Advertisement
ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಂದಿ-ವಾಟೇಗನಹಳ್ಳಿ, ಮೂಲಕ ಹಾದು ಹೋಗುವ ಬಸ್ಕಲ್ ವರೆಗೆ ಸುಮಾರು 9 ಕಿ.ಮೀ. ಕ್ರಮಿಸುವ ರಸ್ತೆಯಲ್ಲಿ 5 ಕಿ.ಮೀ. ಯಷ್ಟು ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳೇ ನಿರ್ಮಾಣವಾಗಿ ಸಂಪೂರ್ಣ ಹದಗೆಟ್ಟಿದೆ. ವಾಹನಗಳು ಅಲ್ಲಲ್ಲಿ ಮಗುಚಿ ಬೀಳತೊಡಗಿದ್ದು, ಮಳೆ ಸುರಿದಾಗ ಇದೇನು ರಸ್ತೆಯೋ ಅಥವಾ ಹಳ್ಳವೋ ಎಂಬ ಅನುಮಾನ ಮೂಡುತ್ತದೆ.
Related Articles
Advertisement
ರಸ್ತೆ ಅಭಿವೃದ್ಧಿಗಾಗಿ ಸ್ಥಳೀಯ ಮುಖಂಡರು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದಾಗ ಸೂಕ್ತ ಕ್ರಮಕ್ಕಾಗಿ ಸರ್ಕಾರದಿಂದ ಲೋಕೋಪಯೋಗಿ ಇಲಾಖೆಗೆ ಸೂಚನೆ ಬಂದಿತ್ತು. ಆದರೆ ಇಲಾಖೆ ಅಧಿಕಾರಿಗಳು ಇದುವರೆಗೂ ರಸ್ತೆ ನಿರ್ವಹಣೆ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತ ಬಂದಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.
ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಇಂದ್ರವಳ್ಳಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆಗ ಸಿಎಂ ಸುಮಾರು 12 ಕೋಟಿ ಅಂದಾಜು ವೆಚ್ಚದಲ್ಲಿ ಹಾಂದಿ-ಬಸ್ಕಲ್ ರಸ್ತೆ ಅಭಿವೃದ್ಧಿಗೊಳಿಸಲು ಸೂಚಿಸಿದ್ದರು. ಆದರೆ ನಂತರ ಬಂದ ಸರ್ಕಾರ ಮತ್ತು ಇಲಾಖೆಯ ನಿರ್ಲಕ್ಷ್ಯತನದ ಪರಿಣಾಮ ಈ ರಸ್ತೆಯ ಅಭಿವೃದ್ಧಿ ನನಗುದಿಗೆ ಬಿದ್ದಿದೆ ಎನ್ನಲಾಗಿದೆ.
“ಹಾಂದಿ-ಬಸ್ಕಲ್ ರಸ್ತೆ ದುರಸ್ತಿಗಾಗಿ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಮೀಸಲಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾ ಬಂದಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳೂ ಸುಮ್ಮನಾಗಿದ್ದಾರೆ. ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು” –ಅಬ್ದುಲ್ ರೆಹಮಾನ್ ಇಂದ್ರವಳ್ಳಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ.