Advertisement

ದುಸ್ತರ ರಸ್ತೆಯಲ್ಲೇ ಸರ್ವ ಋತುವಿನಲ್ಲೂ ಸಂಚಾರ

08:53 PM Sep 20, 2021 | Team Udayavani |

ಅರಣ್ಯ ಪ್ರದೇಶದಿಂದ ಕೂಡಿದ ಬಾಳುಗೋಡಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಅದರಲ್ಲೂ ಅಸಮರ್ಪಕ ರಸ್ತೆಯಿಂದ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಹೈರಾಣಾಗಿದ್ದಾರೆ. ಇವೆಲ್ಲೆದರ ಚಿತ್ರಣ ಇಂದಿನ ಒಂದು ಊರು; ಹಲವು ದೂರು ಅಂಕಣದಲ್ಲಿ

Advertisement

ಸುಬ್ರಹ್ಮಣ್ಯ: ದುಸ್ತರ ರಸ್ತೆಯಲ್ಲೇ ವರ್ಷಪೂರ್ತಿ ಜನರ ಸಂಚಾರ. ಕಾಡುಪ್ರಾಣಿ ಹಾವಳಿಯಿಂದ ಸಂಕಷ್ಟ ಜತೆಗೆ ಭಯದಲ್ಲಿ ಜೀವನ. ಅಸಮರ್ಪಕ ಸಾರಿಗೆ ವ್ಯವಸ್ಥೆ. ಅಭಿವೃದ್ಧಿ ವಿಚಾರದಲ್ಲಿ ಇನ್ನೂ ಹೆಚ್ಚಿನ ಬೇಡಿಕೆಗಳು ಈಡೇರಿಲ್ಲ. ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ವ್ಯಾಪ್ತಿಯ ಬಾಳುಗೋಡು ಗ್ರಾಮದ ಚಿತ್ರಣ ಇದು.

ಬಾಳುಗೋಡು ಹೆಚ್ಚಿನ ವ್ಯಾಪ್ತಿ ಅರಣ್ಯ ಪ್ರದೇಶದಿಂದ ಕೂಡಿದೆ. ಬಾಳುಗೋಡು ಅಭಿವೃದ್ಧಿ ಪಥದತ್ತ ದಾಪುಗಾಲಿಡುತ್ತಿದ್ದರೂ ಪೂರಕ ಕೆಲಸ ಕಾರ್ಯಗಳು ಇಲ್ಲಿ ಇನ್ನೂ ಮುನ್ನಲೆಗೆ ಬಂದಿಲ್ಲ ಎಂಬ ದೂರು ಗ್ರಾಮಸ್ಥರದ್ದು.

ದುಸ್ತರಗೊಂಡ ರಸ್ತೆ:

ಹರಿಹರ ಪಲ್ಲತ್ತಡ್ಕ- ಬಾಳು ಗೋಡು- ಐನೆಕಿದು ಸಂಪರ್ಕಿಸುವ ಪ್ರಮುಖ ರಸ್ತೆ ಅಭಿವೃದ್ಧಿ ಕಂಡಿಲ್ಲ. ಇಲ್ಲಿ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದು, ಉಳಿದೆಡೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಹೊಂಡ ಗುಂಡಿಯಿಂದ ಕೂಡಿರುವ ರಸ್ತೆಯಲ್ಲೇ ಇಲ್ಲಿನ ಜನರು ನಿತ್ಯ ಸಂಚರಿಸುತ್ತಿದ್ದಾರೆ. ಮಳೆಗಾಲದಲ್ಲಿ ಪಾಡಂತೂ ಹೇಳತೀರದು. ಈ ಪ್ರಮುಖ ರಸ್ತೆ ಅಭಿವೃದ್ಧಿಗೊಂಡಲ್ಲಿ ಸಂಚಾರಕ್ಕೆ ಸುಲಭವಾಗಲಿದೆ.

Advertisement

ಕಾಡುಪ್ರಾಣಿ ಹಾವಳಿ ನಿರಂತರ:

ಅರಣ್ಯ ಪ್ರದೇಶ ಹೆಚ್ಚಿರುವ ಇಲ್ಲಿ ಕಾಡುಪ್ರಾಣಿ ಹಾವಳಿ ಯೂ ನಿರಂತರ ವಾಗಿದೆ. ಕೃಷಿ ಭೂಮಿಗೆ ಲಗ್ಗೆ ಇಡುವ ಕಾಡು ಪ್ರಾಣಿಗಳಿಂದ ಕೃಷಿಕರು ನಷ್ಟ ಅನುಭವಿಸುವ ಜತೆಗೆ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಕಾಡಾನೆ, ಮಂಗ, ಕಾಡುಹಂದಿಗಳ ಹಾವಳಿ ಒಂದು ಕಡೆಯಾದರೆ, ಚಿರತೆಗಳ ಸಂಚಾರವೂ ಇಲ್ಲಿನ ಜನತೆಯನ್ನು ಕಂಗೆಡಿಸಿದೆ.

ಅಸಮರ್ಪಕ ಸಾರಿಗೆ:

ಬಾಳುಗೋಡಿನ ಜನತೆ ಪೇಟೆ, ಪಟ್ಟಣಗಳಿಗೆ ಹೋಗಲು ಖಾಸಗಿ ವಾಹನದಲ್ಲಿ ತೆರಳಬೇಕಿದೆ. ಸರಕಾರಿ ಸಾರಿಗೆ ದಿನಕ್ಕೆ ಒಂದೆರಡು ಬಾರಿ ಬಂತೆಂದರೆ ಹೆಚ್ಚು, ಅದೂ ರಜಾದಿನಗಳಲ್ಲಿ ಇಲ್ಲ.

ಸಾರ್ವಜನಿಕರು ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವುದು ತ್ರಾಸದಾಯಕ. ಸದ್ಯ ಜೀಪ್‌ ವ್ಯವಸ್ಥೆ ಇದೆ. ದಿನಕ್ಕೆ ಮೂರು ಬಾರಿ ಮತ್ತು ಅದಕ್ಕಿಂತ ಹೆಚ್ಚು ಬಾರಿ ಸರಕಾರಿ ಬಸ್‌ ಇಲ್ಲಿಂದ ಸುಬ್ರಹ್ಮಣ್ಯ ಹಾಗೂ ಸುಳ್ಯ ಕಡೆಗೆ ಸಂಚರಿಸಿದರೆ ಜನತೆಗೆ ಉಪಯೋಗವಾಗಲಿದೆ.

ನೆಟ್‌ವರ್ಕ್‌ ಸವಾಲು: ನೆಟ್‌ವರ್ಕ್‌ ಸಮಸ್ಯೆ ಬಾಳುಗೋಡು ಜನತೆಗೆ ಹೊಸದೇನಲ್ಲ. ಆದರೆ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟವರು ಇನ್ನೂ ಮುಂದಾಗದೇ ಇರುವುದೇ ದುರಾದೃಷ್ಟ. ಇಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಮಾತ್ರವೇ ಲಭ್ಯವಿದ್ದು, ಅದು ಕೂಡ ವಿದ್ಯುತ್‌ ಇದ್ದರೆ ಮಾತ್ರ ಸಮರ್ಪಕವಾಗಿರುತ್ತದೆ. ಹಲವೆಡೆ ಜನರು ನೆಟ್‌ವರ್ಕ್‌ಗಾಗಿ ಕಾಡು ಗುಡ್ಡ ಅಲೆದಾಡಬೇಕಿದೆ. ವಿದ್ಯಾರ್ಥಿಗಳು ಆನ್‌ಲೈನ್‌ ಶಿಕ್ಷಣಕ್ಕಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

 

-ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next