ಸಿರುಗುಪ್ಪ: ನಗರದಲ್ಲಿ ಹಾದುಹೋಗುವ 150 ಎ ಚಾಮರಾಜನಗರ-ಬೀದರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ 20ಮೀಟರ್ ಉದ್ದದ ರಸ್ತೆಯು ತೀವ್ರವಾಗಿಹದಗೆಟ್ಟು ಹೋಗಿದ್ದು, ಇಲ್ಲಿ ವಾಹನಗಳು ಸಂಚರಿಸಲು ತೀವ್ರ ತೊಂದರೆ ಯಾಗಿದ್ದು, ತಗ್ಗುದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ನರ್ತಿಸುತ್ತ ಹೋಗುವುದು ಸಾಮಾನ್ಯವಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಈ ವೃತ್ತದ ಸುತ್ತಮುತ್ತ ರಸ್ತೆಯಲ್ಲಿ ತಗ್ಗುದಿನ್ನೆಗಳು ಬೀಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ಮಳೆಗಾಲದಲ್ಲಿತಗ್ಗುದಿನ್ನೆಗಳಲ್ಲಿ ವಾಹನ ಸವಾರರು, ಸರ್ಕಸ್‌ಮಾಡುತ್ತ ವಾಹನ ಚಲಾಯಿಸುತ್ತಾರೆ, ಸ್ವಲ್ಪ ಆಯತಪ್ಪಿದರೂ ನೆಲಕ್ಕೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೆ ಈ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೂಧೂಳು ನಿರಂತರವಾಗಿ ಆವರಿಸುತ್ತಿದ್ದು, ಅಂಗಡಿ ಮಾಲೀಕರು ಅಸ್ತಮಾ, ಕೆಮ್ಮು ಮುಂತಾದ ಕಾಯಿಲೆಗಳಿಂದ ನರಳುತ್ತಿದ್ದಾರೆ.
ಹೇಳಿಕೇಳಿ ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ 5 ಸಾವಿರಕ್ಕೂ ಹೆಚ್ಚು ಭಾರಿ ಸರಕು ಸಾಗಿಸುವ ಲಾರಿಗಳು, ಬಸ್‌ಗಳು, ಲಘುವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯು ಮತ್ತಷ್ಟು, ಇನ್ನಷ್ಟು ಹದಗೆಡಲು ಕಾರಣವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿ ಕೇವಲ ಗುಂಡಿ ಮುಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಭಾರಿವಾಹನಗಳ ಓಡಾಟದಿಂದ ಮತ್ತೆ ಮತ್ತೆ ಗುಂಡಿಗಳು ಬೀಳುವುದು ಮಾಮೂಲಾಗಿದೆ. ರಸ್ತೆಗೆ ಹಾಕಿದ್ದ ಸಂಪೂರ್ಣಡಾಂಬರ್ ಕಿತ್ತುಹೋಗಿದ್ದು, ಜಲ್ಲಿಕಲ್ಲುಗಳು ಕಾಣಿಸಿಕೊಂಡಿದ್ದು, ಭಾರಿ ವಾಹನಗಳು ಸಂಚರಿಸುವಾಗಟೈರ್ ಅಡಿಯಿಂದ ಜಲ್ಲಿಕಲ್ಲುಗಳು ದ್ವಿಚಕ್ರವಾಹನ ಸವಾರರಿಗೆ ಸಿಡಿದು ಅನೇಕರು ಗಾಯಗೊಂಡ ಘಟನೆಗಳು ನಡೆದಿವೆ.
ಸಿಸಿ ರಸ್ತೆ ನಿರ್ಮಾಣಕ್ಕೆ ಒತ್ತಾಯ: ಈ ವೃತ್ತದಲ್ಲಿ ಪದೇ ಪದೇ ಡಾಂಬರ್ ಕಿತ್ತುಹೋಗುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನೂಕೂಲವಾಗುತ್ತಿದೆ. ಆದ್ದರಿಂದ ಇಲ್ಲಿ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಿದರೆಅನುಕೂಲವಾಗುತ್ತದೆ ಎಂಬುದು ಈಭಾಗದ ಜನರ ಅಭಿಪ್ರಾಯವಾಗಿದೆ.
ಅಂಬೇಡ್ಕರ್ ವೃತ್ತದ ಭಾಗದಲ್ಲಿ ವರ್ಷದ 9 ತಿಂಗಳು ರಸ್ತೆಯು ಹದಗೆಟ್ಟು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಇಲ್ಲಿ ಉತ್ತಮವಾದ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಕಾರಿಗಳು ಕ್ರಮ ಕೈಗೊಳ್ಳಬೇಕು.
-ಗಂಗಾಧರ, ಮಲ್ಲಯ್ಯ, ನಿವಾಸಿಗಳು
ನಗರದಲ್ಲಿ ಹದಗೆಟ್ಟಿರುವ ಹೆದ್ದಾರಿಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
-ರಾಘವೇಂದ್ರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಇಇ
-ಆರ್. ಬಸವರೆಡ್ಡಿ ಕರೂರು