Advertisement
ಕೆಲವು ದಿನಗಳ ಹಿಂದೆ ನಗರದ ಹಳೆಬಂದರಿನಿಂದ ಮೀನುಗಾರಿಕೆಗೆ ತೆರಳಿದ ಎರಡು ಸ್ಥಳೀಯ ಮೀನುಗಾರಿಕಾ ಬೋಟುಗಳು ‘ಕರೆ ಫಿಶ್ ಬುಲ್ ಟ್ರಾಲಿಂಗ್’ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮತ್ತೊಂದು ಬೋಟಿನ ಮೀನುಗಾರರು ಬುಲ್‌ಟ್ರಾಲ್ ಮಾಡುತ್ತಿದ್ದ ಎರಡು ಬೋಟುಗಳ ನಾಲ್ಕೂ ಸುತ್ತ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದು, ಈಗ ಅದು ವೈರಲ್ ಆಗಿದೆ. ಜತೆಗೆ ಮೀನುಗಾರಿಕಾ ಇಲಾಖೆಗೂ ವೀಡಿಯೋ ನೀಡಲಾಗಿದೆ. ಅದನ್ನು ಪರಿಶೀಲಿಸಿ ಇಲಾಖೆ ಬೋಟಿನ ಮಾಲಕರಿಗೆ ನೋಟೀಸ್ ಜಾರಿಗೊಳಿಸಿದೆ. ಅದರಂತೆ ಸೆ. 10ರಂದು ಇಲಾಖೆಯಲ್ಲಿ ಅಧಿಕಾರಿಗಳ ಸಮಕ್ಷಮ ತನಿಖೆ ನಡೆಯುವ ಸಾಧ್ಯತೆ ಇದೆ.
ಬುಲ್ ಟ್ರಾಲ್ ಮೀನುಗಾರಿಕೆಯಿಂದ ಸಣ್ಣ ಮೀನಿನ ಮರಿಗಳು ಬಲೆಯಲ್ಲಿ ಸಿಲುಕಿ ಮೀನು ಸಂತತಿಗೆ ಧಕ್ಕೆ ಆಗಲಿದೆ ಎಂಬ ಕಾರಣಕ್ಕೆ ಬುಲ್ ಟ್ರಾಲ್ ನಿಷೇಧಿಸಲಾಗಿದೆ. ಕೆಲವು ವರ್ಷಗಳಿಂದ ಈ ಕಾನೂನು ಜಾರಿಯಲ್ಲಿದ್ದರೂ ಪರಿಣಾಮ ಕಾರಿಯಾಗಿ ಅನುಷ್ಠಾನವಾಗಿರಲಿಲ್ಲ. ಆದರೆ, ಈ ವರ್ಷದಿಂದ ಕಟ್ಟುನಿಟ್ಟಾಗಿ ಇದು ಜಾರಿಯಾಗಿದೆ. ಈ ಕುರಿತು ಕರಾವಳಿ ತಟರಕ್ಷಣಾ ಪಡೆ, ಕರಾವಳಿ ಕಾವಲು ಪೊಲೀಸ್, ಮೀನುಗಾರಿಕೆ ನಡೆಸುವ ಬೋಟಿನ ಸಿಬಂದಿ ಸಹಿತ ವಿವಿಧ ಮೂಲಗಳಿಂದ ಮಾಹಿತಿ ಪಡೆದು ನಿಷೇಧಿತ ಮೀನುಗಾರಿಕೆ ಮೇಲೆ ಕಣ್ಣಿಡಲಾಗಿದೆ. ಹೊರ ರಾಜ್ಯದ ಮೀನುಗಾರರದ್ದೇ ಸವಾಲು
ಸರಕಾರದ ಎಲ್ಲ ಸೂಚನೆಯನ್ನು ಕರಾವಳಿ ಭಾಗದ ಮೀನುಗಾರರು ಪಾಲಿಸುತ್ತಾ ಬಂದಿದ್ದಾರೆ. ಆದರೆ, ಸದ್ಯ ಕೇರಳ, ತಮಿಳುನಾಡು ಹಾಗೂ ಗೋವಾ ಭಾಗದವರು ಇಲ್ಲಿ ಬಂದು ಮೀನುಗಾರಿಕೆ ನಡೆಸುತ್ತಿರುವುದು ಬಹುದೊಡ್ಡ ಸವಾಲಾಗಿದೆ. ರಾಜ್ಯದ ಸಮುದ್ರ ವ್ಯಾಪ್ತಿಯ 12 ನಾಟಿಕಲ್ ಮೈಲು (1 ನಾಟಿಕಲ್ ಮೈಲು ಅಂದರೆ 1.8 ಕಿ.ಮೀ.) ಒಳಗೆ ಇತರ ರಾಜ್ಯದ ಮೀನುಗಾರರು ಬಂದು ಮೀನುಗಾರಿಕೆ ನಡೆಸುವಂತಿಲ್ಲ. ಇದರ ವಿರುದ್ಧವೂ ಮೀನುಗಾರಿಕಾ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಬೆಂಗ್ರೆ.
Related Articles
ಸರಕಾರದ ಆದೇಶದಂತೆ ಬೆಳಕು ಮೀನುಗಾರಿಕೆ, ಬುಲ್‌ಟ್ರಾಲ್ ಮೀನುಗಾರಿಕೆ, ಅವೈಜ್ಞಾನಿಕವಾಗಿ ಪಚ್ಚಿಲೆ ಮೀನುಗಾರಿಕೆ, ಚೌರಿ ಮತ್ತು ಪ್ಲಾಸ್ಟಿಕ್ ಬಳಸಿ ಅನಧಿಕೃತವಾಗಿ ಕಪ್ಪೆ ಬಂಡಸನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಈ ರೀತಿ ನಿಷೇಧಿತ ಪದ್ಧತಿಗಳಲ್ಲಿ ಮೀನುಗಾರಿಕೆ ಮಾಡುವುದು ಕಂಡು ಬಂದಲ್ಲಿ ಆ ಮೀನುಗಾರಿಕಾ ದೋಣಿಗಳ ಲೈಸನ್ಸ್ ಹಾಗೂ ಅವರಿಗೆ ನೀಡುವ ಕರರಹಿತ ಡೀಸೆಲ್ ಸೌಲಭ್ಯವನ್ನು ರದ್ದುಗೊಳಿಸಲಾಗುವುದು. ಅಲ್ಲದೇ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ (1986)ಯಂತೆ ಆ ದೋಣಿಗಳು ಹಿಡಿದ ಮೀನಿನ 5 ಪಟ್ಟು ದರದಲ್ಲಿ ದಂಡ ವಸೂಲು ಮಾಡಲಾಗುತ್ತದೆ. ಆದ್ದರಿಂದ ಎಲ್ಲ ಮೀನುಗಾರರು ಇಲಾಖೆಯೊಡನೆ ಸಹಕರಿಸಬೇಕು ಎಂದು ಇಲಾಖೆ ತಿಳಿಸಿದೆ.
Advertisement
ಬೋಟ್ ಮಾಲಕರಿಗೆ ನೋಟಿಸ್ಬುಲ್ಟ್ರಾಲ್, ಲೈಟ್ ಫಿಶಿಂಗ್ ಸಹಿತ ನಿಷೇಧಿತ ಮೀನುಗಾರಿಕೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು. ಬುಲ್ ಟ್ರಾಲ್ ಮಾಡಿದ ಬಗ್ಗೆ ಈಗಾಗಲೇ ಒಂದು ವೀಡಿಯೋ ದಾಖಲೆ ಮೂಲಕ ದೂರು ಬಂದಿದ್ದು, ಈ ಸಂಬಂಧ ಬೋಟಿನ ಮಾಲಕರಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಚಿಕ್ಕವೀರ ನಾಯಕ್
ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ-ದ.ಕ ದಿನೇಶ್ ಇರಾ