Advertisement
ಹುಮನಾಬಾದ ತಾಲೂಕಿನ ಮರಕಲ್ ಗ್ರಾಮದ ಸುತ್ತಮುತ್ತಲ್ಲಿನ ಕಾರಂಜಾ ಡ್ಯಾಂ ಹಿನ್ನೀರಿನ ಪ್ರದೇಶದಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆಯ ಅಡ್ಡೆಯಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈ ಪ್ರದೇಶಕ್ಕೆ ಈ ಹಿಂದೆ ಅಧಿಕಾರಿಗಳು ಸೇರಿದಂತೆ ಅನೇಕರು ಭೇಟಿ ನೀಡಿದರೂ ಅವ್ಯಾಹತವಾಗಿ ಕಾನೂನು ಗಾಳಿಗೆ ತೂರಿ ನಿಷೇಧಿತ ಮೀನುಗಳ ಸಾಕಾಣಿಕೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
Related Articles
Advertisement
ಮಾರಾಟ ನಿಷೇಧ: ಕೆರೆಯಲ್ಲಿ ಸಿಗುವ ಹಾಗೂ ಒಂದು ಪ್ರದೇಶದಲ್ಲಿ ಬೆಳೆಸಲಾದ ನಿಷೇಧಿತ ಮೀನುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬಾರದು ಎಂಬ ಮೀನುಗಾರಿಕೆ ಇಲಾಖೆ ಈ ಹಿಂದೆಯೇ ನಿರ್ದೇಶನ ನೀಡಿದ್ದರೂ ಸಹ ನಿಯಮವನ್ನು ಗಾಳಿಗೆ ತೂರಿ ಮಾರಾಟ ಮಾಡಲಾಗುತ್ತಿದೆ. ಈ ಮೀನುಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಕೆಲ ಮಾಂಸಾಹಾರಿ, ಕಸಾಯಿಖಾನೆ ಸೇರಿದಂತೆ ದೊಡ್ಡ ಉದ್ಯಮ ನಡೆಸುವರು ಮಾಂಸದ ತ್ಯಾಜ್ಯಗಳನ್ನು ಖಾಲಿ ಮಾಡಲು ಇವುಗಳ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ‘ಲೈಗರ್’ ಘರ್ಜನೆ..: ವಿಜಯ್ ದೇವರಕೊಂಡ ಚಿತ್ರದ ಪವರ್ ಫುಲ್ ಟ್ರೇಲರ್ ಬಿಡುಗಡೆ
ಆರೋಗ್ಯದ ದುಷ್ಟಪರಿಣಾಮ: ಕ್ಯಾಟ್ ಫಿಶ್ ತಳಿಯ ಮೀನುಗಳಲ್ಲಿ ವಿಷಕಾರಿ ಅಂಶ ಅಧಿಕ ಪ್ರಮಾಣದಲ್ಲಿದ್ದು, ಇದು ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಮೀನಿನ ಸೇವನೆಯಿಂದ ಹೃದಯ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೂ ಕೂಡ ಕೆಲವರು, ಈ ಮೀನು ಮಾಂಸಹಾರಿಯಾಗಿದ್ದು, ಇದರಿಂದ ಅಧಿಕ ಶಕ್ತಿ, ಪೌಷ್ಠಿಕತೆ ಬರುತ್ತದೆ ಎಂದು ಪರಿಗಣಿಸಿ ಸೇವೆ ಕೂಡ ಮಾಡುತ್ತಾರೆ ಎಂದು ತಿಳಿದುಬಂದಿದೆ. ಸತ್ತಿರುವ ನಾಯಿಗಳು, ದನಕರುಗಳ ಮಾಂಸ, ಕೆಟ್ಟುಹೋದ ಮೊಟ್ಟೆಗಳು, ಸತ್ತ ಕೋಳಿಗಳನ್ನು ಕ್ಯಾಟ್ ಫಿಶ್‌ಗೆ ಆಹಾರವಾಗಿ ನೀಡಲಾಗುತ್ತದೆ ಎಂದು ಕೆಲಸ ಮಾಡುವ ಸಿಬ್ಬಂದಿಗಳು ವಿವರಿಸಿದ್ದಾರೆ.
ಅಪಾಯ ಹೆಚ್ಚು: ಕಾರಂಜಾ ಹಿನ್ನೀರಿನಲ್ಲಿ ಪ್ರದೇಶದಲ್ಲಿ ಹಿನ್ನೀರನ್ನೆ ಬಳಸಿಕೊಂಡು ನೀರಿನ ಬೃಹತ್ ಹೊಂಡಗಳನ್ನು ನಿರ್ಮಾಣ ಮಾಡಿದೆ. ನೆರೆಯ ಆಂಧ್ರ ಪ್ರದೇಶ, ತೆಲಂಗಾಣ ಭಾಗದ ಜನರು ಇಲ್ಲಿನ ಭೂಮಿ ಗುತ್ತಿಗೆ ಪಡೆದುಕೊಂಡು ಮೀನುಗಾರಿಕೆ ಮಾಡುತ್ತಿದ್ದಾರೆ. ಅಲ್ಲದೆ, ಆ ರಾಜ್ಯದಿಂದ ಬಂದಿರುವ ಹತ್ತಾರು ಕಾರ್ಮಿಕ ಕುಟುಂಬಗಳು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸಾಕುವ ಮೀನುಗಳಿಗೆ ಸತ್ತ ಪ್ರಾಣಿಗಳ ಮಾಂಸವನ್ನು ಹಾಕಲಾಗುತ್ತಿದ್ದು, ಇದರಲ್ಲಿನ ನೀರು ವಿಷಕಾರಿಯಾಗಿ ಮಾರ್ಪಾಡುತ್ತಿದೆ. ನಂತರ ಅದೇ ವಿಷಕಾರಿ ನೀರನ್ನು ಕಾಂರಜಾ ಡ್ಯಾಂಗೆ ಹರಿ ಬಿಡಲಾಗುತ್ತಿದೆ ಎಂದು ಸ್ಥಳಿಯರು ದೂರುತ್ತಿದ್ದಾರೆ. ಕಾರಂಜಾ ನೀರು ಹುಮನಾಬಾದ, ಬೀದರ, ಚಿಟಗುಪ್ಪ, ಭಾಲ್ಕಿ ತಾಲೂಕುಗಳು ಸೇರಿದಂತೆ ಅನೇಕ ಗ್ರಾಮೀಣ ಭಾಗಕ್ಕೂ ಕುಡಿಯುವ ನೀರಿಗಾಗಿ ಪೂರೈಕೆ ಮಾಡಲಾಗುತ್ತಿದ್ದು, ಅಧಿಕಾರಿಗಳು ಹೆಚ್ಚಿನ ಜಾಗೃತೆ ವಹಿಸಬೇಕಾಗಿದೆ. ಇದೇ ರೀತಿ ಮುಂದುವರೆದರೆ ಜನರ ಆರೋಗ್ಯದ ಮೇಲೆ ಗಂಭಿರ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಈ ಕುರಿತು ಪಶು ವೈದ್ಯ ಡಾ। ಗೋವಿಂದ ಪ್ರತಿಕ್ರೀಯೆ ನೀಡಿದ್ದು, ಕೂಡಲೇ ಪರಿಶೀಲನೆ ನಡೆಸಿ, ಆ ಪ್ರದೇಶದಲ್ಲಿ ಯಾವ ತಳಿ ಮೀನುಗಾರಿಕೆ ಮಾಡಲಾಗುತ್ತಿದೆ ಎಂದು ಖಚಿತ ಪಡಿಸುವುದಾಗಿ ತಿಳಿಸಿದ್ದಾರೆ.
-ದುರ್ಯೋಧನ ಹೂಗಾರ