Advertisement

Prajwal Revanna Case ಸಹಾಯವಾಣಿ ಇದ್ದರೂ ದೂರಿಗೆ ನಕಾರ!

12:58 AM Sep 16, 2024 | Team Udayavani |

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ವೈರಲ್‌ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತೆರೆದಿದ್ದ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಸಂತ್ರಸ್ತೆಯರು ಹಿಂದೇಟು ಹಾಕಿದ್ದಾರೆ.

Advertisement

ಹತ್ತಾರು ಮಹಿಳೆ ಯರ ಜತೆಗಿರುವ ನೂರಾರು ಖಾಸಗಿ ವೀಡಿಯೋ ವೈರಲ್‌ ಆಗಿರುವ ಆರೋಪ ಕೇಳಿ ಬಂದಿದ್ದರೂ ಪ್ರಜ್ವಲ್‌ ವಿರುದ್ಧ ಇದುವರೆಗೆ ದೂರು ನೀಡಿದ್ದು ಒಟ್ಟು ಕೇವಲ ನಾಲ್ವರು ಮಹಿಳೆಯರು ಮಾತ್ರ!

ಎಸ್‌ಐಟಿ ತೆರೆದಿದ್ದ ಸಹಾಯವಾಣಿಗೆ ಮೊದಲ ಒಂದು ವಾರದಲ್ಲಿ ಮೇಲಿಂದ ಮೇಲೆ ಕರೆಗಳು ಬರಲಾರಂಭಿಸಿದ್ದು, ಸಲಹೆ ನೀಡಲಷ್ಟೇ ಸೀಮಿತವಾಗಿತ್ತು. ಇತ್ತ ತನಿಖಾಧಿಕಾರಿಗಳು ನಿರ್ಭೀತಿಯಿಂದ ದೂರು ನೀಡಿ ಎಂದ ಕೂಡಲೇ ಅತ್ತ ಕರೆ ಕಡಿತಗೊಳಿಸುತ್ತಿದ್ದರು. ಸಹಾಯವಾಣಿ ಮೂಲಕ ಇದುವರೆಗೆ ಓರ್ವ ಮಹಿಳೆ ಯಷ್ಟೇ ಪ್ರಜ್ವಲ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ದೂರು ನೀಡಿದ್ದಾರೆ.

ಸಹಾಯವಾಣಿಯೂ ಸ್ವಿಚ್‌ ಆಫ್!
ನೂರಾರು ಅಶ್ಲೀಲ ವೀಡಿಯೋಗಳು ವೈರಲ್‌ ಆಗಿವೆ ಎಂಬ ಸುದ್ದಿ ಬಿರುಗಾಳಿಯಂತೆ ಹರಿದಾಡಿದರೂ ಇದುವರೆಗೆ ಕೇವಲ ನಾಲ್ವರು ಮಹಿಳೆಯರಷ್ಟೇ ಪ್ರಜ್ವಲ್‌ ವಿರುದ್ಧ ಕೊಟ್ಟ ದೂರುಗಳ ಆಧಾರದಲ್ಲಿ 4 ಪ್ರತ್ಯೇಕ ಎಫ್ಐಆರ್‌ ದಾಖಲಾಗಿವೆ. ಸದ್ಯ ಸಹಾಯವಾಣಿ ನಂಬರ್‌ ಕೂಡ ಸ್ವಿಚ್‌ ಆಫ್ ಆಗಿದೆ.

ತನಿಖಾಧಿಕಾರಿಗಳು ಹತ್ತಾರು ಮಹಿಳೆಯರು ದೂರು ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಮುಜುಗರಕ್ಕೊಳಗಾಗಿ ದೂರು ನೀಡದಿದ್ದಾಗ ಸ್ವತಃ ಎಸ್‌ಐಟಿ ತನಿಖಾಧಿಕಾರಿಗಳೇ ವೀಡಿಯೋದಲ್ಲಿರುವ ಮಹಿಳೆಯರ ಮುಖಚಹರೆ ಪತ್ತೆ ಹಚ್ಚಿ ಗೌಪ್ಯವಾಗಿ ಸಂಪರ್ಕಿಸಿ ಪ್ರಶ್ನಿಸಲು ಮುಂದಾಗಿದ್ದರು. ಇನ್ನು ಕೆಲವು ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆಯರಿಗೆ ನೋಟಿಸ್‌ ಕಳುಹಿಸಲಾಗಿತ್ತು. ಆದರೆ ಈ ಪೈಕಿ ಬಹುತೇಕ ಮಹಿಳೆಯರು ತಾವು ಸ್ವ ಇಚ್ಛೆಯಿಂದಲೇ ಲೈಂಗಿಕ ಸಂಪರ್ಕ ಹೊಂದಿರುವುದಾಗಿ ಹೇಳಿ ಪ್ರಕರಣದಿಂದ ನುಣುಚಿಕೊಂಡು ತಮ್ಮ ಹೆಸರು ಮುನ್ನೆಲೆಗೆ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಇನ್ನು ಕೆಲವು ಮಹಿಳೆಯರು ಮುಜುಗರಕ್ಕೆ ಒಳಗಾಗಿ ತನಿಖಾಧಿಕಾರಿಗಳ ಮುಂದೆ ದಯವಿಟ್ಟು ನಮ್ಮ ಬಳಿ ಬರಬೇಡಿ ಎಂಬಿತ್ಯಾದಿ ಹೇಳಿಕೆ ಕೊಟ್ಟು ಪ್ರಕರಣದಿಂದ ದೂರ ಉಳಿದಿದ್ದಾರೆ ಎಂದು ತಿಳಿದು ಬಂದಿದೆ.

Advertisement

4ನೇ ಪ್ರಕರಣದ
ತನಿಖೆ ಯಾವ ಹಂತದಲ್ಲಿದೆ?
ಪ್ರಜ್ವಲ್‌ ಲೈಂಗಿಕ ಕಿರುಕುಳ ನೀಡಿರುವುದಾಗಿ ಸಹಾಯವಾಣಿ ಮೂಲಕ ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿಯು ಐಪಿಸಿ ಸೆಕ್ಷನ್‌ 354ರಡಿ ದಾಖಲಿಸಿಕೊಂಡ ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವ ವೀಡಿಯೋ, ಸಂತ್ರಸ್ತೆಯ ಹೇಳಿಕೆ, ಸಿಡಿಆರ್‌ ಮೂಲಕ ಆಕೆಯ ಜತೆಗೆ ಮೊಬೈಲ್‌ನಲ್ಲಿ ನಡೆಸಿ ರುವ ಸಂಭಾಷಣೆ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ಈ ಪ್ರಕರಣದಲ್ಲೂ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ. ಒಂದೇ ಅಶ್ಲೀಲ ವೀಡಿಯೋದ ಹಲವು ತುಣುಕು ವೈರಲ್‌ ಮಾಡಿರುವ ಆರೋಪವೂ ಕೇಳಿಬಂದಿದೆ. ಇದನ್ನು ಹೊರತುಪಡಿಸಿ ವೀಡಿಯೋದಲ್ಲಿದ್ದಾರೆ ಎನ್ನಲಾದ ಬಹುತೇಕ ಮಹಿಳೆಯರು ದೂರು ನೀಡದ ಹಿನ್ನೆಲೆಯಲ್ಲಿ ವೈರಲ್‌ ಆಗಿರುವ ಇತರ ಅಶ್ಲೀಲ ವೀಡಿಯೋ ಗಳು ಗಣನೆಗೆ ಬರುವುದಿಲ್ಲ. ಹೀಗಾಗಿ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ.

“ಹಾಸನದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯ ಕಲೆ ಹಾಕಿ ತನಿಖೆ ನಡೆಸಿದ್ದೇವೆ. ಅಶ್ಲೀಲ ವೀಡಿಯೋ ಸೆರೆಹಿಡಿದಿದ್ದಾರೆ ಎನ್ನಲಾದ ನೈಜ ಮೊಬೈಲ್‌ ಪತ್ತೆಯಾಗಿಲ್ಲ. ಸಹಾಯವಾಣಿಗೆ ಆರಂಭದಲ್ಲಿ ಕರೆಗಳು ಬಂದಿದ್ದವು.”
-ಬಿ.ಕೆ. ಸಿಂಗ್‌, ಎಸ್‌ಐಟಿ ತಂಡದ ಮುಖ್ಯಸ್ಥ

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next