ಬೆಂಗಳೂರು: ಈ ಬಾರಿ ಹೊಸ ವರ್ಷಾಚರಣೆ ವೇಳೆ ಬಿಗಿ ಪೊಲೀಸ್ ಭದ್ರತೆ ನಡುವೆಯೂ ಕೆಲ ಕಾಮುಕರು ಮಹಿಳೆಯರು ಮತ್ತು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಗಳು ನಡೆದಿವೆ.
ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ಮುಗಿಸಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಜತೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಯುವತಿಯರ ಗುಂಪನ್ನು ಕೆಲ ಪುಂಡ ಯುವಕರು ರೇಗಿಸಿದ್ದು, ಯುವತಿಯರು ಅಲ್ಲೇ ಇದ್ದ ಸಿವಿಲ್ ಡೆಫೆನ್ಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ, ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ತಿಪ್ಪಸಂದ್ರದಿಂದ ಬಂದಿದ್ದ ದಂಪತಿ, ಸಂಭ್ರಮಾಚರಣೆ ಮುಗಿಸಿಕೊಂಡು ಹೋಗುವಾಗ ಕೆಲ ದುಷ್ಕರ್ಮಿಗಳು ಪತ್ನಿ ಮೈಮೇಲೆ ಕೈ ಹಾಕಿದ್ದಾರೆ. ಇದನ್ನು ತಡೆಯಲು ಹೋದ ಪತಿಯನ್ನು ತಳ್ಳಿದ್ದಾರೆ ಎನ್ನಲಾಗಿದೆ. ಒಟ್ಟಾರೆ ನಗರದಲ್ಲಿ ಅಸಭ್ಯವಾಗಿ ವರ್ತಿಸಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಸಿವಿಲ್ ಡೆಫೆನ್ಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಕೂಡ ನಡೆದಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ಘಟನೆಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಣ್ಣಿರೆರಚಿದ ಸಂಚಾರ ದಟ್ಟಣೆ: ಸಂಭ್ರಮಾಚರಣೆಗೂ ಒಂದು ಗಂಟೆ ಮೊದಲೇ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಆದರೆ, ತಡರಾತ್ರಿ 12 ಗಂಟೆವರೆಗೂ ಟ್ರಿನಿಟಿ ಸರ್ಕಲ್‌ನಿಂದ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಈ ಬಗ್ಗೆ ಭದ್ರತಾ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ವರ್ಷ ಕಾವೇರಿ ಜಂಕ್ಷನ್‌ನಲ್ಲಿ ಸಾವಿರಾರು ಮಂದಿ ಒಂದೆಡೆ ಸೇರಿ ಸಂಭ್ರಮಾಚರಣೆ ನಡೆಸುತ್ತಾರೆ. ಆದರೆ, ಈ ಬಾರಿ ನಿರಂತರವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದರಿಂದ ತಳ್ಳಾಟ ನೂಕಾಟ ನಡೆಯಿತೇ ಹೊರತು ಸಂಭ್ರಮಿಸಲು ಸಾಧ್ಯವಾಗಲಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ.