Advertisement

Vandse: ನೀರಿಗಾಗಿ ಗ್ರಾಮಸ್ಥರ ಹಾಹಾಕಾರ

03:34 PM Apr 08, 2023 | Team Udayavani |

ವಂಡ್ಸೆ: ಆತ್ರಾಡಿಯಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟು ವಂಡ್ಸೆ ಪರಿಸರದ ಜನರಿಗೆ ನೀರುಣಿಸ ಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಇದೀಗ ವಂಡ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುವಂತಾಗಿದೆ.

Advertisement

ನೀರಿಗಾಗಿ ಬವಣೆ
ವಂಡ್ಸೆ ಪೇಟೆ, ಆತ್ರಾಡಿ, ಸಂಬಾರ್ತಿ, ಹರವರಿ, ಉದ್ದಿನಬೆಟ್ಟು ಸಹಿತ ಬಹುತೇಕ ಕಡೆಗಳಲ್ಲಿ ಬಾವಿ ನೀರು ಸಂಪೂರ್ಣವಾಗಿ ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಆಸುಪಾಸಿನ ನಿವಾಸಿಗಳನ್ನು ಅವಲಂ ಬಿಸಬೇಕಾದ ಗಂಭೀರ ಪರಿಸ್ಥಿತಿ ಎದುರಾಗಿದೆ.

ಬಾವಿಯಲ್ಲಿ ಉಪ್ಪು ನೀರು ಅನೇಕ ಕಡೆ ಬಾವಿಗಳಲ್ಲಿ ಹಿಂದಿನಂತೆ ಉಪ್ಪು ನೀರಿನಿಂದ ಕೂಡಿದ್ದು, ಬೋರ್‌ವೆಲ್‌ ನೀರು ಕೂಡ ಉಪ್ಪು ಮಯ ವಾಗಿದೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ನೀರಿನ ಬರ ಎದುರಿಸುತ್ತಿರುವ ವಂಡ್ಸೆ ನಿವಾಸಿಗಳಿಗೆ ಈ ಬಾರಿ ಮಾರ್ಚ್‌ ತಿಂಗಳ ಕೊನೆಯಿಂದಲೇ ನೀರಿಗಾಗಿ ಬವಣಿಸುವಂತಾಗಿದೆ.

ನೀರಿನ ಸರಬರಾಜಿಗೆ ನಾನಾ ವಿಘ್ನ
ಜಿಲ್ಲಾಡಳಿತದಿಂದ ಟ್ಯಾಂಕರ್‌ ಮೂಲಕ ನೀರು ಒದಗಿಸುವ ಸೌಲಭ್ಯವಿದ್ದರೂ, ಟೆಂಡರ್‌ ಮೂಲಕ ನೀಡಲು ಎದುರಾದ ವಿವಿಧ ತಾಂತ್ರಿಕ ಸಮಸ್ಯೆಯಿಂದ ಆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.

ಆತ್ರಾಡಿ ಬಳಿ ಕಿಂಡಿ ಅಣೆಕಟ್ಟು ಕಾಮಗಾರಿ ಅಪೂರ್ಣ ಈ ಬಾರಿಯ ಬೇಸಗೆಯ ಮೊದಲು 8 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಇಲಾಖೆಯಿಂದ ಆತ್ರಾಡಿ ಬಳಿ ಚಕ್ರಾ ನದಿಗೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ನೀರು ಉಪ್ಪು ನೀರು ತಡೆಹಿಡಿದು ಶುದ್ಧ ನೀರು ಒದಗಿಸುವಲ್ಲಿ ತಾಂತ್ರಿಕ ದೋಷದಿಂದ ಹಿನ್ನಡೆಯಾಗಿದ್ದು, ಅಣೆಕಟ್ಟಿನಲ್ಲಿ ನೀರು ನಿಲ್ಲದೇ ಈ ಯೋಜನೆ ವ್ಯರ್ಥವಾದೀತೇ ಎಂಬ ಆತಂಕಕ್ಕೆ ಎಡೆಮಾಡಿದೆ. ಎದುರಾದ ತಾಂತ್ರಿಕ ಸಮಸ್ಯೆ ಈವರೆಗೆ ನಿಭಾಯಿಸುವಲ್ಲಿ ಇಲಾಖೆ ಹಾಗೂ ಗುತ್ತಿಗೆದಾರರು ವಿಫಲರಾಗಿರುವುದು ವಂಡ್ಸೆ ಪರಿಸರದ ನಿವಾಸಿಗಳಿಗೆ ಬೇಸಗೆಯಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ತಪ್ಪಿಲ್ಲ ಎಂದರೆ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

Advertisement

ಗ್ರಾಮಸ್ಥರ ಆಕ್ರೋಶ
ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಲಾದ ಬೃಹತ್‌ ಕಿಂಡಿ ಅಣೆಕಟ್ಟಿನಿಂದ ವಂಡ್ಸೆ ಪರಿಸರದ ನಿವಾಸಿಗಳ ಬಹಳಷ್ಟು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ ಅಂದುಕೊಂಡ ಇಲ್ಲಿನ ನಿವಾಸಿಗಳಿಗೆ ಈ ಬಾರಿ ಕುಡಿಯುವ ನೀರಿನ ಬವಣೆ ಹಾಗೂ ಉಪ್ಪು ನೀರಿನ ಸಮಸ್ಯೆ ಮತ್ತೆ ಮುಂದುವರಿದಿರುವುದು ನಿರಾಸೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಲಿ
ವಂಡ್ಸೆ ಪರಿಸರದ ನಿವಾಸಿಗಳಿಗೆ ಈ ಬಾರಿ ಎದುರಾದ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಆತ್ರಾಡಿ ಬಳಿ ನಿರ್ಮಿಸಿರುವ ಅಣೆಕಟಿನಲ್ಲಿ ಎದುರಾದ ತಾಂತ್ರಿಕ ದೋಷ ಕಾರಣವಾಗಿದೆ. ಇಲಾಖೆಯ ಗಮನಕ್ಕೆ ತರಲಾಗಿದೆ. ತುರ್ತು ಕುಡಿಯುವ ನೀರು ಒದಗಿಸುವಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. -ಉದಯಕುಮಾರ್‌ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ.ವಂಡ್ಸೆ

– ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next