Advertisement

ಕೊಲೆ-ಕಳ್ಳತನ ಆರೋಪಿಗಳಿಬ್ಬರ ಬಂಧನ

02:31 PM Jan 11, 2018 | Team Udayavani |

ದಾವಣಗೆರೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆ, ಸರ, ಬೈಕ್‌ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 1.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಬುಧವಾರ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಮಂಗಳೂರು, ಕದ್ರಿ, ಭಾಲ್ಕಿ ಸೇರಿದಂತೆ ವಿವಿಧೆಡೆ ಕೊಲೆ, ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಮುರ್ತುಜಾ ಖಾದ್ರಿ ಅಲಿಯಾಸ್‌ ರμಕ್‌ (32) ಹಾಗೂ ರವಿ ಅಲಿಯಾಸ್‌ ಪವರ್‌ (21)ನನ್ನು ಕಳೆದ 5ರಂದು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ರವಿ ಎಂಬಾತನನ್ನು ಮನೆಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಬ್ಬರೂ ನಿಟುವಳ್ಳಿ ಎಚ್‌. ಕೆ.ಆರ್‌. ವೃತ್ತದ ಬಳಿಯ ನಿವಾಸಿಗಳಾಗಿದ್ದಾರೆ. ಮುರ್ತುಜಾ ಸೈಯ್ಯದ್‌ ಪೀರ್‌ ಬಡಾವಣೆಯ ಆಂಜನೇಯ ದೇವಸ್ಥಾನದ ಬಳಿ ಕೂಲಿ ಕೆಲಸ ಹಾಗೂ ರವಿ ಡಾ| ಎಂ.ಸಿ. ಮೋದಿ ವೃತ್ತದಲ್ಲಿನ ಸುರೇಶ್‌ ಆಮ್ಲೆಟ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಎಲ್ಲಾ ಪ್ರಕರಣಗಳ ನಾಲ್ವರು ಆರೋಪಿಗಳಲ್ಲಿ ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಅವರು ಅವರು ಮಾಹಿತಿ ನೀಡಿದರು. 

ಬಂಧಿತರಿಂದ ನಾಲ್ಕು ಬೈಕ್‌, 20 ಗ್ರಾಂ ಬಂಗಾರದ ಒಡವೆ, 2 ಜೊತೆ ಬೆಳ್ಳಿ ಕಾಲು ಚೈನ್‌ ಸೇರಿ ಒಟ್ಟು 1.80 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸರಗಳ್ಳತನ ಸೇರಿದಂತೆ ವಿವಿಧ ಚಟುವಟಿಕೆಗಳ ಮೇಲೆ ನಿಗಾ ಇಡಲು ಹೆಚ್ಚಿನ ಗಸ್ತು ವ್ಯವಸ್ಥೆ ಮಾಡಲಾಗಿದೆ. ವಿದ್ಯಾನಗರ ಪಿಎಸ್‌ಐ ಎಂ.ಡಿ. ಸಿದ್ದೇಶ್‌ ತಮ್ಮ ಸಿಬ್ಬಂದಿ ಜೊತೆ ಗಸ್ತು ತಿರುವಾಗ ನಂಬರ್‌ ಪ್ಲೇಟ್‌ ಇಲ್ಲದ ಬೈಕ್‌ನಲ್ಲಿ ಈ ಇಬ್ಬರು ಆರೋಪಿಗಳು ತಿರುಗಾಡುತ್ತಿದ್ದನ್ನು
ಗಮನಿಸಿದ್ದಾರೆ. ಅವರನ್ನು ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡಿಲ್ಲ. ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಇವರ ಕೃತ್ಯ ಬೆಳಕಿಗೆ ಬಂದಿವೆ ಎಂದರು. ಆರೋಪಿಗಳನ್ನು ಹಿಡಿಯುವಲ್ಲಿ ಸಿಬ್ಬಂದಿ ಲೋಕಾನಾಯ್ಕ, ಮಂಜುನಾಥ, ತಿಪ್ಪೇಸ್ವಾಮಿ, ಆಂಜನೇಯ, ಸೈಯ್ಯದ್‌ ಆಲಿ, ಅರುಣಕುಮಾರ್‌, ಬಸವರಾಜ, ನರೇಂದ್ರ ಸ್ವಾಮಿ, ಗೌರಮ್ಮ ಶ್ರಮ ವಹಿಸಿದ್ದು, ಇಲಾಖೆಯಿಂದ 5000 ರೂ. ಬಹುಮಾನ ನೀಡಲಾಗುವುದು ಎಂದು ಅವರು ತಿಳಿಸಿದರು. ನಗರ ಡಿಎಸ್‌ಪಿ ಎಂ. ಬಾಬು, ಸಿಪಿಐ ಇ. ಆನಂದ್‌, ಪಿಎಸ್‌ಐ ಎಂ.ಡಿ. ಸಿದ್ದೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಸಾರಿಗೆ ಸಂಸ್ಥೆಗೆ 36 ಸಾವಿರ ರೂ. ದಂಡ
ನಗರದ ವಿವಿಧ ಕಡೆ ಸಿಸಿಟಿವಿ ಅಳವಡಿಕೆ ನಂತರ ಅನೇಕ ಪ್ರಕರಣ ಪತ್ತೆಯಾಗುತ್ತಿದ್ದು ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಆದರೆ, ರಾಜ್ಯ ಸಾರಿಗೆ ಸಂಸ್ಥೆಯ ಮುಂಭಾಗದಲ್ಲಿ ಹಾಕಲಾಗಿರುವ ಸಿಸಿಟಿವಿ ಸಹಾಯದಿಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ನಿಯಮ ಉಲ್ಲಂಘಿಸಿದ 3000ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಒಟ್ಟು 36,000 ರೂ. ದಂಡ ವಸೂಲು ಮಾಡಲಾಗಿದೆ ಎಂದು ಭೀಮಾಶಂಕರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next