿಗೆ 366 ರನ್‌ ಪೇರಿಸಿ ಸವಾಲೊಡ್ಡಿತು. ಬಳಿಕ ಜಲಜ್‌ ಸಕ್ಸೇನಾ ದಾಳಿಗೆ ತತ್ತರಿಸಿದ ಇಂಡಿಯಾ ಎ 29.5 ಓವರ್‌ಗಳಲ್ಲಿ 134ಕ್ಕೆ ಆಲೌಟ್‌ ಆಯಿತು. ಸಕ್ಸೇನಾ 41 ರನ್ನಿಗೆ 7 ವಿಕೆಟ್‌ ಉರುಳಿಸಿದರು. ಇದು ದೇವಧರ್‌ ಟ್ರೋಫಿ ಇತಿಹಾಸದ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ.

ಟೆಸ್ಟ್‌ ಆರಂಭಕಾರ ಮಾಯಾಂಕ್‌ ಅಗರ್ವಾಲ್‌ ಮತ್ತು ನಾಯಕ ಶುಭಮನ್‌ ಗಿಲ್‌ ಅವರ ಶತಕ ಇಂಡಿಯಾ ಸಿ ಇನ್ನಿಂಗ್ಸಿನ ಆಕರ್ಷಣೆಯಾಗಿತ್ತು. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಗಿಲ್‌ 142 ಎಸೆತಗಳಿಂದ 143 ರನ್‌ ಬಾರಿಸಿದರು. ಈ ಬ್ಯಾಟಿಂಗ್‌ ಅಬ್ಬರದ ವೇಳೆ 10 ಬೌಂಡರಿ, 6 ಸಿಕ್ಸರ್‌ ಸಿಡಿಯಲ್ಪಟ್ಟಿತು.

Advertisement

ಅಗರ್ವಾಲ್‌ 111 ಎಸೆತ ಎದುರಿಸಿ 120 ರನ್‌ ಹೊಡೆದರು. ಇದರಲ್ಲಿ 15 ಫೋರ್‌, ಒಂದು ಸಿಕ್ಸರ್‌ ಸೇರಿತ್ತು. 38.3 ಓವರ್‌ ಜತೆಯಾಟ ನಡೆಸಿದ ಅಗರ್ವಾಲ್‌-ಗಿಲ್‌ ಮೊದಲ ವಿಕೆಟಿಗೆ 226 ರನ್‌ ರಾಶಿ ಹಾಕಿದರು.

ಯಾದವ್‌ ಸ್ಫೋಟಕ ಬ್ಯಾಟಿಂಗ್‌
ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಆಟಕ್ಕೆ ಮುಂದಾದ್ದರಿಂದ ತಡದ ಮೊತ್ತ 350ರ ಗಡಿ ದಾಟಿತು. ಯಾದವ್‌ ಕೇವಲ 29 ಎಸೆತಗಳಿಂದ ಅಜೇಯ 72 ರನ್‌ ಬಾರಿಸಿದರು. ಇದರಲ್ಲಿ 9 ಬೌಂಡರಿ, 4 ಸಿಕ್ಸರ್‌ ಒಳಗೊಂಡಿತ್ತು.

ಇಂಡಿಯಾ ಎ ಬ್ಯಾಟಿಂಗ್‌ ಸರದಿಯಲ್ಲಿ 31 ರನ್‌ ಮಾಡಿದ ಆರಂಭಕಾರ ದೇವದತ್ತ ಪಡಿಕ್ಕಲ್‌ ಅವರದೇ ಹೆಚ್ಚಿನ ಗಳಿಕೆ.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ಸಿ-3 ವಿಕೆಟಿಗೆ 366 (ಗಿಲ್‌ 143, ಅಗರ್ವಾಲ್‌ 120, ಯಾದವ್‌ ಅಜೇಯ 72, ವಿಹಾರಿ 48ಕ್ಕೆ 1). ಇಂಡಿಯಾ ಎ-29.5 ಓವರ್‌ಗಳಲ್ಲಿ 134 (ಪಡಿಕ್ಕಲ್‌ 31, ಭಾರ್ಗವ್‌ 30, ಇಶಾನ್‌ 25, ಸಕ್ಸೇನಾ 41ಕ್ಕೆ 7, ಪೊರೆಲ್‌ 12ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next