Advertisement

ಡೆತ್‌ನೋಟಲ್ಲಿ ಪಾಲಿಕೆ ಸದಸ್ಯ, ಮುಖಂಡರ ಹೆಸರು

11:53 AM Jan 26, 2017 | |

ಬೆಂಗಳೂರು: ಬಿಬಿಎಂಪಿ ಕಂದಾಯ ನಿರೀಕ್ಷಕ ಎಚ್‌.ಸಿ.ಶ್ರೀನಿವಾಸ್‌ ಆತ್ಮಹತ್ಯೆ ಮಾಡಿಕೊಂಡ ವಾರದ ಬಳಿಕ ಅವರ ಡೆತ್‌ನೋಟ್‌ ಪತ್ತೆಯಾಗಿದೆ. ಅದರಲ್ಲಿ ಪಾಲಿಕೆ ಸದಸ್ಯ ಡಿ.ಎಸ್‌.ರಮೇಶ್‌ ಮತ್ತು ಬಿಜೆಪಿಯ ಬೆಂಗಳೂರು ನಗರ ಘಟಕ ಅಧ್ಯಕ್ಷ ಹಾಗೂ ಪಾಲಿಕೆಯ ಮಾಜಿ ಸದಸ್ಯ ಪಿ.ಎನ್‌.ಸದಾಶಿವ ಅವರ ಹೆಸರುಗಳಿದ್ದು, ಒಟ್ಟು ನಾಲ್ವರ ವಿರುದ್ಧ ಹನುಮಂತ ನಗರ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ. 

Advertisement

ಶ್ರೀನಗರದ ಜಲಗೆರೆಯಮ್ಮ ದೇವಸ್ಥಾನ ಸಮೀಪ ವಾಸಿಸುತ್ತಿದ್ದ ಬಿಬಿಎಂಪಿ ಕಂದಾಯ ಅಧಿಕಾರಿ ಎಚ್‌.ಸಿ. ಶ್ರೀನಿವಾಸ್‌ (48) ಆತ್ಮಹತ್ಯೆಗೆ ನಾಲ್ವರು ಪ್ರಚೋದನೆ ನೀಡಿದ್ದರು ಎಂಬ ಆರೋಪದಡಿ ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.  

“ಪಾಲಿಕೆ ಸದಸ್ಯ ಡಿ.ಎಸ್‌.ರಮೇಶ್‌, ಬಿಜೆಪಿಯ ಬೆಂಗಳೂರು ನಗರ ಘಟಕ ಅಧ್ಯಕ್ಷ ಹಾಗೂ  ಪಾಲಿಕೆಯ ಮಾಜಿ ಸದಸ್ಯ ಪಿ.ಎನ್‌.ಸದಾಶಿವ, ಕಂದಾಯ ನಿರೀಕ್ಷಕ ಎಂ.ವಿ.ಸೋಮಶೇಖರ್‌ ಮತ್ತು ಅರಕೆರೆ ಉಪವಲಯ ಕಂದಾಯ ನಿರೀಕ್ಷಕ ಎನ್‌. ಪ್ರದೀಪ್‌ ಕುಮಾರ್‌ ಎಂಬುವವರು ನನ್ನ ಸಾವಿಗೆ ಕಾರಣ,” ಎಂದು ಶ್ರೀನಿವಾಸ್‌ ಡೆತ್‌ನೋಟ್‌ ಬರೆದಿಟ್ಟಿದ್ದಾರೆ ಎನ್ನಲಾಗಿದೆ.  

“ಪತ್ರದಲ್ಲಿ ಹೆಸರುಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ,” ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದಾರೆ. “ವಾರ್ಡ್‌ ನಂ.142 ಸುಂಕೇನಹಳ್ಳಿಯ ಕಂದಾಯ ನಿರೀಕ್ಷಕ  ಸೋಮಶೇಖರ್‌ ಅವರ ಹುದ್ದೆಗೆ ನನ್ನ ವರ್ಗವಾಗಿದ್ದು, ಅಧಿಕಾರ ವಹಿಸಿಕೊಂಡ ಬಳಿಕ ಪಾಲಿಕೆ ಸದಸ್ಯ ಡಿ.ಎಸ್‌.ರಮೇಶ್‌ ಬಳಿ ತೆರಳಿ ವಿಷಯ ತಿಳಿಸಿದ್ದೆ.

ಬಳಿಕ ಪಾಲಿಕೆ ಸದಸ್ಯ ಸೇರಿದಂತೆ ಉಳಿದ ನಾಲ್ವರು ಸೇರಿ ತಮ್ಮ ವಿರುದ್ಧ ಹೆಚ್ಚುವರಿ ಆಯುಕ್ತರ ಬಳಿ ಇಲ್ಲಸಲ್ಲದ ಆರೋಪ ಮಾಡಿದ್ದರು. ಅಲ್ಲದೇ, ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಸಾವಿಗೆ ಶರಣಾಗುತ್ತಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಪತ್ರದಲ್ಲಿ ಶ್ರೀನಿವಾಸ್‌ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನವರಾದ ಶ್ರೀನಿವಾಸ್‌ ಸುಮಾರು 25 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಕುಟುಂಬ ಸಮೇತ ಹಲವು ವರ್ಷಗಳಿಂದ ಶ್ರೀನಗರದಲ್ಲಿ ನೆಲೆಸಿದ್ದರು. ಜ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಸ್ಕೂಟರ್‌ನಲ್ಲಿ ಸಾವಿನ ಪತ್ರ ಪತ್ತೆ:  ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಸಿಕ್ಕಿರಲಿಲ್ಲ. ಆದರೆ, ವಿಮೆ ಅಧಿಕಾರಿಗಳು ಸೋಮವಾರ ಮೃತರ ಮನೆಗೆ ಬಂದಾಗ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಸಾವಿನ ಪತ್ರ ಪತ್ತೆಯಾಗಿದೆ. 

ಶ್ರೀನಿವಾಸ್‌ ಅವರ ಸಾವಿನ ಬಳಿಕ ಅವರು ಮಾಡಿಸಿದ್ದ ವಿಮೆಗಳ ದಾಖಲೆ ಪರಿಶೀಲನೆಗಾಗಿ ವಿಮೆ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ದಾಖಲೆಗಳನ್ನು ನೀಡುವಂತೆ ಕುಟುಂಬ ಸದಸ್ಯರ ಬಳಿ ಕೇಳಿದಾಗ ಹುಡುಕಾಟ ನಡೆಸಿದರು. ಮನೆಯಲ್ಲಿ ಸರಿಯಾದ ದಾಖಲೆಗಳು ಲಭ್ಯವಾಗದಿದ್ದಾಗ ಶ್ರೀನಿವಾಸ ಅವರ ಸ್ಕೂಟರ್‌ನ್ನು ಕುಟುಂಬ ಸದಸ್ಯರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾವಿನ ಪತ್ರ ಲಭಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. 

ಸಾವಿನ ಪತ್ರ ಪಡೆದ ಪೊಲೀಸರು ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಾವಿನ ಪತ್ರವು ಎರಡು ಪುಟಗಳಿದ್ದು, ಮೊದಲ ಪುಟದಲ್ಲಿರುವ ಮಾಹಿತಿಯೇ ಎರಡನೇ ಪುಟದಲ್ಲಿಯೂ ಇದೆ. ಮೊದಲ ಪುಟದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಅಲ್ಲದೇ, ಕೆಲವು ವ್ಯಾಕರಣ ದೋಷಗಳಿವೆ. ಆದರೆ, ಎರಡನೇ ಪುಟದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಆರೋಪಿಗಳ ಹೆಸರಲ್ಲಿಯೂ ಸ್ಪಷ್ಟತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಎಫ್ಎಸ್‌ಎಲ್‌ಗೆ ಪತ್ರ
ಮೃತ ಶ್ರೀನಿವಾಸ್‌ ಬರೆದ ಸಾವಿತ ಪತ್ರವನ್ನು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್‌) ಕಳುಹಿಸಿಕೊಟ್ಟಿದ್ದಾರೆ. ಶ್ರೀನಿವಾಸ್‌ ಅವರೇ ಸಾವಿನ ಪತ್ರ ಬರೆದಿದ್ದಾರೆಯೇ ಎಂಬುದರ ಬಗ್ಗೆ ಖಾತರಿ ಮಾಡಿಕೊಳ್ಳಲು ಪೊಲೀಸರು ಪತ್ರವನ್ನು ಎಫ್ಎಸ್‌ಎಲ್‌ಗೆ ಕಳುಹಿಸಿಕೊಟ್ಟಿದ್ದು, ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next