Advertisement

ಎಲ್‌ಐಸಿ ಖಾಸಗೀಕರಣ ಮೂರ್ಖತನದ ನಿರ್ಣಯ

05:17 PM Dec 27, 2021 | Team Udayavani |

ಬಳ್ಳಾರಿ: ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಹಾಗೂ ಎಲ್‌ಐಸಿ ಷೇರುಗಳನ್ನು ಮಾರಾಟದ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಮೂರ್ಖತನದ ಪರಮಾವಧಿ ಎಂದು ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ, ಚಿಂತಕ ಎಂ. ಚಂದ್ರಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಗರದ ಬಿಡಿಎಎ ಸಭಾಂಗಣದಲ್ಲಿ ವಿಮಾ ನೌಕರರ ಸಂಘದಿಂದ ಎಲ್‌ಐಸಿ ಷೇರುಗಳ ಮಾರಾಟ ಪ್ರಸ್ತಾಪದ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿ ಸಿ ಹಮ್ಮಿಕೊಂಡಿದ್ದ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಂಡವಾಳ ಕೊರತೆ ಎದುರಿಸುವ ಉದ್ಯಮಗಳು ಷೇರುಗಳನ್ನು ಮಾರಾಟ ಮಾಡುವ ಮೂಲಕ ಆರ್ಥಿಕ ಸಂಕಷ್ಟದಿಂದ ಹೊರ ಬರುವ ಪ್ರಯತ್ನ ಮಾಡುತ್ತವೆ. ಸಹಜವಾಗಿ ಸರ್ಕಾರಗಳು ಸಹ ಉದ್ಯಮಗಳ ಬಲವರ್ಧನೆಗೆ ಸಹಕಾರ ನೀಡುತ್ತವೆ. ಆದರೆ ವಿಪರ್ಯಾಸ ಸಂಗತಿ ಎಂದರೆ ಬಂಡವಾಳದಿಂದ ತುಂಬಿ ತುಳುಕುತ್ತಿರುವ ಎಲ್‌ ಐಸಿಯ ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥನ್‌ ಮಾತನಾಡಿ, ಎಲ್‌ಐಸಿಯ ಷೇರು ಬಿಡುಗಡೆಯಿಂದ ಸಣ್ಣ ಹೂಡಿಕೆದಾರರಿಗೆ ಲಾಭದಾಯಕವಾಗಲಿದೆ ಎಂದು ಸರ್ಕಾರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಸೆಬಿ ನೀಡುವ ಅಂಕಿ ಅಂಶದ ಪ್ರಕಾರ ಸಣ್ಣ ಹೂಡಿಕೆದಾರರ ಪ್ರಮಾಣ ಕೇವಲ ಶೇ. 3ರಷ್ಟು ಮಾತ್ರ ಎಂದು ಹೇಳಿದೆ. ಷೇರು ಬಿಡುಗಡೆಯಿಂದ ದೊಡ್ಡ ದೊಡ್ಡ ಬಂಡವಾಳಗಾರರಿಗೆ ಅನುಕೂಲವೇ ವಿನಃ ಸಣ್ಣ ಹೂಡಿಕೆದಾರರಿಗೆ ಯಾವುದೇ ಲಾಭವಿಲ್ಲ. ಕೇಂದ್ರ ಹೇಳುತ್ತಿರುವುದು ಶುದ್ಧ ಸುಳ್ಳಿನಿಂದ ಕೂಡಿದೆ ಎಂದು ಆರೋಪಿಸಿದರು.

ವಿಮಾ ನೌಕರರ ಒಕ್ಕೂಟದ ರಾಯಚೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ರವಿ, ಅಧ್ಯಕ್ಷ ಶರಣಗೌಡ, ಬಳ್ಳಾರಿ ಶಾಖೆಯ ಪದಾ ಧಿಕಾರಿಗಳಾದ ಆರ್‌.ದತ್ತಾತ್ರೇಯ, ಡಿ.ವಿ.ಸೂರ್ಯನಾರಾಯಣ, ಪ್ರತಾಪ್‌, ಅನೀಲ್‌ಕುಮಾರ್‌, ಶಶಿಧರ್‌, ಟಿ.ಜಿ. ವಿಠuಲ್‌, ರಾಜಶೇಖರ ಬಾಬು, ಬಿ.ಹುಲುಗಪ್ಪ, ವಿಮಾ ಪ್ರತಿನಿಧಿ ಗಳ ಸಂಘದ ಅಧ್ಯಕ್ಷ ಬಿ. ಈಶ್ವರ್‌ ಇದ್ದರು.

ಎಲ್‌ಐಸಿ ಖಾಸಗೀಕರಣದ ಪ್ರಸ್ತಾಪ ಕೈಬಿಡಿ: ಎಂ. ರವಿ

Advertisement

ಸಾರ್ವಜನಿಕರು ವಿಶ್ವಾಸಗಳಿಸಿದ್ದ ಭಾರತೀಯ ಜೀವ ವಿಮಾ ನಿಗಮದಲ್ಲಿ ಶೇರುಗಳ ಮಾರಾಟ, ಖಾಸಗೀಕರಣದ ಪ್ರಸ್ತಾಪ ಕೈಬಿಡಬೇಕು ಎಂದು ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ರವಿ ಒತ್ತಾಯಿಸಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1956ರಲ್ಲಿ ಭಾರತೀಯ ಜೀವ ವಿಮಾ ಅಸ್ತಿತ್ವಕ್ಕೆ ತರಲಾಯಿತು. ಅಂದು ಕೇಂದ್ರ ಸರ್ಕಾರ ಹೂಡಿದ್ದ ಕೇವಲ 5 ಸಾವಿರ ಕೋಟಿ ರೂಗಳಿಂದ ಇಂದು 31 ಸಾವಿರ ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ಪೈಕಿ ಸುಮಾರು 29 ಸಾವಿರ ಕೋಟಿ ರೂ.ಗಳ ಲಾಭವನ್ನು ರಸ್ತೆ, ರೈಲ್ವೆ ಅಭಿವೃದ್ಧಿ ನೆಪದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

ದೇಶಾದ್ಯಂತ ಸುಮಾರು 48 ಕೋಟಿ ಪಾಲಸಿದಾರರು ಭಾರತೀಯ ಜೀವ ವಿಮೆಯಲ್ಲಿ ಹಣವನ್ನು ಹೂಡಿದ್ದಾರೆ. ಇಂಥಹ ಸಂಸ್ಥೆಯನ್ನು ಖಾಸಗೀಕರಣ, ಶೇರು ಮಾರುಕಟ್ಟೆ ಪ್ರಸ್ತಾಪ ಮಾಡಿದರೆ ಸಾರ್ವಜನಿಕರಲ್ಲಿನ ನಂಬಿಕೆ ಕಳಚಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೆಚ್ಚಳವನ್ನು ಕೈಬಿಡಬೇಕು. ವಿಮಾ ಪ್ರೀಮಿಯಂ ಮೇಲಿನ ಜಿಎಸ್‌ಟಿ ತೆರಿಗೆ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಕೂಡಲೇ ತನ್ನ ನಿರ್ಧಾರ ಕೈಬಿಡಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಬೃಹತ್‌ ಹೋರಾಟಗಳನ್ನು ರೂಪಿಸಲಾಗುವುದು ಎಂದವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ನಾಯ್ಕ, ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಾಥ, ಎಂ.ರವಿ, ಶರಣನಗೌಡ, ಟಿ.ಜಿ.ವಿಠಲ್‌, ಅನಿಲ್‌ ಕುಮಾರ್‌, ಪ್ರತಾಪ್‌, ದತ್ತಾತ್ರೇಯ, ಈಶ್ವರರಾವ್‌, ಸೂರ್ಯನಾರಾಯಣರಾವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next