ಬೆಂಗಳೂರು: ಹೆಬ್ಬಗೋಡಿಯ ಅನಂತನಗರ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಆರು ವರ್ಷದ ಬಾಲಕನ ಸಾವಿಗೆ ಕಾರಣನಾದ ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದ ಮಹಿಳೆ ಸೇರಿ ಆರು ಮಂದಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್‌ನ ರಾಕೇಶ್ (29), ಈಶ್ವರಿ (30), ಆನಂದಕುಮಾರ್ (20), ಬಿ.ಕೆ.ಪ್ರಕಾಶ್ (19), ಆರ್.ಪ್ರಮೋದ್ ಕುಮಾರ್ (19), ಎನ್.ಎಲ್. ರವಿ (40) ಬಂಧಿತರು. ಆರೋಪಿಗಳು ಉತ್ತರ ಪ್ರದೇಶ ಮೂಲದ ರಾಧೆ ಶ್ಯಾಮ್ (29) ಎಂಬ ಲಾರಿ ಚಾಲಕನನ್ನು ಸಾರ್ವಜನಿಕವಾಗಿ ಥಳಿಸಿ ಕೊಂದಿದ್ದರು. ಇದೇ ವೇಳೆ ರಸ್ತೆ ಅಪ ಘಾತದಲ್ಲಿ ಅರ್ಹಾನ್‌ಖಾನ್ (6) ಎಂಬ ಬಾಲಕ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.
ಮಾ.10ರಂದು ಸಂಜೆ 4.30ರ ಸುಮಾರಿಗೆ ಹೆಬ್ಬಗೋಡಿಯ ಅನಂತನಗರದ ಕಿರಿದಾದ ರಸ್ತೆಯಲ್ಲಿ ಚಾಲಕ ರಾಧೆ ಶ್ಯಾಮ್ ಕಾಂಕ್ರೀಟ್ ಮಿಕ್ಸರ್ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಇದೇ ವೇಳೆ ಲಾರಿಯ ಹಿಂದೆ ದ್ವಿಚಕ್ರ ವಾಹನದಲ್ಲಿ ಸಂಬಂಧಿ ಅರ್ಹಾನ್‌ಖಾನ್ ನನ್ನು ಕರೆದುಕೊಂಡು ಹೋಗುತ್ತಿದ್ದ ಸದಾಫ್ ಬುರ್ಖಾ ಲಾರಿಯನ್ನು ಓವರ್‌ಟೇಕ್ ಮಾಡಿದ್ದಾರೆ. ಇದೇ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಚಾಲಕನೊಬ್ಬ ಏಕಾಏಕಿ ಕಾರಿನ ಬಾಗಿಲು ತೆಗೆದಿದ್ದು, ಬಾಗಿಲು ಯುವತಿಯ ದ್ವಿಚಕ್ರ ವಾಹನಕ್ಕೆ ತಗುಲಿದೆ. ಪರಿಣಾಮ ಯುವತಿ ಹಾಗೂ ಬಾಲಕ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ವೇಗವಾಗಿ ಬರುತ್ತಿದ್ದ ಲಾರಿಯ ಚಕ್ರಗಳು ಬಾಲಕ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಂಗಾಲಾದ ಯುವತಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ರಕ್ಷಣೆಗೆ ಧಾವಿಸಿದ ಆರೋಪಿಗಳು ರೊಚ್ಚಿಗೆದ್ದು, ಲಾರಿ ಚಾಲಕ ರಾಧೆ
ಶ್ಯಾಮ್‌ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ತೀವ್ರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಬ್ಬಗೋಡಿ ಪೊಲೀಸರು ಹೇಳಿದರು.