Advertisement

ಹದಗೆಟ್ಟಿದೆ ಸಂಸದರ ಆದರ್ಶ ಗ್ರಾಮ!

10:07 AM Aug 03, 2018 | Team Udayavani |

ಸುಬ್ರಹ್ಮಣ್ಯ: ಸಂಸದರ ಆದರ್ಶ ಗ್ರಾಮ ಬಳ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಿಲ್ಲ. ಬಳ್ಪ ಗ್ರಾಮದ ಪ್ರಮುಖ ರಸ್ತೆಯೊಂದರ ಅವಗಣನೆ ವಿರುದ್ಧ ಪ್ರತಿಭಟನೆ ಹಾಗೂ ಮುಂದಿನ ಚುನಾವಣೆ ಬಹಿಷ್ಕಾರಕ್ಕೂ ಗ್ರಾಮಸ್ಥರು ಚಿಂತನೆ ನಡೆಸಿದ್ದಾರೆ.

Advertisement

ಬಳ್ಪ ಗ್ರಾಮದಲ್ಲಿ ಪ್ರಮುಖವಾಗಿ ಹಾದುಹೋಗುವ ಭೋಗಾಯನಕೆರೆ -ಎಣ್ಣೆಮಜಲು-ಕೊನ್ನಡ್ಕ-ಬೀದಿಗುಡ್ಡೆ ಲಿಂಕ್‌ ರೋಡ್‌ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಈ ರಸ್ತೆ ದಶಕಗಳಿಂದ ಶಾಶ್ವತ ಅಭಿವೃದ್ಧಿಯಾಗದೆ ಉಳಿದಿದೆ ಎನ್ನುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಮಧ್ಯೆ ಬಳ್ಪ ಗ್ರಾಮವಿದೆ. ಇದು ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಆಯ್ಕೆಯ ಆದರ್ಶ ಗ್ರಾಮವಾಗಿದೆ. ಬಳ್ಪ ಪೇಟೆಯಿಂದ ಸ್ವಲ್ಪ ಮುಂದಕ್ಕೆ ಭೋಗಾಯನಕೆರೆ ಕಾಲನಿ ಸಮೀಪದಿಂದ ಕವಲೊಡೆದು ಭೋಗಾಯನಕೆರೆ-ಎಣ್ಣೆಮಜಲು-ಬೀದಿಗುಡ್ಡೆಯಾಗಿ ಈ ರಸ್ತೆ ಹಾದು ಹೋಗುತ್ತದೆ.

ಮಳೆಗಾಲದಲ್ಲಿ ಸಂಚಾರಕ್ಕೆ ಅಡ್ಡಿ
ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ 6.5 ಕಿ.ಮೀ. ಉದ್ದವಿದೆ. ಭೋಗಾಯನಕೆರೆ, ಕೊನ್ನಡ್ಕ, ಬೀದಿಗುಡ್ಡೆಯ ಅಲ್ಪ ದೂರ ಕಾಂಕ್ರೀಟು ಕಾಮಗಾರಿ ನಡೆಸಲಾಗಿದೆ. ಎಣ್ಣೆಮಜಲು, ಕಲ್ಲೇರಿ, ಕುಳ, ಬೆಟ್ಟಂಗಿಲ, ಕೊನ್ನಡ್ಕ, ಪಟೋಳಿ, ಮುಟ್ನೂರು, ಕೊರಪ್ಪಣೆ ಭಾಗದವರಿಗೆ ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿ ವೃ ದ್ಧಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದರೂ ಬೆಲೆ ಸಿಕ್ಕಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಓಡಾಟಕ್ಕೆ ಅಡ್ಡಿಯಾಗುತ್ತಲೇ ಇದೆ. ಈ ಕಚ್ಚಾ ರಸ್ತೆಯ ಕೊನ್ನಡ್ಕ ಬಳಿ ಪರಿಶಿಷ್ಟ ಜಾತಿಯ 80ಕ್ಕೂ ಅ ಧಿಕ ಮನೆಗಳಿವೆ. ಉಳಿದಂತೆ ಎಲ್ಲ ವರ್ಗದವರು ಈ ಭಾಗದಲ್ಲಿ ವಾಸವಿದ್ದಾರೆ. ಸರಕಾರಿ ಶಾಲೆಯೂ ಇಲ್ಲಿದೆ. ಇತರೆಡೆಯ ಶಿಕ್ಷಣ ಸಂಸ್ಥೆಗಳಿಗೆ ಶಾಲಾ ಮಕ್ಕಳು, ನಿತ್ಯದ ಕೆಲಸಗಳಿಗೆ ಕೃಷಿಕರು, ನಾಗರಿಕರು ಇದೇ ರಸ್ತೆಯಾಗಿ ತೆರಳುತ್ತಿದ್ದಾರೆ. ಅಸಮರ್ಪಕ ರಸ್ತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಯೋಜನೆಗಳು ಬಂದರೂ…
ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಸಂಸದ ನಳಿನ್‌ಕುಮಾರ್‌ ಕಟೀಲು ಬಳ್ಪ ಗ್ರಾಮವನ್ನು ದತ್ತು ಪಡೆದು ಸಂಘ-ಸಂಸ್ಥೆಗಳ ನೆರವು ಪಡೆದು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು. ಆದರೂ ಮೂಲಸೌಕರ್ಯ ನಿರೀಕ್ಷಿತ ಪ್ರಮಾಣದಲ್ಲಿ ಈಡೇರಿಲ್ಲ. ವಿಧಾನಸಭಾ ಕ್ಷೇತ್ರದ ಚುನಾವಣೆ ವೇಳೆ ಕೂಡ ಈ ಗ್ರಾಮದ ಕಾಯರ್ತಡ್ಕ-ನೇಲ್ಯಡ್ಕ ಭಾಗದಲ್ಲಿ ಅಸಮಾಧಾನ ವ್ಯಕ್ತಗೊಂಡಿತ್ತು. ಅಲ್ಲಿನ ಜನರು ಮತದಾನ ಬಹಿಷ್ಕಾರದ ಬ್ಯಾನರ್‌ ಅಳವಡಿಸಿ ಪ್ರತಿಭಟಿಸಿದ್ದರು.

Advertisement

ಗ್ರಾಮಸ್ಥರ ಸಭೆ, ಹೋರಾಟಕ್ಕೆ ನಿರ್ಧಾರ 
ರಸ್ತೆ ಅವ್ಯವಸ್ಥೆ ಕುರಿತು ಬೇಸತ್ತ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಜು. 29ರಂದು ಎಣ್ಣೆಮಜಲು ಶಾಲಾ ವಠಾರದಲ್ಲಿ ಗ್ರಾಮದ ಪ್ರಮುಖರು ಸೇರಿ ಚರ್ಚೆ ನಡೆಸಿದರು. ಚರ್ಚೆ ವೇಳೆ ಈ ರಸ್ತೆ ಅಭಿವೃದ್ಧಿ ಸಂಬಂಧ ಹಂತಹಂತವಾಗಿ ಹೋರಾಟ ನಡೆಸುವುದು ಮತ್ತು ಮುಂಬರುವ ಮತದಾನ ಬಹಿಷ್ಕಾರ ನಡೆಸುವ ಕುರಿತು ಚರ್ಚಿಸಲಾಯಿತು. ಈ ಕುರಿತು ಶೀಘ್ರ ದಿನ ಗೊತ್ತುಪಡಿಸಿ ಗ್ರಾಮಸ್ಥರ ಸಭೆ ಕರೆದು ಹೋರಾಟ ಸಮಿತಿ ರಚಿಸುವುದು, ಹೋರಾಟದ ರೂಪುರೇಷೆ ಸಿದ್ಧಪಡಿಸುವುದೆಂದು ನಿರ್ಧರಿಸಲಾಯಿತು. 

ಸಭೆಯಲ್ಲಿ ಪ್ರಸನ್ನ ಎಣ್ಣೆಮಜಲು, ಹಿಮಕರ ಎಣ್ಣೆಮಜಲು, ದಿನೇಶ ಎಣ್ಣೆಮಜಲು, ಹರ್ಷಿತ್‌ ಪಂಡಿ, ನಿತ್ಯಾನಂದ ಎಣ್ಣೆಮಜಲು, ತೀರ್ಥೇಶ್‌ ಆಲ್ಕಬೆ, ರಾಜೇಶ್‌ ವಿಷ್ಣುಮಂಗಿಲ, ದೇವಿದಾಸ್‌ ಕಲ್ಲೇರಿ, ಕಿರಣ್‌ ಕೊನ್ನಡ್ಕ, ಪ್ರಶಾಂತ ಎಣ್ಣೆಮಜಲು, ಮಾಧವ ದಂಬೆಕೋಡಿ, ಸುಬ್ರಹ್ಮಣ್ಯ ಭಟ್‌ ಕಲ್ಲೇರಿ ಉಪಸ್ಥಿತರಿದ್ದರು.

ಶ್ರಮದಾನ 
ರಸ್ತೆ ಪೂರ್ತಿ ಡಾಮರು ಕಿತ್ತುಹೋಗಿ, ಹೊಂಡಗಳು ನಿರ್ಮಾಣಗೊಂಡಿವೆ. ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಕೆಸರಿನಲ್ಲಿ ಹೂತು ಹೋಗುತ್ತಿವೆ. ಸ್ಥಳೀಯರು ಆರು ದಿನಗಳ ಕಾಲ ನಿರಂತರ ಶ್ರಮದಾನ ನಡೆಸಿ ಹೊಂಡಗಳಿಗೆ ಕಲ್ಲು, ಮಣ್ಣು ತುಂಬಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಿದ್ದರು. 

ಅಭಿವೃದ್ಧಿಯ ಭರವಸೆ
ಗ್ರಾಮ ಸಡಖ್‌ ಯೋಜನೆಯಡಿ ಈ ರಸ್ತೆಯನ್ನು ಅಭಿವೃದ್ಧಿ ಮಾಡಿಕೊಡುವ ಕುರಿತು ಶಾಸಕರು, ಸಂಸದರು ಭರವಸೆ ನೀಡಿದ್ದಾರೆ. ಇಲ್ಲಿನ ರಸ್ತೆಗಳು ಅಭಿವೃದ್ಧಿಯಾಗುವುದು ಖಚಿತ.
– ಪ್ರಕಾಶ ಮುಟ್ನೂರು
ಬಳ್ಪ ಗ್ರಾ.ಪಂ. ಅಧ್ಯಕ್ಷರು

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next