Advertisement

ಉಡುಪಿ: ಟೋಲ್‌ ಸಮಸ್ಯೆ ಇತ್ಯರ್ಥಕ್ಕೆ ನಿರ್ಣಯ

02:59 AM Feb 23, 2021 | Team Udayavani |

ಉಡುಪಿ: ಸಾಸ್ತಾನ, ಗುಂಡ್ಮಿ ಮತ್ತು ಹೆಜಮಾಡಿ ಟೋಲ್‌ ಗೇಟ್‌ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಂಸದೆ ಶೋಭಾ ಕರಂದ್ಲಾಜೆ ಅಧ್ಯಕ್ಷತೆಯಲ್ಲಿ ಸೋಮವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ತಳೆಯಲಾಗಿದೆ.

Advertisement

ಮೊದಲು ಸಾಸ್ತಾನ ಟೋಲ್‌ಗೇಟ್‌ ವಿರುದ್ಧ ಹೋರಾಡುತ್ತಿರುವ ಮುಂದಾಳುಗಳು ಮಾತನಾಡಿ, ಕೋಟ ಜಿ.ಪಂ. ಐದು ಕಿ.ಮೀ. ವ್ಯಾಪ್ತಿಯ ಸ್ಥಳೀಯರಿಗೆ ಟೋಲ್‌ನಿಂದ ವಿನಾಯಿತಿ ನೀಡಲೇಬೇಕು ಎಂದರು. ನಮಗೆ ಸರ್ವಿಸ್‌ ರಸ್ತೆಯನ್ನಾದರೂ ಮಾಡಿಕೊಡಲಿ. ಅದರಲ್ಲೇ ಸಂಚರಿಸುತ್ತೇವೆ ಎಂದರು. ಟೋಲನ್ನು ಸಚಿವಾಲಯದ ಅನುಮತಿಯಿಂದ ಆರಂಭಿಸಿದ್ದು ವಿನಾಯಿತಿ ನೀಡಿದರೆ ನಷ್ಟವಾಗುತ್ತದೆ ಎಂದು ನವಯುಗ ಟೋಲ್‌ ಗೇಟ್‌ ಮುಖ್ಯಸ್ಥ ತಿಳಿಸಿದರು.

ಶಾಸಕ ಕೆ. ರಘುಪತಿ ಭಟ್‌ ಅವರು, ಎಲ್ಲವನ್ನೂ ಕಾನೂನನ್ನು ತೋರಿಸಿ ಹೇಳುವುದು ಸರಿಯಲ್ಲ.ಕಂಪೆನಿಯವರು ಹೇಳಿದ ಸಮಯಕ್ಕೆ ಸರಿಯಾಗಿ ಮಾಡಿದ್ದೀರಾ? ಇದೊಂದು ಸ್ಥಳೀಯರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವ್ಯವಹಾರವಾಗಬೇಕು. ನೀವು ಒಪ್ಪದೆ ಇದ್ದರೆ ಜಿಲ್ಲಾಡಳಿತದಿಂದ ನಿಮಗೇಕೆ ರಕ್ಷಣೆ ಕೊಡಬೇಕು ಎಂದು ಪ್ರಶ್ನಿಸಿದರು.

ಐದು ಗ್ರಾ.ಪಂ. ವ್ಯಾಪ್ತಿಯ ವಾಹನಗಳ ಆರ್‌ಸಿ ದಾಖಲೆಗಳನ್ನು ಸಂಗ್ರಹಿಸಿ ಕೊಡಲು ಹೋರಾಟ ಸಮಿತಿಯವರು ಸಹಕರಿಸುವರು. ಇದರ ಆಧಾರದಲ್ಲಿ ರಿಯಾಯಿತಿ ಕೊಡಬೇಕು. ಹೆಚ್ಚೆಂದರೆ 1,500 ವಾಹನಗಳಿರಬಹುದು. ಇದಕ್ಕೆ ಬೇಕಾದುದನ್ನು ಜಿಲ್ಲಾಡಳಿತ ಮಾಡಿ ಕೊಡುತ್ತದೆ ಎಂದು ಸಂಸದೆ ಶೋಭಾ ತಿಳಿಸಿದರು.

ಎಂಪಿ, ಡಿಸಿ ಗರಂ!
ಸಾಸ್ತಾನ ಟೋಲ್‌ ವಿರೋಧಿ ಹೋರಾಟಗಾರರು ಆಡಿದ ಮಾತಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌, “ಯಾವ ಸಭೆಯಲ್ಲಿ ಏನು ಮಾತನಾಡಬೇಕೆಂದು ಗೊತ್ತಿಲ್ಲವೆ? ನಾವು ಸಮಸ್ಯೆಯನ್ನು ಬಗೆಹರಿಸಲು ಸಭೆ ಕರೆದಿದ್ದೇವಿ?’ ಎಂದು ಏರುದನಿಯಲ್ಲಿ ಕೇಳಿದರು. “ಎಂಪಿ ಎಲ್ಲಿ ಹೋಗಿದ್ದೀರಿ’ ಎಂದು ಕೇಳುತ್ತೀರಿ? ನಾನು ನಿಮ್ಮ ಸಮಸ್ಯೆ ಕುರಿತು ಮಾತನಾಡಿದ್ದೇನೆ’ ಎಂದು ಸಂಸದೆಯೂ ಅಸಮಾಧಾನ ವ್ಯಕ್ತ ಪಡಿಸಿದರು.

Advertisement

ಸ್ಥಳೀಯರ ನೇಮಿಸಲು ಆಗ್ರಹ
ಟೋಲ್‌ನಲ್ಲಿ ಸ್ಥಳೀಯರನ್ನು ನೇಮಿಸಿ. ನಾವು ಪ್ರತೀ ಬಾರಿ ಸಂಚರಿ ಸುವಾಗಲೂ ನವಯುಗ ಟೋಲ್‌ನಲ್ಲಿ ಮಾತ್ರ ನಮ್ಮ ಕಾರ್ಡ್‌ ನೀಡಬೇಕಾಗಿದೆ ಎಂದು ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

ಬಸ್‌ ಸಂಚಾರ ಕಡಿತ
ಹೆಜಮಾಡಿ ಟೋಲ್‌ ಸಮಸ್ಯೆಯಿಂದ ಬಸ್‌ ನಿಲುಗಡೆಯಾಗಿರುವುದನ್ನು ಶಾಸಕ ಲಾಲಾಜಿ ಮೆಂಡನ್‌ ಬೆಟ್ಟು ಮಾಡಿದರು.
ಹೆಜಮಾಡಿ ಮುಖ್ಯ ಟೋಲ್‌ಗೇಟ್‌ ಅಲ್ಲದೆ, ಮೂಲ್ಕಿಯಿಂದ ಪಡುಬಿದ್ರಿಗೆ ಬರುವಾಗ ಹೆಜಮಾಡಿ ಹಿಂದಿನ ಗ್ರಾ.ಪಂ. ರಸ್ತೆಯಲ್ಲಿಯೂ ಟೋಲ್‌ ಸಂಗ್ರಹಿಸುತ್ತಾರೆ. ಇದರಿಂದಾಗಿ ಶೇ. 75ರಷ್ಟು ಬಸ್‌ಗಳ ಟ್ರಿಪ್‌ಗ್ಳನ್ನು ಕಡಿತ ಮಾಡಲಾಗಿದೆ. ತೆರಿಗೆಗಿಂತ ಟೋಲ್‌ ಶುಲ್ಕವೇ ಜಾಸ್ತಿಯಾಗುತ್ತಿದೆ. ಎನ್‌ಐಟಿಕೆಯಿಂದ ಹೆಜಮಾಡಿಗೆ ಇರುವುದು 11 ಕಿ.ಮೀ. ಈ ನಡುವೆ ಎರಡು ಟೋಲ್‌ ಶುಲ್ಕ ತೆರಲು ಸಾಧ್ಯವೆ? ಈ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡುವುದಾದರೂ ಇದು ಸಾಧ್ಯವೆ? ಇಲ್ಲಿ ಓಡಾಡುವ ಕನಿಷ್ಠ 20 ಬಸ್ಸುಗಳಿಗೆ ರಿಯಾಯಿತಿ ಕೊಡಬೇಕು ಎಂದು ಕೆನರ ಬಸ್‌ ಮಾಲಕರ ಸಂಘದ ಪ್ರ.ಕಾರ್ಯದರ್ಶಿ ಸುರೇಶ ನಾಯಕ್‌ ಮನವಿ ಮಾಡಿದರು.

ಸ್ಥಳೀಯ ಮುಂದಾಳುಗಳು, ಬಸ್‌ ಮಾಲಕರು, ನವಯುಗ ಸಂಸ್ಥೆಯವರು ಕುಳಿತು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಿ. ಈ ಬಸ್‌ಗಳಿಗೆ ಟೋಲ್‌ನಿಂದ ಮುಕ್ತಿ ನೀಡಿ ಎಂದು ಸಭೆ ನಿರ್ಣಯಿಸಿತು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರಬಾಬು, ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಮೊದಲಾದವರು ಉಪಸ್ಥಿತರಿದ್ದರು.

ಗಡಿಗಳಲ್ಲಿ ಚೆಕ್‌ಪೋಸ್ಟ್‌
ಎರಡೂ ರಾಜ್ಯಗಳಿಂದ ಬರುವ ವರನ್ನು ಪರಿಶೀಲನೆ ನಡೆಸಲು ದ.ಕ., ಕೊಡಗು, ಉ.ಕ., ಬೆಳಗಾವಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದರು.

ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯ: ಶೋಭಾ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ ರೂಪಾಂತರ ವೈರಸ್‌ ಹರಡದಂತೆ ಮುನ್ನೆಚ್ಚರಿಕೆಯಾಗಿ ಜಿಲ್ಲೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ವಿಶೇಷವಾಗಿ ಮುಂಬಯಿಯಿಂದ ಬರುವವರ ಆರ್‌ಟಿಪಿಸಿಆರ್‌ ಪರೀಕ್ಷೆ ವರದಿಯನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇರಳ ಮತ್ತು ಮುಂಬಯಿಯಿಂದ ಬಸ್‌ನಿಂದ ಬರುವವರಲ್ಲಿ ಪರೀಕ್ಷಾ ವರದಿ ಇರಲೇಬೇಕು. ಇಲ್ಲವಾದರೆ ಬಸ್‌ ಹತ್ತಿಸಿಕೊಳ್ಳಬಾರದು ಎಂದು ಬಸ್‌ ಮಾಲಕರ ಸಭೆ ಕರೆದು ಸೂಚನೆ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಜಿಲ್ಲೆಗೆ ಬರುವವರಲ್ಲಿ ವರದಿ ಇಲ್ಲದಿದ್ದ ಪಕ್ಷದಲ್ಲಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸಿ ವರದಿ ಬರುವವರೆಗೆ ಹೋಂ ಕ್ವಾರಂಟೈನ್‌ ವಿಧಿಸಬೇಕೆಂದು ಸಲಹೆ ನೀಡಿದರು.

ಕುಂದಾಪುರದ ಕಾಮಗಾರಿ 15 ದಿನಗಳಲ್ಲಿ ಉದ್ಘಾಟನೆ
ಕುಂದಾಪುರದ ಶಾಸ್ತ್ರಿ ಸರ್ಕಲ್‌ ಕಾಮಗಾರಿ ಹತ್ತು ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ ಎಂದು ಸಂಸದೆ, ಜಿಲ್ಲಾಧಿಕಾರಿ, ನವಯುಗ ಸಂಸ್ಥೆಯವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next