ಹನೂರು: ಪಟ್ಟಣದ ಯುವರಾಜ ಇಂಡಸ್ಟ್ರೀಸ್‍ನಿಂದ 20 ಲಕ್ಷ ಮೌಲ್ಯದ ಅರಿಶಿಣವನ್ನು ಕದ್ದೊಯ್ದಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಕಾಂಚಳ್ಳಿ ಗ್ರಾಮದ ಚಂದ್ರಪ್ಪ(34), ರಮೇಶ್(28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಆರೋಪಿ ರಾಜೇಶ್‍ಎಂ ಬಾತ ಪರಾರಿಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಏನಿದು ಘಟನೆ?: ಪಟ್ಟಣದ ಎಲ್ಲೇಮಾಳ ಮುಖ್ಯ ರಸ್ತೆಯಲ್ಲಿ ಯುವರಾಜ ಇಂಡಸ್ಟ್ರೀಸ್ ಕಾರ್ಖಾನೆಯೊಂದು ನಡೆಯುತ್ತಿದ್ದು, ಅರಿಶಿಣ ವ್ಯಾಪಾರ ಮತ್ತು ಅರಿಶಿಣದ ಉತ್ಪನ್ನಗಳನ್ನು ತಯಾರು ಮಾಡಲಾಗುತಿತ್ತು. ಈ ಕಾರ್ಖಾನೆಯಲ್ಲಿ ನ.3ರಂದು ಕಳ್ಳತನ ಜರುಗಿದ್ದು, ಸುಮಾರು 20 ಲಕ್ಷ ಮೌಲ್ಯದ 100 ಮೂಟೆಗಳಷ್ಟು ಅರಿಶಿಣ ಕಳ್ಳತನವಾಗಿತ್ತು. ಈ ಸಂಬಂಧ ನ.6 ರಂದು ಹನೂರಿನಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನುಹತ್ತಿದ ಹನೂರು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಮತ್ತು ಡಿವೈಎಸ್ಪಿ ನಾಗರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದಿದ್ದರು. ಇದೇ ವೇಳೆ ನ.7ರ ಶನಿವಾರ ಎಡಳ್ಳಿ ದೊಡ್ಡಿ ಸಮೀಪದ ಅಲಗುಮೂಲೆ ಕ್ರಾಸ್ ಬಳಿ ಈಚರ್ ವಾಹನ ಮತ್ತು ಟಾಟಾ ಇಂಟ್ರಾ ವಾಹನದಲ್ಲಿ ಕಳ್ಳತನವಾಗಿದ್ದ ಅರಿಶಿಣವನ್ನು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಿದೆ. ಕೂಡಲೇ ಕಾರ್ಯಪ್ರವೃತ್ತರಾದ ಹನೂರು ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು 96 ಮೂಟೆ ಅರಿಶಿಣ ಮತ್ತು ಸಾಗಾಣಿಕೆ ಮಾಡುತ್ತಿದ್ದ 2 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಭಾಗಿಯಾಗಿದ್ದು ನಾಪತ್ತೆಯಾಗಿರುವವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮಲೆ ಮಾದಪ್ಪನ ಲಾಡು ಪ್ರಸಾದಕ್ಕೆ 5 ರೂ. ಹೆಚ್ಚಳ !
ದಾಳಿಯಲ್ಲಿ ಸಿಪಿಐ ರವಿನಾಯಕ್, ಪಿಎಸ್‍ಐ ನಾಗೇಶ್, ಸಿಬ್ಬಂದಿಗಳಾದ ಸೈಯದ್ ಜಮೀರ್ ಅಹಮ್ಮದ್, ಲಿಯಾಖತ್ ಅಲಿಖಾನ್, ರಾಘವೇಂದ್ರ, ಶಿವಕುಮಾರ ಸ್ವಾಮಿ, ಕಾಂತರಾಜು, ಶಿವಕುಮಾರ್ ಇನ್ನಿತರರು ಭಾಗವಹಿಸಿದ್ದರು.