ಬೆಂಗಳೂರು: ದೃಷ್ಟಿ ದೋಷ ನಿವಾರಣೆ ಸಂಬಂಧ ಅತ್ಯಾಧುನಿಕ ಪರಿಕರಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವು ಗ್ರಾಮೀಣ ಜನರಿಗೆ ತಲುಸುವ ಅಗತ್ಯವಿದೆ ಎಂದು ಮಿಂಟೋ ಕಣ್ಣಾಸ್ಪತ್ರೆ ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ
ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೇತ್ರಾಧಿಕಾರಿಗಳ ಸಂಘ ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ನೇತ್ರಾಧಿಕಾರಿಗಳ ಮೂರು ದಿನದ “ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ’ ಉದ್ಘಾಟಸಿ ಅವರು ಮಾತನಾಡಿದರು. ಅಂಧತ್ವ ನಿವಾರಣೆ ಕೂಡ ಒಂದು ಸಮಾಜಮುಖೀ ಕೆಲಸ. ಹಳ್ಳಿಗಳಲ್ಲಿ ಸಾಕಷ್ಟು ಮಂದಿಗೆ ದೃಷ್ಟಿದೋಷದ ಬಗ್ಗೆ ಇನ್ನೂ ತಿಳಿವಳಿಕೆ ಇಲ್ಲ. ಇಂತಹ ಮುಗ್ಧರಿಗೆ ಸಲಹೆ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಆಯಾ ಸ್ಥಳೀಯ
ನೇತ್ರಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಕಣ್ಣಿನ ದೋಷದ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಅರಿವಿನ ಕಾರ್ಯಾಗಾರಗಳು ನಡೆಯಬೇಕು. ಅಲ್ಲದೆ, ಶಾಲಾ ಮಕ್ಕಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಹಳ್ಳಿಗಳಲ್ಲಿ ಕಣ್ಣಿನ ದೋಷದ ಬಗ್ಗೆ ತಿಳಿವಳಿಕೆ ನೀಡುವ ಕೆಲಸಗಳು ಹೆಚ್ಚೆಚ್ಚು ನಡೆದಾಗ ಮಾತ್ರ, ಇದರ ನಿರ್ಮೂಲನೆ ಸಾಧ್ಯ ಎಂದರು.
ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಇದ್ದರೂ ಈ ಬಗ್ಗೆ ಜನರಿಗೆ ತಪ್ಪು ತಿಳಿವಳಿಕೆ ಇದೆ. ಹೀಗಾಗಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ತಮ್ಮ ನೈಪುಣ್ಯತೆ ಒರೆಗೆ ಹಚ್ಚಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ರಾಜ್ಯದ ಹಲವಡೆಗಳಿಂದ ಆಗಮಿಸಿದ 60ಕ್ಕೂ ಹೆಚ್ಚು ಸರ್ಕಾರಿ ನೇತ್ರಾಧಿಕಾರಿಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.
ಪುಸ್ತಕಗಳನ್ನು ಕಣ್ಣಿಗೆ ತೀರಾ ಹತ್ತಿರ ಇರಿಸಿ ಕೊಂಡು ಓದುವುದು ಅಪಾಯಕಾರಿ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರ
ವಹಿಸಬೇಕು. ಅಲ್ಲದೆ, ಕಡಿಮೆ ಅಥವಾ ಮಂದ ಬೆಳಕಿನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮೊದಲು ಬಿಡಬೇಕು.
●ಎಂ.ವೆಂಕಟೇಶ್, ಸರ್ಕಾರಿ ನೇತ್ರಾಧಿಕಾರಿಗಳ ಸಂಘದ ಅಧ್ಯಕ್ಷ