ಶಹಾಬಾದ: ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ಎರಡು ಕಿ.ಮೀ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ನಗರೋತ್ಥಾನದ ಮೂರನೇ ಹಂತದಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾದರೂ ಕಾಮಗಾರಿ ಮಾತ್ರ ಕಳಪೆ ಆಗಿರುವುದಕ್ಕೆ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿಯೇ ಸಾಕ್ಷಿ.
ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಮತ್ತು ಡಿವೈಡರ್ ಕಾಮಗಾರಿಗೆ ನಗರೋತ್ಥಾನದ ಮೂರನೇ ಹಂತದಲ್ಲಿ ಕೋಟಿಗಟ್ಟಲೇ ಹಣ ಸುರಿದರೂ ರಸ್ತೆ ಹರಿದು ಚಿಂದಿಯಾಗಿದೆ. ಬಹುದಿನದ ಕನಸು ನಸಾಗುವುದೇನೋ ಎನ್ನುವ ಆಸೆಯಲ್ಲಿದ್ದ ಜನರಿಗೆ ಮತ್ತೆ ನಿರಾಸೆಯಾಗಿದೆ. ಹೆಜ್ಜೆ ಹೆಜ್ಜೆಗೂ ತೆಗ್ಗುಗಳು ಬಿದ್ದಿವೆ. ವಾಹನಗಳ ಹಿಂದೆ ಹಾರುವ ವಿಪರೀತ ಧೂಳಿನಿಂದ ರಕ್ಷಣೆ ಪಡೆದುಕೊಳ್ಳಲು ಪ್ರಯಾಣಿಕರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.
ಉಸಿರಾಟದೊಂದಿಗೆ ದೇಹ ಸೇರುವ ಧೂಳು ಅನೇಕ ರೋಗಳಿಗೆ ಕಾರಣವಾಗುತ್ತಿದೆ. ಮೂಗಿಗೆ ಬಟ್ಟೆ ಕಟ್ಟಿಕೊಂಡು ಉಸಿರುಗಟ್ಟುತ್ತಾ ಈ ಹೆದ್ದಾರಿ ಮೇಲೆ ಸಂಚರಿಸುವ ಜನರು ಜನಪ್ರತಿನಿ ಧಿಗಳನ್ನು ಹಾಗೂ ಅ ಧಿಕಾರಿಗಳನ್ನು ದೂರುತ್ತಲೇ ಸಾಗುತ್ತಿದ್ದಾರೆ. ಕಳಪೆ ಕಾಮಗಾರಿಯಿಂದ ರಸ್ತೆ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ. ಡಿವೈಡರ್ ಮೇಲಿನ ಪದರು ಕಳಚಿ ಹೋಗಿದೆ. ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಬೇಕಾದ ಡಿವೈಡರ್‌ನ್ನು ಗುತ್ತಿಗೆದಾರರು ತಾವೇ ಮಾರ್ಕಿಂಗ್ ಮಾಡಿಕೊಂಡು ಮನಸ್ಸಿಗೆ ಬಂದಂತೆ ಮಾಡಿದ್ದಾರೆ. ಸಂಬಂಧಪಟ್ಟ ಜೆಇ, ಎಇಇ ಪರ್ಸೆಂಟೇಜ್ ಪಡೆದಿರುವುದರಿಂದ ಮಾರ್ಕಿಂಗ್ ಕೂಡ ಮಾಡಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಸಾವಿರಾರು ಸಂಖ್ಯೆಯಲ್ಲಿ ಸಿಮೆಂಟ್, ಫರ್ಸಿ ಹೊತ್ತೂಯ್ಯುವ ಲಾರಿಗಳು, ಟ್ಯಾಂಕರ್‌ಗಳು ಇದೇ ರಸ್ತೆಯಿಂದ ಹೋಗುತ್ತವೆ. ತೆರಿಗೆ ಕಟ್ಟಿದ ಸಾರ್ವಜನಿಕರು ಉತ್ತಮ ರಸ್ತೆಯಿಲ್ಲದೇ ನಿತ್ಯ ಸಂಕಷ್ಟ ಪಡುವಂತಾಗಿದೆ.
-ಮಲ್ಲಿನಾಥ ಪಾಟೀಲ