Advertisement

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

11:11 PM Sep 27, 2024 | Team Udayavani |

ಉಡುಪಿ: ಜಿಲ್ಲೆಯ ಹಲವೆಡೆ ಹೆದ್ದಾರಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹೆದ್ದಾರಿ ಸಮೀಪದ ಸ್ವಂತ ಜಮೀನಿನಲ್ಲಿ ವಾಸವಿರುವವರು ಜಾಗ ಕಳೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಅಗಲಗೊಳಿಸಿದ ಬಳಿಕ ಉಳಿದಿರುವ ಜಾಗದ ಬಗ್ಗೆಯೂ ಜನರಲ್ಲಿ ಗೊಂದಲವಿದೆ.

Advertisement

ಹೆದ್ದಾರಿಯಿಂದ ಇಂತಿಷ್ಟು ಎಂದು ಮಾರ್ಜಿನ್‌ ಬಿಡುವ ನಿಯಮ ಜಾರಿಯಲ್ಲಿದ್ದು, ಹಿಂದಿನ ವರ್ಷಗಳಲ್ಲಿ ಬಹುತೇಕರು ಇದನ್ನು ಪಾಲಿಸದೆ ಸಂಕಷ್ಟ ಅನುಭವಿಸಿದ್ದಾರೆ.

ಹೆಬ್ರಿಯಿಂದ ಮಲ್ಪೆವರೆಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಜಿಲ್ಲೆಯ ಕೆಲವೆಡೆ ಲೋಕೋಪಯೋಗಿ ಇಲಾಖೆ ಸಂಬಂಧಿಸಿ ರಸ್ತೆಗಳು ನಡೆಯುತ್ತಿವೆ. ಹೆಚ್ಚು ಕಟ್ಟಡ-ಮನೆಗಳ ಪ್ರದೇಶದಲ್ಲಿ (ನಗರ ಭಾಗದಲ್ಲಿ ಅಕ್ಕಪಕ್ಕದಲ್ಲಿ ಕಟ್ಟಡಗಳು ಹೊಂದಿಕೊಂಡಿರುವಂತೆ) ನಡುರಸ್ತೆಯಿಂದ 21 ಮೀ. ಮಾರ್ಜಿನ್‌ ಬಿಡಬೇಕು. ಕಡಿಮೆ ಕಟ್ಟಡ, ಮನೆಗಳ ಪ್ರದೇಶದಲ್ಲಿ (ಗ್ರಾಮೀಣ ಭಾಗದಲ್ಲಿ) ನಡು ರಸ್ತೆಯಿಂದ 40 ಮೀ. ಮಾರ್ಜಿನ್‌ ಬಿಟ್ಟು ಕಟ್ಟಡ ಅಥವಾ ಮನೆ, ಇನ್ನಿತರ ನಿರ್ಮಾಣ ಕಾರ್ಯವನ್ನು ಮಾಡಬೇಕು. ಇದೇ ರೀತಿ ನಿಯಮಾವಳಿ ಜಿಲ್ಲಾ ಮುಖ್ಯ ರಸ್ತೆ, ಲೋಕೋಪಯೋಗಿ ಇಲಾಖೆ ರಸ್ತೆಗಳಿಗೂ ಅನ್ವಯವಾಗಲಿದೆ. ಆದರೆ ಮಾರ್ಜಿನ್‌ನಲ್ಲಿ ವ್ಯತ್ಯಾಸವಿರುತ್ತದೆ. ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಪಕ ದಾಖಲೆಗಳನ್ನು ಸಲ್ಲಿಸಿ ಎನ್‌ಒಸಿ ಪಡೆಯಬೇಕು.

ಎನ್‌ಒಸಿ ಇದ್ದರೆ ಕಟ್ಟಡ ಲೈಸೆನ್ಸ್‌
ಹೆಬ್ರಿ-ಮಲ್ಪೆ 169ಎ ಹೆದ್ದಾರಿ ಸಂಬಂಧಿಸಿದ ಜಮೀನು ಹೊಂದಿರುವ ನಾಗರಿಕರು ಹೆದ್ದಾರಿ ಬದಿಯಲ್ಲಿ ಸೂಕ್ತ ಮಾರ್ಜಿನ್‌ ಕಾಪಾಡಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಲು ಜಾಗ ಮತ್ತು ಕಟ್ಟಡದ ಡ್ರಾಯಿಂಗ್‌ ದಾಖಲೆಯನ್ನು ಮೊಬೈಲ್‌ ಸಂಖ್ಯೆ ಬರೆದು ಹೆದ್ದಾರಿ ಸಚಿವಾಲಯದ ಶೃಂಗೇರಿಯಲ್ಲಿರುವ ಉಪ ವಿಭಾಗದ ಕಚೇರಿಗೆ ಸಲ್ಲಿಸಬೇಕು. ಅಂಚೆ ಅಥವಾ ಖುದ್ದಾಗಿಯೂ ಭೇಟಿ ಕೊಟ್ಟು ದಾಖಲೆ ಸಲ್ಲಿಸಬಹುದು. ಜಿ. ಪಂ. ರಸ್ತೆ ಅಥವಾ ಲೋಕೋಪಯೋಗಿ ರಸ್ತೆಯಾದಲ್ಲಿ ಸಂಬಂಧಿಸಿದ ಜಿಲ್ಲಾ ಅಥವಾ ಉಪ ವಿಭಾಗ ಕಚೇರಿಗಳಿಗೆ ದಾಖಲೆ ಸಲ್ಲಿಸಿ ಎನ್‌ಒಸಿ ಪಡೆಯಬಹುದು. ಎನ್‌ಒಸಿ ಪಡೆದ ಅನಂತರ ನಗರ ಸ್ಥಳೀಯಾಡಳಿತ ಸಂಸ್ಥೆ ಅಥವಾ ಗ್ರಾ. ಪಂ. ಕಟ್ಟಡಕ್ಕೆ ಅರ್ಜಿ ಸಲ್ಲಿಸಿ ಲೈಸೆನ್ಸ್‌ ಮಂಜೂರು ಮಾಡಿಸಿಕೊಳ್ಳಬೇಕು. ಎನ್‌ಎಚ್‌ 66 ಕುಂದಾಪುರ-ಹೆಜಮಾಡಿವರೆಗೆ ಯೋಜನಾ ನಿರ್ದೇಶಕರು, ಹೆದ್ದಾರಿ ಪ್ರಾಧಿಕಾರ ಮಂಗಳೂರು ಕಚೇರಿ, ಕುಂದಾಪುರದಿಂದ ಕಾರವಾರದವರೆಗೆ ಯೋಜನಾ ನಿರ್ದೇಶಕರು, ಹೆದ್ದಾರಿ ಪ್ರಾಧಿಕಾರ ಕಾರವಾರ ಕಚೇರಿ ಅವರಿಂದ ಎನ್‌ಒಸಿ ಪಡೆಯಬೇಕು. ಎಲ್ಲ ರಾ.ಹೆ.ಗಳಿಗೆ ಈ ಮಾರ್ಜಿನ್‌ ನೀತಿ ಅನ್ವಯವಾಗಲಿದೆ.

ಮಾರ್ಜಿನ್‌ ವ್ಯಾಪ್ತಿಯ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್‌, ಸಣ್ಣಪುಟ್ಟ ಗಿಡಗಳನ್ನು ಬೆಳೆಸಬಹುದು. ಆದರೆ ಶಾಶ್ವತ ಕಟ್ಟಡ ನಿರ್ಮಾಣ ಮುಂತಾದವುಗಳನ್ನು ಮಾಡುವಂತಿಲ್ಲ.

Advertisement

ರೋಡ್‌ ಮಾರ್ಜಿನ್‌ ನಿಯಮಾವಳಿ ಯಾಕೆ?
ರಸ್ತೆ ಬದಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವ ಬಹುತೇಕರು ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಎನ್‌ಒಸಿ ಪಡೆಯದೆ ಸ್ಥಳೀಯಾಡಳಿತ ಸಂಸ್ಥೆ ಅಥವಾ ಗ್ರಾ. ಪಂ. ಗಳಿಂದ ಲೈಸೆನ್ಸ್‌ ಪಡೆದಿದ್ದರೂ, ಕೆಲವರಿಗೆ ಕಾನೂನಾತ್ಮಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೆ ಕೆಲವರು ಈ ಸಮಸ್ಯೆಗೆ ಸಿಲುಕಿದ್ದಾರೆ. ಮುಖ್ಯವಾಗಿ ಸುರಕ್ಷೆ, ಪಾರ್ಕಿಂಗ್‌ ಮತ್ತು ಮುಂದಿನ ಹಂತದಲ್ಲಿ ಹೆದ್ದಾರಿ ಅಗಲಗೊಳಿಸುವ ಯೋಜನೆಯ ಒಂದು ಭಾಗವಾಗಿಯೂ ಈ ಮಾರ್ಜಿನ್‌ ನಿಯಮಾ ವಳಿಯನ್ನು ರೂಪಿಸಲಾಗಿದೆ ಎಂದು ಹೆದ್ದಾರಿ ಎಂಜಿನಿಯರ್‌ಗಳ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next