ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಪೊಲೀಸರು ಕುಖ್ಯಾತ ಸುಲಿಗೆಕೋರರಿಬ್ಬರನ್ನು ಬಂಧಿಸಿ, ಅವರಿಂದ ಅಂದಾಜು 1.76 ಲಕ್ಷ ರೂ. ಮೌಲ್ಯದ ನಾಲ್ಕು ದ್ವಿಚಕ್ರ ವಾಹನ, ಮೊಬೈಲ್, ಎರಡು ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಳೇಹುಬ್ಬಳ್ಳಿ ಆನಂದನಗರ ರಸ್ತೆ ಸಂಗಮ ಕಾಲೋನಿಯ ಶಾಂತಪ್ಪ ಎಸ್. ವೀರಾಪುರ ಹಾಗೂ ಚನ್ನಪೇಟೆ ಅಂಬೇಡ್ಕರ್ ಕಾಲೋನಿಯ ಮಹದೇವ ಎಸ್. ಭರಮಣ್ಣವರ ಬಂಧಿತ ಸುಲಿಗೆಕೋರರಾಗಿದ್ದು, ಅಜೀಜ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಬಂಧಿತರು ಜೂ. 13ರಂದು ತಾರಿಹಾಳ ರಸ್ತೆ ಜಗದೀಶನಗರ ಕ್ರಾಸ್ ಬಳಿ ಟಾಟಾ ಏಸ್ ವಾಹನ ಅಡ್ಡಗಟ್ಟಿ ಅದರಲ್ಲಿದ್ದವರಿಗೆ ಚಾಕು ತೋರಿಸಿ ಹೆದರಿಸಿ ನಗ-ನಾಣ್ಯ, ಮೊಬೈಲ್ ದೋಚಿಕೊಂಡು ಹೋಗಲು ಯತ್ನಿಸಿದ್ದರು. ಆಗ ಅಡ್ಡಿಪಡಿಸಿದ್ದ ಓರ್ವನಿಗೆ ಚಾಕುವಿನಿಂದ ಇರಿದು ಗಾಯಪಡಿಸಿ ಪರಾರಿಯಾಗಿದ್ದರು. ಈ ಕುರಿತು ಕಲಘಟಗಿ ತಾಲೂಕು ಬಿಸರಳ್ಳಿ ಗ್ರಾಮದ ಜ್ಯೋತಿ ಹುಂಡಿ ಎಂಬುವರು ಗೋಕುಲ ರಸ್ತೆ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ದೂರಿನನ್ವಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಶಾಂತಪ್ಪ ವೀರಾಪುರ ಹಾಗೂ ಮಹದೇವ ಭರಮಣ್ಣವರ ಎಂಬುವರನ್ನು ಶನಿವಾರ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಶಾಂತಪ್ಪನು ಧಾರವಾಡದಲ್ಲಿ ಮೂರು ಹಾಗೂ ಹಳೇಹುಬ್ಬಳ್ಳಿಯಲ್ಲಿ ಒಂದು ದ್ವಿಚಕ್ರ ವಾಹನ ಕಳವು ಮಾಡಿ, ಆ ಮೂಲಕ ಸುಲಿಗೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಈತನ ವಿರುದ್ಧ ಹು-ಧಾದಲ್ಲಿ 13 ಸುಲಿಗೆ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಹದೇವ ವಿರುದ್ಧವೂ ಅವಳಿ ನಗರದಲ್ಲಿ 13 ಸುಲಿಗೆ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರು ಸುಲಿಗೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ವಶದಲ್ಲಿದ್ದರು. ಮೂರು ತಿಂಗಳ ಹಿಂದಷ್ಟೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಡಿಸಿಪಿಗಳಾದ ರೇಣುಕಾ ಸುಕುಮಾರ, ಬಿ.ಎಸ್. ನೇಮಗೌಡ, ಎಸಿಪಿ ಎಚ್.ಕೆ. ಪಠಾಣ ಮಾರ್ಗದರ್ಶನದಲ್ಲಿ ಗೋಕುಲ ರಸ್ತೆ ಠಾಣೆ ಇನ್ ಸ್ಪೆಕ್ಟರ್ ಮಲ್ಲಯ್ಯ ಮಠಪತಿ, ಪಿಎಸ್‌ಐ ಎಸ್. ಎಚ್. ದೊಡ್ಡಮನಿ, ಸಿಬ್ಬಂದಿಗಳಾದ ಎಸ್.ಎಚ್. ತಹಶೀಲ್ದಾರ, ಸಂಜೀವ ಕುರಹಟ್ಟಿ, ಎನ್.ಐ. ನೀಲಗಾರ, ಬಸವರಾಜ ಬೆಳಗಾವಿ, ಎಸ್.ಎಫ್. ಕಣಬೂರ, ಆರ್. ವೈ. ಕೋತಂಬ್ರಿ, ಎಸ್.ಜಿ. ಹೊಸಮನಿ, ಕೆ.ಎಚ್. ನೀಲಪ್ಪಗೌಡರ ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಅಜೀಜ್ ಪತ್ತೆಗೆ ಜಾಲ ಬೀಸಿದ್ದಾರೆ.