ಬೆಂಗಳೂರು: ವೇಶ್ಯಾವಾಟಿಕೆ ದಂಧೆಯಲ್ಲಿ ಸಂಪಾದಿಸಿದ ಹಣದ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಅಲಿಯಾಸ್ ಶರತ್ ಕುಮಾರ್ (22) ಮತ್ತು ವಿನಯ್ ಅಲಿಯಾಸ್ ಲೋಕೇಶ್ (24) ಬಂಧಿತರು. ಪ್ರಕರಣದ ಇತರ ನಾಲ್ಕು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಏ.12 ಸಣ್ಣಕ್ಕಿ ಬಯಲಿನಲ್ಲಿ ಕೆಂಗೇರಿ ನಿವಾಸಿ ಕೋಟೇಶ್ವರ (21) ಎಂಬಾತನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದಿದ್ದರು.
ಬಂಧಿತರು ಮೆಜೆಸ್ಟಿಕ್‌ನಲ್ಲಿ ಆಟೋ ಚಾಲಕರಾಗಿದ್ದು, ವೇಶ್ಯಾವಾಟಿಕೆ ದಂಧೆಗೆ ಸಹಕಾರ ನೀಡುತ್ತಿದ್ದರು. ಇದಕ್ಕೆ ಸುರೇಶ್‌ನ ಬಾಲ್ಯ ಸ್ನೇಹಿತ ಕೋಟೇಶ್ವರ ಕೂಡ ಕೈಜೋಡಿಸಿದ್ದ. ಮೆಜೆಸ್ಟಿಕ್‌ನಲ್ಲಿ ಸಿಗುವ ಕೆಲ ಗ್ರಾಹಕರಿಗೆ ಯುವತಿಯರನ್ನು ಪೂರೈಸುತ್ತಿದ್ದ ಆರೋಪಿಗಳು, ಕೆಲ ಹೋಟೆಲ್‌ಗಳ ಮಾಲೀಕರಿಗೆ ಹಣದ ಆಮಿಷವೊಡ್ಡಿ ದಂಧೆ ನಡೆಸುತ್ತಿದ್ದರು.
ಈ ಮಧ್ಯೆ ದಂಧೆಯಲ್ಲಿ ಹೆಚ್ಚು ಲಾಭ ಬರುತ್ತಿದ್ದಂತೆ ಕೋಟೇಶ್ವರ ತನ್ನ ಸ್ನೇಹಿತರನ್ನು ದೂರವಿಟ್ಟು, ಪ್ರತ್ಯೇಕವಾಗಿ ದಂಧೆ ಆರಂಭಿಸಿದ್ದ. ಇದರಿಂದ ಸುರೇಶ್‌ಗೆ ಬರುವ ಹಣಕ್ಕೆ ಕತ್ತರಿ ಬಿದ್ದಿತ್ತು. ಈ ವಿಚಾರವಾಗಿ ಸುರೇಶ್ ಮತ್ತು ಕೋಟೇಶ್ವರ ನಡುವೆ ಗಲಾಟೆಯಾಗಿದ್ದು, ಏ.12ರಂದು ರಾಜಿ ಸಂಧಾನ ಮಾಡಲು ಸಣ್ಣಕ್ಕಿ ಬಯಲಿಗೆ ಕೋಟೇಶ್ವರನನ್ನು ಕರೆಸಿಕೊಂಡಿದ್ದ.
ಈ ವೇಳೆ ಸ್ನೇಹಿತರ ಜತೆ ಬಂದ ಕೋಟೇಶ್ವರ್ ರಾಜಿಗೆ ಒಪ್ಪದಿದ್ದಾಗ ಸುರೇಶ್ ತನ್ನ ಸಹಚರರ ಜತೆ ಸೇರಿ ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.