ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳ ಹಾವಳಿ ಹೆಚ್ಚಿದ್ದು, ರೈತರು, ಕೂಲಿ ಕಾರ್ಮಿಕರು ಜಮೀನಿಗೆ ತೆರಳಲು ಆತಂಕಪಡುತ್ತಿದ್ದಾರೆ.
ತಾಲೂಕಿನ ಹನಗೋಡು ಹೋಬಳಿಯ ಕೆ.ಜಿ.ಹಬ್ಬನಕುಪ್ಪೆಯ ತೋಮಸ್ ತರಗನ್, ಆಂಥೋನಿ ತರಗನ್ ಎಸ್ಟೇಟ್‌ಗೆ ಗುರುವಾರ ಬೆಳಗಿನ ಜಾವ ನುಗ್ಗಿರುವ ಆನೆಗಳು ಬಾದಾಮಿ, ಮದನಪಲ್ಲಿ ಜಾತಿಗೆ ಸೇರಿದ 25 ಮಾವಿನ ಮರಗಳನ್ನು ಕಿತ್ತುಹಾಕಿವೆ. ಕಳೆದ ವರ್ಷ ಇದೇ ಎಸ್ಟೇಟ್‌ನಲ್ಲಿ 500ಕ್ಕೂ ಹೆಚ್ಚು ಅಡಕೆ, ಮಾವಿನ ಗಿಡಗಳನ್ನು ತುಳಿದು ನಾಶಪಡಿಸಿದ್ದವು.
ಸೋಲಾರ್ ಬೇಲಿಗೂ ಜಗ್ಗಿಲ್ಲ: ತರಗನ್ ಎಸ್ಟೇಟ್ 375 ಎಕರೆಯಲ್ಲಿದೆ. ಸುತ್ತ ಆನೆ ಕಂದಕ, ಸೋಲಾರ್ ಬೇಲಿ ನಿರ್ಮಿಸಲಾಗಿದೆ. ಇದಕ್ಕೂ ಜಗ್ಗದ ಕಾಡಾನೆಗಳು ಎಸ್ಟೇಟ್‌ಗೆ ನುಗ್ಗಿ ಫಸಲಿಗೆ ಬಂದಿದ್ದ ಮರಗಿಡಗಳನ್ನು ನಾಶಪಡಿಸಿವೆ. ಬಿಲ್ಲೇನ ಹೊಸಹಳ್ಳಿಯ ಕೆರೆ ಮತ್ತು ಲಕ್ಷ್ಮಣತೀರ್ಥ ನದಿ ದಾಟಿ ಬರುವ ಆನೆಗಳು ರಾತ್ರಿಯೆಲ್ಲಾ ಕಾಡಂಚಿನ ಜಮೀನಿನಲ್ಲಿ ಬೆಳೆದ ಬೆಳೆ ನಾಶಪಡಿಸಿ, ಬೆಳಗ್ಗೆ ಮತ್ತೆ ಸ್ವಸ್ಥಳಸೇರಿಕೊಳ್ಳುತ್ತಿವೆ.
ಪರಿಹಾರಕ್ಕೆ ಮನವಿ: ಆನೆಗಳು ಕಳೆದ ತಿಂಗಳಿಂದ ನಿತ್ಯ ರೈತರ ಬೆಳೆ ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಆನೆ ಹಾವಳಿ ನಿಯಂತ್ರಿಸಲು ರಾತ್ರಿ ಕಾವಲು ಹೆಚ್ಚಿಸಬೇಕು. ಕಳೆದ ವರ್ಷ ಆನೆ ದಾಳಿಯಿಂದ ಬೆಳೆ ಕಳೆದುಕೊಂಡ ನೇರಳಕುಪ್ಪೆಯ ಬಿಲ್ಲೇನಹೊಸಹಳ್ಳಿಯ ಜಾನ್ಸನ್, ಕೆ.ಜಿ.ಹೆಬ್ಬನಕುಪ್ಪೆ, ಕಾಳಬೋಚನಹಳ್ಳಿ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ರೈತರಾದ ವಿ.ಸಿ.ಸಂಜೀವ್, ಜಾನ್ಸನ್ ಮನವಿ ಮಾಡಿದರು.
ಬಂದೂಕು ಹಿಂತಿರುಗಿಸಿ: ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ಉಪಟಳ ಹೆಚ್ಚುತ್ತಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಡಿಪಾಸಿಟ್ ಮಾಡಿಸಿಕೊಂಡಿರುವ ಬಂದೂಕುಗಳನ್ನು ರೈತರಿಗೆ ಮರಳಿಸಬೇಕೆಂದು ಜಿಲ್ಲಾ ಎಸ್‌ಸಿ, ಎಸ್‌ಟಿ ಹಿತರಕ್ಷಣಾ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.