Advertisement

ಸಂಬಂಧಿಯ ಕೊಂದಿದ್ದ ಆರೋಪಿಗಳ ಬಂಧನ

08:04 AM Feb 21, 2019 | |

ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರ ವಾಗಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳು ಆನೇಕಲ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆನೇಕಲ್‌ ನಿವಾಸಿಗಳಾದ ದೊಡ್ಡಯ್ಯ ಅಲಿಯಾಸ್‌ ಆನೇಕಲ್‌ ಅಪ್ಪಿ (21) ಮತ್ತು ಶಿವರಾಜು ಅಲಿಯಾಸ್‌ ಶಿವ (24) ಬಂಧಿತರು. ಆರೋಪಿಗಳು ಫೆ.17ರಂದು ಆನೇಕಲ್‌ ಟೌನ್‌ನಲ್ಲಿರುವ ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವಸ್ಥಾನದ ಸಮೀಪದ ಖಾಲಿ ಜಾಗದಲ್ಲಿ ಗುಂಭಾಳಾಪುರ ನಿವಾಸಿ ಲೋಕೇಶ್‌ (25) ಎಂಬಾತನನ್ನು ಆರೋಪಿಗಳು ಕೊಲೆಗೈದಿದ್ದರು.

Advertisement

ಆರೋಪಿಗಳ ಪೈಕಿ ದೊಡ್ಡಯ್ಯ ಕಾರ್ಖಾನೆ ಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶಿವರಾಜು ವಾಹನ ಚಾಲಕನಾಗಿದ್ದಾನೆ. ಲೋಕೇಶ್‌ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದು, ಹತ್ತಿರದ ಸಂಬಂಧಿಗಳಾಗಿದ್ದ ಮೂವರೂ, ಫೆ.17ರಂದು ದೇವಾಲಯ ಸಮೀಪದ ಖಾಲಿ ಜಾಗದಲ್ಲಿ ಮದ್ಯ ಸೇವಿಸಿದ್ದಾರೆ. ಈ ವೇಳೆ ಮೂವರ ನಡುವೆ ವೈಯಕ್ತಿಕ ವಿಚಾರಗಳಿಗೆ ಮಾತಿನ ಚಕಮಕಿ ನಡೆದಿದೆ. 

ಈ ವೇಳೆ ಗಲಾಟೆ ಮಾಡಿದರೆ ಯುವಕರನ್ನು ಕರೆಸುವುದಾಗಿ ಲೋಕೇಶ್‌ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಶಿವರಾಜು, ಬಿಯರ್‌ ಬಾಟಲಿಯಿಂದ ಲೋಕೇಶ್‌ ತಲೆಗೆ ಹೊಡೆದಿದ್ದಾನೆ. ಬಳಿಕ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಲೋಕೇಶ್‌ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಜಿಲ್ಲಾ ಎಸ್ಪಿ ಟಿ.ಪಿ.ಶಿವಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪೊಲೀಸ್‌ ಬಲೆಗೆ ಬಿದ್ದ ಬೈಕ್‌ ಕಳ್ಳ ಕಳೆದ ಕೆಲ ವರ್ಷಗಳಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಆನೇಕಲ್‌ ಪೊಲೀಸರು ಬಂಧಿಸಿದ್ದಾರೆ. ಆನೇಕಲ್‌ ತಾಲೂಕಿನ ಶಿವಶಂಕರ್‌ ಅಲಿಯಾಸ್‌ ಶಿವ (24) ಬಂಧಿತ.  ರೋಪಿಯಿಂದ 40 ಸಾವಿರ ರೂ. ಮೌಲ್ಯದ ಒಂದು ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

3.50 ಲಕ್ಷ ರೂ. ಕದ್ದಿದ್ದ ಆರೋಪಿ ಸೆರೆ ಪ್ರಾವಿಜನ್‌ ಸ್ಟೋರ್‌ನ ಗೋಡೆ ಕೊರೆದು ಹಣ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ತಾಲೂಕಿನ ಸೈಯದ್‌ ವಾಸಿಂ ಅಲಿಯಾಸ್‌ ವಾಸಿಂ (20) ಬಂಧಿತ. ಈತನಿಂದ 40 ಸಾವಿರ ರೂ. ನಗದು, ಸಿಸಿ ಕ್ಯಾಮೆರಾದ ಡಿವಿಆರ್‌ ಬಾಕ್ಸ್‌ ವಶಕ್ಕೆ ಪಡೆಯಲಾಗಿದೆ. ತಗ್ಗಲಿಹೊಸಳ್ಳಿ ಗ್ರಾಮದ ಅನಿಲ್‌ಕುಮಾರ್‌ ಎಂಬುವರು ಫೆ.3ರಂದು ಕಟ್ಟಿಗೇನಹಳ್ಳಿ ಗೇಟ್‌ನಲ್ಲಿರುವ ತಮ್ಮ ಪ್ರಾವಿಜನ್‌ ಸ್ಟೋರ್‌ಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮರುದಿನ ಬೆಳಗ್ಗೆ 8.30ರ ಸುಮಾರಿಗೆ ಬಂದು ಅಂಗಡಿ ಬಾಗಿಲು ತೆರೆದಾಗ ಅಂಗಡಿಯ ಹಿಂಭಾಗದ ಗೋಡೆ ಕೊರೆದಿರುವುದು ಕಂಡು ಬಂದಿದ್ದು, ಅಂಗಡಿಯಲ್ಲಿದ್ದ 3.50 ಲಕ್ಷ ರೂ. ನಗದು, ಸಿಸಿ ಕ್ಯಾಮೆರಾದ ಸಿಡಿಆರ್‌ ಬಾಕ್ಸ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next