ಕರ್ಣ ದಾನಶೂರ ಎಂಬ ಮಾತು ಸುಪ್ರಸಿದ್ಧ. ಆತ, ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ನದಿಯಲ್ಲಿ ಮಿಂದು ಶುಚಿರ್ಬೊತನಾಗಿ, ಸೂರ್ಯನಿಗೆ ಅರ್ಘ್ಯ ಕೊಡುತ್ತಿದ್ದ. ಆ ಸಮಯದಲ್ಲಿ ಯಾರು ಏನು ಯಾಚಿಸಿದರೂ “ನಾಸ್ತಿ’ (ಇಲ್ಲ) ಎಂದು ಹೇಳುತ್ತಿರಲಿಲ್ಲ. ಒಮ್ಮೆ, ಕರ್ಣ ಅಭ್ಯಂಜನಕ್ಕೆ ಸಿದ್ಧವಾಗುತ್ತಿದ್ದ. ಎಡಗೈಯಲ್ಲಿ, ರತ್ನಖಚಿತವಾದ ಚಿನ್ನದ ಬಟ್ಟಲಲ್ಲಿ ಎಣ್ಣೆ ಇಟ್ಟುಕೊಂಡು, ಬಲಗೈಯಲ್ಲಿ ಎಣ್ಣೆ ತೆಗೆದುಕೊಂಡು ಹಚ್ಚಿಕೊಳ್ಳುತ್ತಿದ್ದ. ಆಗ ಬೆಳಗಿನ ವಿಹಾರಕ್ಕೆಂದು, ಶ್ರೀಕೃಷ್ಣ- ಅರ್ಜುನರು ಅತ್ತ ಕಡೆ ಬಂದರು.
ಅರ್ಜುನನ ಕಣ್ಣು, ಕರ್ಣನ ಕೈಯಲ್ಲಿದ್ದ ಬಟ್ಟಲಿನ ಮೇಲೆ ಬಿತ್ತು. “ನನಗೂ ಇದೇ ತರಹದ ಬಟ್ಟಲಿನಲ್ಲಿ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕೆಂದು ಆಸೆಯಾಗಿದೆ’ ಎಂದ. ಆಗ ಕೃಷ್ಣ
“ಕರ್ಣನನ್ನೇ ಕೇಳ್ಳೋಣ, ಕೊಟ್ಟರೂ ಕೊಡಬಹುದು’ ಎಂದು ಹೇಳಿದ. ಕೃಷ್ಣನು ಕರ್ಣನ ಹತ್ತಿರ ಹೋಗಿ, “ನಿನ್ನಿಂದ ಒಂದು ವಸ್ತು ಕೇಳಬೇಕೆಂದಿದ್ದೇನೆ. ಹೇಗೆ ಕೇಳುವುದೆಂದು ಗೊತ್ತಾಗುತ್ತಿಲ್ಲ’ ಎಂದಾಗ, ಕರ್ಣ “ಏನು ಬೇಕೆಂದು ನಿಸ್ಸಂಕೋಚವಾಗಿ ಕೇಳು’ ಎಂದು ಹೇಳಿದ. “ಈ ಬಟ್ಟಲನ್ನು ಕೊಡುವೆಯಾ?’ ಎಂದು ಮಾತು ಮುಗಿಸುವುದರೊಳಗೇ, ಎಡಗೈಯಲ್ಲಿದ್ದ ಬಟ್ಟಲನ್ನು “ಕೃಷ್ಣಾರ್ಪಣಮಸ್ತು’ ಎಂದು ಆತನಿಗೆ ಕೊಟ್ಟು ವಿನೀತನಾಗಿ ನಮಸ್ಕರಿಸಿದ.
ಅರ್ಜುನನಿಗೆ ಅದನ್ನು ನಂಬಲಾಗಲಿಲ್ಲ. “ದಾನಶೂರ ಎನ್ನುವುದು ನಿನ್ನ ಹೊಗಳಿಕೆಯಲ್ಲ. ನಿನ್ನ ಸಹಜಸ್ಥಿತಿಯ ವರ್ಣನೆ’ ಎಂದು ಕರ್ಣನನ್ನು ಕೃಷ್ಣ ಪ್ರಶಂಸಿಸಿದ. “ಆದರೂ, ದಾನವನ್ನು ಬಲಗೈಯಲ್ಲಿ ಕೊಡಬೇಕಾಗಿತ್ತು. ಎಡಗೈಯಲ್ಲಿ ಕೊಟ್ಟಿದ್ದು ಸರಿಯಲ್ಲ. ಅಲ್ಲವೇ?’ ಎಂದ. ಆಗ ಕರ್ಣ, “ಮನಸ್ಸು ಅತಿಚಂಚಲವಾದದ್ದಲ್ಲವೇ? ಎಡಗೈಯಿಂದ ಬಲಗೈಗೆ ಹೋಗುವುದರೊಳಗೆ ನಿರ್ಧಾರವೇ ಬದಲಾಗಬಹುದು’ ಎಂದ. ಕರ್ಣನ ದೃಢ ನಿಶ್ಚಯ ಮತ್ತು ಚಿತ್ತಚಾಂಚಲ್ಯದ ಬಗ್ಗೆ ಅವನಿಗಿದ್ದ ಆಳವಾದ ಅರಿವು, ಕೃಷ್ಣಾರ್ಜುನರನ್ನು ಮೂಕರನ್ನಾಗಿಸಿತ್ತು. ಯಾವ ವಿಚಾರದಲ್ಲಿಯೇ ಆಗಲಿ, ಸಂಕಲ್ಪ ನೆರವೇರಿಸುವಾಗ, ಚಿತ್ತಚಾಂಚಲ್ಯವಾಗದಂತೆ ಎಚ್ಚರ ವಹಿಸಬೇಕು. ಸದೃಢವಾಗಿ, ಶಕ್ತಿಯುತವಾಗಿರುವ ಸಂಕಲ್ಪವನ್ನು ಹರಿಸಿಬಿಟ್ಟರೆ, ಆ ಸಂಕಲ್ಪವೇ ಕೆಲಸವನ್ನು
ಮಾಡಿಸಿಕೊಳ್ಳುತ್ತದೆ. ದಾರ ಸುತ್ತಿ ಬುಗುರಿಯನ್ನು ಆಡಿಸಿಬಿಟ್ಟರೆ, ದಾರದ ಸಂಬಂಧ ತಪ್ಪಿದರೂ ಬುಗುರಿ ಸುತ್ತುತ್ತದೆ. ಸಂಕಲ್ಪ ಹರಿದುದಕ್ಕೆ ಅಷ್ಟು ದೂರ ಕೆಲಸ ಉಂಟು ಎಂಬ ಶ್ರೀರಂಗ ಮಹಾಗುರುಗಳ ಮಾತು ಸ್ಮರಣೀಯ
ವಿಜಯಲಕ್ಷ್ಮೀ ಬೆಂಡೆಹಕ್ಕಲು, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ