ಮಾನವ ಶಕ್ತಿಯ ಅಗಾಧತೆಯೂ ಇದೇ ರೀತಿ; ಪಾತಾಳ ಸೇರುವುದೋ, ಗಿರಿಯ ಗುರಿ ಮುಟ್ಟುವುದೋ ಎಂಬಂತಿದ್ದು ಸಂಘಟಿತವಾಗುವ ಮನಸ್ಸುಗಳ ಪರಿಕಲ್ಪನೆಗಳಿಗೆ ಸೀಮಿತವಾಗಿರುತ್ತದೆ. ಆಡನ್ನು ಹಿಡಿಯಲಾಗದವರು ಆನೆಯನ್ನು ಹಿಡಿದು ಪಳಗಿಸುವುದೆಂದರೆ ಇದು ಕ್ರಿಯಾತ್ಮಕ ಶಕ್ತಿಗಿಂತ ಮಾನಸಿಕ ಸ್ಥೈರ್ಯಕ್ಕೆ ನಿದರ್ಶನವಾಗುತ್ತದೆ. ದೇವದಾಸ ಶೆಟ್ಟರು ಇವೇ ತಣ್ತೀಗಳನ್ನು ಸಮಾಜದ ಅಗೋಚರ ವ್ಯವಸ್ಥೆಯಿಂದ ಹುಡುಕಿ ಕೃತಿರೂಪಕ್ಕಿಳಿಸಿ, ವೀಕ್ಷಕರು ತನ್ನ ಸುತ್ತಮುತ್ತಲಿನ ನಿಲುವು, ಧೋರಣೆಗಳನ್ನು ಪರದೆಯಾಚೆ ಗ್ರಹಿಸುವಂತೆ ರೂಪಿಸಿರುವರು. ವ್ಯಾಮೋಹಗಳೇ ಅತಿಯಾಗಿ ಬದುಕಿನ ಭದ್ರತೆಯನ್ನೇ ಕೆಡಿಸುವಂತಾಗಿ ತನ್ನತನವನ್ನು ಕಳೆದುಕೊಳ್ಳುವ ಚಿತ್ರಣಗಳು, ನಾರಿಯ ಭಾವುಕತೆಯನ್ನು ಸಂಗೀತದ ನಿನಾದಗಳಲ್ಲಿ ಹರಡಿಸುವ ತಲ್ಲಣಗಳು, ಮಮತೆ, ವಾತ್ಸಲ್ಯದ ಸಂಬಂಧಗಳು ಅರ್ಥ ಪೂರ್ಣವಾಗಿ ಅರ್ಥರಹಿತವಾಗುವ ದುರಂತಗಳನ್ನು ಇವರು ತನ್ನದೇ ಶೈಲಿಯ ರೇಖೆಗಳೊಂದಿಗೆ ಬಣ್ಣ ಹರಡಿ ಕೃತಿಕರ್ತನಾಗಿರುವುದರಿಂದ ಪ್ರದರ್ಶನದ ಕಲಾಕೃತಿಗಳು ಸಮಾಜಕ್ಕೆ ಪ್ರತಿಬಿಂಬವಾಗಿದ್ದು ವೀಕ್ಷಕ ಸಹಜವಾಗಿಯೇ ಸಮಾಜಮುಖೀಯಾಗುವಂತೆ ಪ್ರೇರೇಪಿಸುತ್ತವೆ. ಮನುಷ್ಯನ ಆಸೆಯ ಇತಿಮಿತಿಗಳಿಗೆ ಬಿಂದಿಗೆ, ಕೊಡೆ, ಚಕ್ರ, ದೀಪ, ಕೊಳಲು ಮುಂತಾದವುಗಳನ್ನು ಸಾಂಕೇತಿಕ ರೂಪವಾಗಿ ಬಳಸಿಕೊಂಡು ಕತ್ತಲೆಯಾಚೆಯ ಬೆಳಕನ್ನೂ ಶೂನ್ಯದಾಚೆಯ ಅನಂತರೂಪವನ್ನೂ ಬೀಜದಾಚೆೆಯ ಹೆಮ್ಮರವನ್ನೂ ಪ್ರತಿಕ್ರಿಯಿಸಿದ್ದಾರೆ. ಕರಾವಳಿಯ ದಸರಾಹುಲಿ, ಆನೆಯನ್ನು ಸೆರೆಹಿಡಿಯುವ ಖೆಡ್ಡಾ, ನೃತ್ಯಗಾರ, ಗೊಲ್ಲನ ಕೊಳಲಿಗೆ ಧ್ವನಿಯಾಗುವ ದನಗಳು, ಅಶ್ವಶಕ್ತಿಯ ಅಗಾಧತೆ ಇವೆಲ್ಲವೂ ದೇವದಾಸರ ವರ್ಣವಿಲಾಸಗಳಾಗಿದ್ದವು.
Advertisement
ಇವರ ಕಲಾಕೃತಿಗಳು ವ್ಯಕ್ತಿಗತ ಹಾಗೂ ವಸ್ತುಹಿತಗಳಾಗಿ ಬಹುವರ್ಣದಲ್ಲಿ ರೇಖೆಗಳ ಸಂಚಯದಲ್ಲಿ ವೈಶಿಷ್ಟ್ಯತೆಯ ಮೆಟ್ಟಿಲೇರು ತ್ತವೆ. ಇವರ ಕಲಾಕೃತಿಗಳು ಏಕವಿಷಯಕ್ಕೆ ಸೀಮಿತವಾಗಿರದೆ ಹಲವು ವಿಚಾರಧಾರೆಗಳ ಸಂಗಮವಾಗಿರುತ್ತವೆ. ದೇವದಾಸರು ರೇಖಾ ಚಿತ್ರಗಳಲ್ಲೂ ವಿಶೇಷ ಪ್ರಬುದ್ಧರಾಗಿದ್ದು ಸಾಹಿತ್ಯ-ಸಂಗೀತಗಳನ್ನೂ ಆರಾಧಿಸುವ ಕಲಾವಿದರು. ಬಾಂಬೆ ಆರ್ಟ್ ಸೊಸೈಟಿ, ಶಾಂತಿನಿಕೇತನ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕನ್ನಡ ಕಲಾಭೂಷಣ, ಕರ್ನಾಟಕ ಕಲಾರತ್ನ, ಆಳ್ವಾಸ್ ವರ್ಣ ವಿರಾಸತ್ ಪ್ರಶಸ್ತಿಗಳು ಇವರ ಕಲಾ ಪ್ರತಿಭೆಗೆ ಸಂದಿರುವ ಗೌರವಗಳು. ರಾಷ್ಟ್ರದಾದ್ಯಂತ 70 ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುವ ಹೆಗ್ಗಳಿಕೆ ಇವರದ್ದು. ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಇದು ಇವರ 5ನೇ ಏಕವ್ಯಕ್ತಿ ಕಲಾಪ್ರದರ್ಶನ. ದಿನೇಶ್ ಹೊಳ್ಳ