ಉಡುಪಿ: ಲಾಕ್‌ಡೌನ್ ಸಂದರ್ಭದಲ್ಲೂ ಹುಟ್ಟುಹಬ್ಬ, ಮದುವೆ ಊಟೋಪಚಾರ ನಿರಾತಂಕವಾಗಿವೆ! ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆಸರೆ ಚಾರಿಟೆಬಲ್ ಟ್ರಸ್ಟ್ 23 ದಿನಗಳಿಂದ ಲಾಕ್‌ಡೌನ್‌ನಿಂದ ಸಮಸ್ಯೆ ಗೀಡಾದವರಿಗೆ ಊಟದ ವಿತರಣೆ ಮಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಪ್ರಾಯೋ ಜಕತ್ವ ವಹಿಸುತ್ತಿದ್ದಾರೆ. 30 ಕಡೆ ಊಟ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಊಟ ವಿತರಣೆ ಸಂಖ್ಯೆ 3,500 ದಾಟಿದೆ. ಇದುವರೆಗೆ 68,400 ಊಟ ವಿತರಿಸಲಾಗಿದೆ. ಗುರುವಾರ 3.600 ಊಟವಿತರಿಸಲಾಗಿದೆ.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಜಯರಾಮ ರಾವ್, ಮೂಡುಬೆಳ್ಳೆಯ ಉದ್ಯಮಿ ಅಶ್ವಿತ್ ನಾಯಕ್ ಸೇರಿದಂತೆ ನಾಲ್ವರ ಹುಟ್ಟು ಹಬ್ಬ, ಹೆಬ್ರಿಯ ಉದ್ಯಮಿ ವೀರೇಂದ್ರ ಶೇಟ್ ದಂಪತಿಯ 20ನೇ ವೈವಾಹಿಕ ವರ್ಷಾಚರಣೆಗೂ ಪ್ರಾಯೋಜಕತ್ವ ವಹಿಸಲಾಗಿದೆ.
ಉದ್ಯಮಿಗಳಾದ ಗಿರೀಶ್ ಶೇಟ್, ಪ್ರಶಾಂತ ಶೇಟ್, ಅನೀಶ್ ಪೈ, ಅಜೇಶ್ ಪೈ, ವೈ. ನಾರಾಯಣ ಪೈ, ಎಂಜಿನಿಯರ್ ನಂದಕುಮಾರ್, ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಸಹಾಯಕ ಪ್ರಬಂಧಕ ಕೆ. ಅಶೋಕ್ ನಾಯಕ್, ಅಂಬಾಗಿಲಿನ ಸೀತಾರಾಮ ಪ್ರಭು, ಸ್ನೇಹ ಟ್ಯುಟೋರಿಯಲ್ ಪ್ರಾಂಶುಪಾಲ ಉಮೇಶ ನಾಯ್ಕ ಒಂದೊಂದು ದಿನದ ಊಟದ ಖರ್ಚನ್ನು ವಹಿಸಿಕೊಂಡರು.
ಬ್ರಹ್ಮಾವರ ಸಾಲಿಕೇರಿಯ ಪಿ.ಸಿ. ನಾರಾಯಣ ರಾವ್ ಅವರ ವೈಕುಂಠ ಸಮಾರಾಧನೆಯ ದಿನದ ಅನ್ನ ದಾಸೋಹ ನಡೆಯಿತು. ಕಡಿಯಾಳಿಯ ಸೈಮಂಡ್ ಕ್ರಿಕೆಟರ್, ಭಾರತ್ ವಿಕಾಸ್ ಪರಿಷತ್ ಉಡುಪಿ ಭಾರ್ಗವ ಶಾಖೆ ಸದಸ್ಯರು, ಮಣಿಪಾಲ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ ಗೌಡ, ಉಪನಿರೀಕ್ಷಕ ರಾಜಶೇಖರ್, ಬೈಲೂರು ಗಣೇಶ ಪ್ರಭು, ಕೆಆರ್‌ಐಡಿಎಲ್‌ನ ಕಾರ್ಯಪಾಲಕ ಅಭಿಯಂತರ ಕೃಷ್ಣ ಹೆಬೂÕರ್, ಸಹಾಯಕ ಕಾರ್ಯ ಪಾಲಕ ಅಭಿಯಂತರ ಪ್ರಭಾಕರ, ಕಾರ್ಯಪಾಲಕ ಅಭಿಯಂತರರಾದ ಹೇಮಂತ್, ದಿನೇಶ್ ಅವರು ಪ್ರಾಯೋಜ ಕತ್ವವನ್ನು ವಹಿಸಿಕೊಂಡರು.
ರಾಜಕೀಯ ಧುರೀಣರಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಮೊದಲಾದವರು ಖರ್ಚನ್ನು ಭರಿಸಿದ್ದಾರೆ.
ಉಡುಪಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯವರು 340 ಕೆ.ಜಿ. ಅಕ್ಕಿ ನೀಡಿದ್ದಾರೆ. ಒಂದು ತಿಥಿ ಪ್ರಯುಕ್ತವೂ ಊಟ ನೀಡಲಾಗಿದೆ.
ಬಡವೃದ್ಧೆಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೆ?
ಹಣವಂತರು ಮುಂದೆ ಬಂದು ಊಟದ ಪ್ರಾಯೋಜಕತ್ವ ವಹಿಸುವುದು ದೊಡ್ಡ ವಿಶೇಷವಲ್ಲ. 85 ವರ್ಷದ ವೆಂಕಟರಮಣ ದೇವಸ್ಥಾನ ಸಮೀಪದ ಬಡ ವೃದ್ಧೆ ಊಟ ಕೊಡಲು ಬಂದಿದ್ದರು. ಅವರು ಕುಚ್ಚಲಕ್ಕಿ ಅನ್ನ ತಂದಿದ್ದರಿಂದ ಕಾರ್ಯಕರ್ತರೇ ಪ್ರೀತಿಯಿಂದ ಊಟ ಮಾಡಿದರು. “ಒಬ್ಬ ಸಾಮಾನ್ಯ ಬಡ ಹೆಂಗಸಿನ ಈ ಅನ್ನದಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ’ ಎನ್ನುತ್ತಾರೆ ಸಂಘಟಕ ಕೆ. ರಾಘವೇಂದ್ರ ಕಿಣಿ.
ಲಾಕ್‌ಡೌನ್ ಆದಾಗ ರಾಜ್ಯದಲ್ಲಿ ಪ್ರಥಮವಾಗಿ ಕಾರ್ಮಿಕರಿಗೆ ಮಧ್ಯಾಹ್ನ ಊಟ ಆರಂಭಿಸಿದ್ದು ಕಡಿಯಾಳಿ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೆಬಲ್ ಟ್ರಸ್ಟ್‌ನವರು. ಅನ್ಯ ಜಿಲ್ಲೆಗಳಿಂದ ಬಂದ ಕಾರ್ಮಿಕರಿಗೆ ನಿರಂತರ ಊಟ ನೀಡಿದ ಪರಿಣಾಮ ಅವರೆಲ್ಲ ಇದ್ದಲ್ಲೆ ಇರುವುದರಿಂದ ಕೋವಿಡ್ ಸೋಂಕು ಕೂಡ ಹತೋಟಿಗೆ ಬರಲು ಒಂದು ಕಾರಣವಾಗಿದೆ.
-ರಘುಪತಿ ಭಟ್,ಶಾಸಕರು