Advertisement

ಪರಿಸರಸ್ನೇಹಿ ಗಣೇಶೋತ್ಸವಕ್ಕೆ ಸಂಕಲ್ಪ

08:04 AM Jul 26, 2019 | Team Udayavani |

ಹುಬ್ಬಳ್ಳಿ: ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವ ನಿಟ್ಟಿನಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ಹೇಳಿದರು.

Advertisement

ಮಹಾನಗರ ಪಾಲಿಕೆ ಆಯಕ್ತರ ಸಭಾಭವನದಲ್ಲಿ ಪಿಒಪಿ ಗಣೇಶ ಮೂರ್ತಿ ನಿಷೇಧ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ವರ್ಷ ಕಟ್ಟುನಿಟ್ಟಾಗಿ ಕ್ರಮ ಜರುಗಿಸಿದ ಹಿನ್ನೆಲೆಯಲ್ಲಿ ಪಿಒಪಿ ಮೂರ್ತಿ ತಯಾರಿಕೆ ಹಾಗೂ ಪ್ರತಿಷ್ಠಾಪನೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಕಳೆದ ಬಾರಿ ಪಿಒಪಿ ಗಣೇಶ ಮೂರ್ತಿಗೆ ಸಂಬಂಧಿಸಿದಂತೆ ಕೆಲ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಆದರೆ ಈ ಬಾರಿ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಪ್ರಕಾರ ಎಫ್‌ಐಆರ್‌ ದಾಖಲಿಸಲಾಗುವುದು ಎಂದರು.

ಟಾಸ್ಕ್ಫೋರ್ಸ್‌ ರಚನೆ: ಪಿಒಪಿ ಗಣೇಶ ಮೂರ್ತಿ ನಿಷೇಧಿಸುವ ಕುರಿತು ಉತ್ಸವಕ್ಕಿಂತ ಒಂದೂವರೆ ತಿಂಗಳ ಮುಂಚಿತವಾಗಿ ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಸಾಗಾಟ ಮೇಲೆ ನಿಗಾ ವಹಿಸಲಾಗುತ್ತದೆ. ಹೊರ ಜಿಲ್ಲೆಗಳಿಂದ ಬರುವ ಮೂರ್ತಿಗಳ ಮೇಲೂ ನಿಗಾ ವಹಿಸಲಾಗಿದೆ. ನಗರ ಹಾಗೂ ಜಿಲ್ಲೆ ಪ್ರವೇಶಿಸುವ ಕಡೆ ಚೆಕ್‌ಪೋಸ್ಟ್‌ಗಳನ್ನು ಪೊಲೀಸರು ಬಲಗೊಳಿಸಲಿದ್ದಾರೆ. ಮಹಾನಗರದಲ್ಲಿ ಪಿಒಪಿ ಮೂರ್ತಿ ತಯಾರಿಗೆ ನಿಂತಿರುವ ಮಾಹಿತಿಯಿದೆ. ಯಾವುದೇ ಕಾರಣಕ್ಕೂ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಇಂತಹ ಮೂರ್ತಿಗಳನ್ನು ಒಳಪ್ರವೇಶಿಸಲು ಅವಕಾಶ ಕೊಡುವುದಿಲ್ಲ. ಆದರೂ ಕದ್ದುಮುಚ್ಚಿ ಮೂರ್ತಿಗಳನ್ನು ತಂದರೆ ಅವರ ವಿರುದ್ಧ ಕಠಿಣ ಕ್ರಮವಾಗಲಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತ ಸುರೇಶ ಹಿಟ್ನಾಳ, ಡಿವೈಎಸ್ಪಿ ರಾಮನಗೌಡ ಹಟ್ಟಿ, ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ ಇನ್ನಿತರರಿದ್ದರು.

Advertisement

ಯಾರ್ಯಾರು ಏನಂದ್ರು?:

ಪಿಒಪಿ ಮೂರ್ತಿ ನಿಷೇಧಕ್ಕಾಗಿ ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಾರೂ ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ನಿಶ್ಚಿತ.•ಡಿ.ಎಲ್.ನಾಗೇಶ, ಡಿಸಿಪಿ

ಡಿಜೆ ಬಳಕೆಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗಣೇಶ ಮೆರವಣಿಗೆ ಸಾಗುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳ ವಿಸರ್ಜನೆಗೆ ಅಗತ್ಯವಾದ ಬಾವಿಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕು.•ಅಲ್ತಾಫ್‌ ಕಿತ್ತೂರ, ಪಾಲಿಕೆ ಮಾಜಿ ಸದಸ್ಯ

ಸಾರ್ವಜನಿಕರು ಹಬ್ಬವನ್ನು ಸರಳವಾಗಿ ಹಾಗೂ ಸಂಪ್ರದಾಯಕವಾಗಿ ಆಚರಿಸಬೇಕು. ಪಟಾಕಿ, ಕರೆ ಕಟ್ಟೆಗಳಲ್ಲಿ, ಮೂರ್ತಿಗಳ ವಿಸರ್ಜನೆ, ರಾಸಾಯಿಕ ಬಣ್ಣಗಳ ಉಪಯೋಗವನ್ನು ಕಡಿಮೆ ಮಾಡಬೇಕು.•ಶಂಕರ ಕುಂಬಿ, ಪರಿಸರವಾದಿ

Advertisement

Udayavani is now on Telegram. Click here to join our channel and stay updated with the latest news.

Next