Advertisement

ವಿಜಯಕ್ಕೆ ಸಂಕಲ್ಪ; ರಾಜ್ಯದ ಹಲವೆಡೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

01:03 AM Jan 22, 2023 | Team Udayavani |

ಮನೆ ಮನೆಗೂ ಭೇಟಿ ನೀಡಿ ಸರಕಾರದ ಸಾಧನೆಗಳನ್ನು ತಿಳಿಸುವ ಬಿಜೆಪಿಯ ಒಂಬತ್ತು ದಿನಗಳ ವಿಜಯ ಸಂಕಲ್ಪ ಯಾತ್ರೆಗೆ ಶನಿವಾರ ಚಾಲನೆ ಸಿಕ್ಕಿದೆ. ವಿಜಯಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ತುಮಕೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕಕಾಲಕ್ಕೆ ಚಾಲನೆ ನೀಡಿದ್ದಾರೆ. ಜತೆಗೆ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಚಿಕ್ಕಬಳ್ಳಾಪುರದಲ್ಲಿ ಅರುಣ್‌ ಸಿಂಗ್‌ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿ ಕಾಂಗ್ರೆಸ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement

ವಿಜಯಪುರ
ಕಾಂಗ್ರೆಸ್‌ಗೆ ನಾಯಕತ್ವದ ಶೂನ್ಯತೆ: ನಡ್ಡಾ
ಹಣ-ತೋಳ್ಬಲ, ಅಧಿಕಾರ ದುರ್ಬಳಕೆ ಮೂಲಕ ಅಧಿಕಾರ ನಡೆಸಿದಂತೆ ಮತ್ತೆ ಚುಕ್ಕಾಣಿ ಹಿಡಿಯುವ ಕಾಂಗ್ರೆಸ್‌ ಕನಸು ಭಗ್ನಗೊಂಡಿದೆ. ದೇಶದಲ್ಲಿ ಒಡೆದು ಆಳುವ ನೀತಿಯಿಂದ ಅಧಿಕಾರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ಕಾಂಗ್ರೆಸ್‌ ಈಗ ನಾಯಕತ್ವ ಶೂನ್ಯತೆ ಅನುಭವಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ ನಡ್ಡಾ ವಾಗ್ಧಾಳಿ ನಡೆಸಿದರು.

ವಿಜಯಪುರ, ಸಿಂಧಗಿಯಲ್ಲಿ ಶನಿವಾರ ಅವರು “ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿದರು. ರಾಹುಲ್‌ ಗಾಂಧಿ ನಡೆಸಿರುವ “ಭಾರತ್‌ ಜೋಡೋ ಯಾತ್ರೆ’ ಎಲ್ಲೆಡೆ “ತೋಡೋ’ ಆಗಿದೆ ಎಂದು ವ್ಯಂಗ್ಯವಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್‌.ವೈ. ಭಾಗಿಯಾಗಿದ್ದರು.

ದಾವಣಗೆರೆ
ಸಿದ್ದುಗೆ ಕ್ಷೇತ್ರವೇ ಇಲ್ಲ:  ಪ್ರಹ್ಲಾದ್‌ ಜೋಶಿ ವಾಗ್ಧಾಳಿ
ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಜನ ಸೋಲಿಸಿದರು. ಆದರೆ ಬಾದಾಮಿ ಜನರು ಕೈ ಹಿಡಿದರು. ಈ ಬಾರಿ ಅವರೇ ಬಾದಾಮಿ ಜನರಿಗೆ ಕೈಕೊಟ್ಟಿದ್ದಾರೆ ಎಂದರು. ಕೈ ಕೊಡುವುದೇ ಸಿದ್ದರಾಮಯ್ಯ ಸ್ವಭಾವ. ಬಾದಾಮಿಯಲ್ಲಿ ಅವರು ಕೆಲಸ ಮಾಡಿಲ್ಲ. ಪಕ್ಷದ ಅಧ್ಯಕ್ಷ ಡಿ.ಕೆ.ಶಿ. ಕೂಡ ಅವರಿಗೆ ಹೊಡೆತ ಕೊಡುತ್ತಿದ್ದಾರೆ ಎಂದು ಕುಟುಕಿದರು.

ಚಿಕ್ಕಬಳ್ಳಾಪುರ
150 ಸೀಟು ಗೆಲ್ಲುವೆವು
ಜನರಿಗೆ ಡಬಲ್‌ ಎಂಜಿನ್‌ ಸರಕಾರದ ಅಗತ್ಯ ಮತ್ತು ಅಭಿವೃದ್ಧಿ ಕೆಲಸಗಳ ಮೇಲೆ ನಂಬಿಕೆ ಇದ್ದು, ಕರ್ನಾಟಕದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುವುದು ಖಚಿತ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕೇವಲ ಚಿಕ್ಕಬಳ್ಳಾಪುರದಂಥ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಅನ್ನುವ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ. ಮೋದಿ, ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ 150ಕ್ಕೂ ಅಧಿಕ ಸೀಟುಗಳೊಂದಿಗೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ತುಮಕೂರು
ಜಿಲ್ಲಾ ಮಟ್ಟಕ್ಕೂ ಪ್ರಣಾಳಿಕೆ: ಸಿಎಂ ಬೊಮ್ಮಾಯಿ
ರಾಜ್ಯ ಮತ್ತು ಪ್ರತೀ ಜಿಲ್ಲಾ ಮಟ್ಟದಲ್ಲೂ ಚುನಾವಣಾ ಪ್ರಣಾಳಿಕೆಗೆ ಸಿದ್ಧತೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ತುಮಕೂರಿನಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಅವರು, 9 ದಿನಗಳ ಈ ವಿಜಯ ಸಂಕಲ್ಪ ಅಭಿಯಾನದಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಿಂದ ಒಂದು ಲಕ್ಷ ಹೊಸ ಸದಸ್ಯರ ಸೇರ್ಪಡೆಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ಮಿಸ್‌ ಕಾಲ್‌ ಕೊಡುವ ಮೂಲಕ ಪಕ್ಷದ ಸದಸ್ಯರಾಗಿ ನೋಂದಣಿಯಾಗುವಂತೆ ಎಲ್ಲ ಕಾರ್ಯಕರ್ತರು ಜನರ ಮನವೊಲಿಸಬೇಕು. ಸದಸ್ಯ ರಾದವರ ಮನೆಗೆ ಸ್ಟಿಕರ್‌ ಅಂಟಿಸುವ ಕೆಲಸವನ್ನು ಮಾಡಬೇಕು ಎಂದರು.

ಬೆಂಗಳೂರು
ಅಪ್ಪ-ಮಗಳನ್ನು ಸೋಲಿಸಿ: ನಳಿನ್‌ ಕುಮಾರ್‌ ಕಟೀಲು
ಜಯನಗರ ಹಾಗೂ ಬಿಟಿಎಂ ಲೇಔಟ್‌ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಮಲಿಂಗಾ ರೆಡ್ಡಿ – ಸೌಮ್ಯಾ ರೆಡ್ಡಿ ಎಂಬ ಅಪ್ಪ- ಮಗಳ ರಾಜಕಾರಣ ನಿಲ್ಲಿಸಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಇಲ್ಲಿ ಕಮಲ ಅರಳುವಂತೆ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬಿಜೆಪಿಯವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಬಿ.ಕೆ. ಹರಿಪ್ರಸಾದ್‌ ಹೇಳಿದ್ದಾರೆ. ಆದರೆ ಹಿಂದೆ ಯಾರೆಲ್ಲ ದ್ವೇಷ ಕಾರಿದ್ದಾರೋ ಅವರ್ಯಾರೂ ಈಗ ಉಳಿದಿಲ್ಲ ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next