ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣ ಹಿಂದಿನ ಪೊಲೀಸ್ ಕ್ವಾಟರ್ಸ್‌ನ ಪಕ್ಕದ ಮನೆಯ ಎರಡನೆ ಅಂತಸ್ಥಿನ ಮನೆಯಲ್ಲಿದ್ದ ಉತ್ತರ ಪ್ರದೇಶ ಮೂಲದ ಮಹಿಳೆ ನಿಶಾದೇವಿ ಪಾರಿತೋಷ (26) ಹಾಗೂ ಮಗು ರಿಶಿ (5)ಯನ್ನು ಕಳೆದ ಮೇ 25ರಂದು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ 19 ವರ್ಷದ ದಿನೇಶ ಮೋಪಾರರಾಮ ಚೌಧರಿ, 20 ವರ್ಷದ ವಿಕ್ರಮ ಕಾಳಾರಾಮ ಚೌಧರಿ ಬಂಧಿತ ಆರೋಪಿಗಳು. ಇಬ್ಬರು ರಾಜಸ್ಥಾನದ ಜೋಲ್ಲೂರ್ ಜಿಲ್ಲೆಯ ರಾಣಿವಾಲಾ ತಾಲೂಕಿನ ಗೋಂಗ್ ಗ್ರಾಮದವರಾಗಿದ್ದಾರೆ.
ಬಂಧಿತ ಆರೋಪಿಗಳಿಂದ 8,11,900ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಚಾಕು, ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಆರೋಪಿಗಳನ್ನು ಬಂಧಿಸಲು ವಿಶೇಷ ತನಿಖಾ ತಂಡ ರಚಿಸಿದ್ದರು. ಹೆಚ್ಚುವರಿ ಎಸ್ಪಿ ಜಯಪ್ರಕಾಶ, ಡಿವೈಎಸ್ಪಿ ಕೆ. ಬಸವರಾಜ ಮಾರ್ಗದರ್ಶನದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಮೊಬೈಲ್‌ನ ಐಎಂಇಐ ನಂಬರ್‌ನ ತಾಂತ್ರಿಕ ನೆರವಿನಿಂದ ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ನಟರಾಜ ಲಾಡೆ, ಸಿಬ್ಬಂದಿಗಳಾದ ಮಹ್ಮದ್ ಯೂಸೋಫ, ಹೊನ್ನಪ್ಪ, ಲಕ್ಷ್ಮಣ ಆರೋಪಿಗಳನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ನಿಷಾದೇವಿ ಹಾಗೂ ಮಗು ರಿಶಿಯ ಕೊಲೆಯಾದ ವಿಷಯ ಕೇಳಿ ತಾಲೂಕಿನ ಜನರು ಭಯಭೀತರಾಗಿದ್ದರು. ಆರೊಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ.
ಮುಕ್ತಾರ ಪಟೇಲ್, ಜೆಸ್ಕಾಂ ನಿರ್ದೇಶಕ
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಣ ಕಳುವು
ಮಾಡಿ ಪರಾರಿ ಆಗುತ್ತಿದ್ದವರು ತಮ್ಮನ್ನು ನೋಡಿದ್ದಾರೆ ಎಂದು ತಿಳಿದು ತಾಯಿ ಹಾಗೂ ಮಗುವನ್ನು ಕೊಲೆ ಮಾಡಿದ್ದಾರೆ. ಇವರು ಮಕ್ಕಳ ಕಳ್ಳರು ಅಲ್ಲ.
ಮಹಾಂತೇಶ ಪಾಟೀಲ, ಸಿಪಿಐ
ನಟರಾಜ ಲಾಡೆ, ಪಿಎಸ್‌ಐ