ಸೊರಬ: ಅಡಕೆ ಕದಿಯಲು ಹೊಂಚು ಹಾಕುತ್ತಿದ್ದರೆನ್ನಲಾದ ಮೂವರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ಮುಟುಗುಪ್ಪೆ ಹಾಗೂ ಎನ್.ದೊಡ್ಡೇರಿ ಗ್ರಾಮಗಳ ಬಳಿ ಅನುಮಾನಾಸ್ಪದವಾಗಿ ತಡರಾತ್ರಿ ಸಿದ್ದಾಪುರ ತಾಲೂಕು ಹಾಳದಘಟ್ಟ ಗ್ರಾಮದ ಪವನ್ ಕುಮಾರ, ಮುಕುಂದ ಹಾಗೂ ಅಣಜಿ ಗ್ರಾಮದ ಗಣೇಶ ಓಮಿನಿ ವಾಹನವನ್ನು ರಸ್ತೆ ಬದಿ ನಿಲ್ಲಿಸಿಕೊಂಡು ಕಾಯುತ್ತಿದ್ದರು.
ಕಳೆದ ಒಂದು ತಿಂಗಳ ಹಿಂದೆ ಎನ್. ದೊಡ್ಡೇರಿ ಗ್ರಾಮದ ನಾರಾಯಣಪ್ಪ ಎಂಬುವವರು 40 ಕೆ.ಜಿ ತೂಕದ 40 ಚೀಲ ಹಾಗೂ ರಾಜು ಪೂಜಾರಿಯ 80 ಕೆ.ಜಿ ಕೆಂಪಡಿಕೆ ಕಳ್ಳತನವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಗ್ರಾಮಗಳ ಗ್ರಾಮಸ್ಥರು ಒಟ್ಟಾಗಿ ಕಳ್ಳರನ್ನು ಹಿಡಿಯಬೇಕೆಂಬ ಉದ್ದೇಶದಿಂದ ರಾತ್ರಿ ವೇಳೆ ಗಸ್ತು ತಿರುಗುವ ವ್ಯವಸ್ಥೆ ಮಾಡಿಕೊಂಡಿದ್ದರು.
ಅನುಮಾನಸ್ಪದವಾಗಿ ನಿಂತಿದ್ದ ಈ ಮೂವರನ್ನು ಕಂಡ ಗ್ರಾಮಸ್ಥರು ಅವರನ್ನು ವಿಚಾರಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಅವರನ್ನು ಹಿಡಿದು, ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಪೊಲೀಸರಿಂದ ಸಮರ್ಪಕ ಉತ್ತರ ದೊರೆಯದಿದ್ದರಿಂದ ಶಿವಮೊಗ್ಗದ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ ನಂತರ ಸೊರಬ ಪೊಲೀಸರು ಸ್ಥಳಕ್ಕಾಗಮಿಸಿ ಮೂವರನ್ನು ಬಂಧಿಸಿ ಅವರಿಂದ ಕೆಎ-27 ಎಂ-2317 ಸಂಖ್ಯೆಯ ಓಮಿನಿ ವಾಹವನ್ನು ವಶಪಡಿಸಿಕೊಂಡಿದ್ದಾರೆ.
ಎನ್. ದೊಡ್ಡೇರಿ ಗ್ರಾಮದ ಎನ್.ದೊಡ್ಡೇರಿ ನಾರಾಯಣಪ್ಪ ಅವರಿಂದ ದೂರು ಪಡೆದ ಸೊರಬ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರಾತ್ರಿ ಗಸ್ತಿನಲ್ಲಿ ರಾಜು ಪೂಜಾರಿ ಮುಟಗುಪ್ಪೆ, ನಾಗರಾಜ.ಕೆ, ದುಗ್ಗಪ್ಪ ಪೂಜಾರಿ, ದೇವಿ ದುರ್ಗಪ್ಪ, ಹನೀಫ್ ಸಾಬ್, ನಾರಾಯಣಪ್ಪ ಮತ್ತಿತರರು ಇದ್ದರು. ಕಳೆದ ಒಂದು ತಿಂಗಳ ಹಿಂದೆ ಅಡಕೆ ಕಳವಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡದೇ ತಾವೇ ಕಳ್ಳರನ್ನು ಹಿಡಿಯಬೇಕೆಂದು ಎರಡು ಗ್ರಾಮದವರು ಒಟ್ಟಾಗಿ ರಾತ್ರಿಯೆಲ್ಲಾ ಗಸ್ತು ತಿರುಗುತ್ತಿದ್ದೆವು.
ನಮ್ಮಲ್ಲಿ ತಡರಾತ್ರಿಯವರೆಗೆ ಅಡಕೆ ಸುಲಿಯುತ್ತಾರೆ. ಅವರೆಲ್ಲರೂ ಮಲಗಿದ ಸಮಯದಲ್ಲಿ ಕಳ್ಳರು ಕಳ್ಳತನಕ್ಕೆ ಮುಂದಾಗುವುದನ್ನು ತಿಳಿದ ನಾವು ಪ್ರತಿದಿನ ಕಾಯುತ್ತಿದ್ದೆವು. ಕಾದಿದ್ದಕ್ಕೆ ಪ್ರತಿಫಲ ಸಿಕ್ಕಂತಾಗಿದೆ ಎಂದು ರಾಜು ಪೂಜಾರಿ ಮುಟುಗುಪ್ಪೆ ಪತ್ರಿಕೆಗೆ ತಿಳಿಸಿದರು.