ಬೆಂಗಳೂರು: ಪ್ರತಿಷ್ಠಿತ ಐಟಿ ಕಂಪನಿಯಲ್ಲಿನ ಉಪಕರಣಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಹಾಗೂ ಬಿಹಾರ ಮೂಲದ ಮಾನಸ ರಂಜನ್ (24), ಜನಮೇಜಯ ಸುತಾರ್ (26), ನಿರಂಕರಿ (23) ಹಾಗೂ ಚಂದ್ರಕಾಂತ್(27) ಬಂಧಿತರು. ಬಂಧಿತರಿಂದ 1.50 ಕೋಟಿ ರೂ. ಮೌಲ್ಯದ 195 ಲ್ಯಾಬ್ ಆಫ್ರಿಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕಾಡುಗೋಡಿ ಹಾಗೂ ಪಣತ್ತೂರಿನ ಪೇಯಿಂಗ್ ಗೆಸ್ಟ್ (ಪಿಜಿ) ನಲ್ಲಿ ವಾಸವಿದ್ದರು. ಮಾರತ್‌ಹಳ್ಳಿಯ ಸಿಸ್ಕೋ ಸಿಸ್ಟಂ ಇಂಡಿಯಾ ಕಂಪನಿಯಲ್ಲಿ ಕಳ್ಳತನ ಮಾಡಿದ್ದರು. ಸಿಸ್ಕೋ ಕಂಪನಿಯ ಎಲೆಕ್ಟ್ರಿಕಲ್, ಪ್ಲಂಬಿಂಗ್ ಹಾಗೂ ಸ್ವತ್ಛತೆ ನಿರ್ವಹಣೆ ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆಯಲ್ಲಿ ಆರೋಪಿಗಳು ಕೆಲಸ ಮಾಡುತ್ತಿದ್ದರು. ಈ ಗುತ್ತಿಗೆ ಕಂಪನಿ, ಸಿಸ್ಕೋ ಕಂಪನಿಗೆ ಅಗತ್ಯವಿರುವ ಸಾಫ್ಟ್ವೇರ್ ಲ್ಯಾಬ್ ಆಫ್ರಿಕ್ ಉಪಕರಣಗಳನ್ನು ವಿದೇಶದಿಂದ ಅಮದು ಮಾಡಿಕೊಂಡಿತ್ತು. ಉಪಕರಣಗಳನ್ನು ಲಾಕರ್‌ನಲ್ಲಿ ಇರಿಸಲಾಗಿತ್ತು.
ಕೆ.ಜಿ ಲೆಕ್ಕದಲ್ಲಿ ಮಾರಾಟ: ಆರೋಪಿಗಳು ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರಿಂದ ಕಂಪನಿಯ ಎಲ್ಲೆಡೆ
ಓಡಾಡಲು ಅವಕಾಶ ನೀಡಲಾಗಿತ್ತು. ಈ ಅವಕಾಶ ದುರುಪಯೋಗ ಪಡಿಸಿಕೊಂಡ ಆರೋಪಿಗಳು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಉಪಕರಣಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದರು. ಅದರಂತೆ ಲ್ಯಾಬ್ ಆಫ್ರಿಕ್‌ಗಳನ್ನು ನಿತ್ಯ ಕಳವು ಮಾಡಿ ಕಡಿಮೆ ಬೆಲೆಗೆ ಗುಜರಿ ಅಂಗಡಿಯಲ್ಲಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು.
ಅಲ್ಲದೆ ಕೆಲ ಸರ್ವಿಸ್ ಸೆಂಟರ್‌ಗಳಿಗೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದರು. ನಿತ್ಯ ಒಂದಿಲ್ಲೊಂದು ಲ್ಯಾಬ್ ಆಫ್ರಿಕ್ಸ್ ಕಾಣೆಯಾಗುತ್ತಿ ರುವುದನ್ನು ಗಮನಿಸಿದ ಕಂಪನಿಯ ಭದ್ರತಾ ವಿಭಾಗದ ಮ್ಯಾನೇಜರ್ ಅವತಾರ್ ಸಿಂಗ್, ಮಾರತ್‌ಹಳ್ಳಿ ಠಾಣೆಗೆ ದೂರು ನೀಡಿದ್ದರು.