Advertisement

ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಲ್ಲ ; ಬೆಳೆ ಇಳಿಮುಖ ದರ ಏರುಮುಖ

08:10 AM Apr 30, 2018 | Karthik A |

ಉಡುಪಿ: ಹಣ್ಣುಗಳ ರಾಜ ಎಂದೇ ಕರೆಯಿಸಿಕೊಳ್ಳುತ್ತಿರುವ ‘ಮಾವಿನ ಹಣ್ಣು’ ಬೆಳೆ ಈ ಬಾರಿ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿ ಸಾಮಾನ್ಯ ವರ್ಗದವರ ಕೈಗೆಟುಕದಂತಾಗಿದೆ.

Advertisement

ಬೆಳೆ ಕುಂಠಿತ – ಬೆಲೆ ದುಬಾರಿ
ಬೇಸಗೆ ಎಂದರೆ ಮಾವಿನ ಸೀಸನ್‌. ಮಾರುಕಟ್ಟೆ ಪ್ರವೇಶಿಸುವ ವಿವಿಧ ಗಾತ್ರದ, ಪರಿಮಳದ ಮಾವು ಎಲ್ಲರನ್ನೂ ಆಕರ್ಷಿಸುತ್ತವೆ. ಆದರೆ ಈ ಬಾರಿ ಹಲವಾರು ಕಾರಣಗಳಿಂದ ಬೆಳೆ ಕುಂಠಿತಗೊಂಡು ದುಬಾರಿ ದರದಲ್ಲಿ ವಿರಳ ಸಂಖ್ಯೆಯಲ್ಲಿ ವಿಕ್ರಯಗೊಳ್ಳುತ್ತಿದೆ.

ದರ ನಿಗದಿಗೆ ಹರಾಜು 
ಈ ಹಿಂದೆ ಮಧ್ಯವರ್ತಿಗಳು ಕೆಜಿಗೆ ಇಂತಿಷ್ಟೇ ಬೆಲೆ ಎಂದು ನಿಗದಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು. ಆದರೆ ಈ ಬಾರಿ ಮಾವಿನ ಹಣ್ಣಿನ ಬರ ಎದ್ದು ಕಾಣುತ್ತಿರುವುದರಿಂದ ಹರಾಜು ಹಾಕಲಾಗುತ್ತಿದೆ. ಆದ್ದರಿಂದ ಹರಾಜಿನಲ್ಲಿ ಬಂದ ದರವನ್ನು ಆಧಾರವಾಗಿಟ್ಟು ಸ್ಥಳೀಯ ಮಾರುಕಟ್ಟೆಯಲ್ಲಿ ದರ ನಿಗದಿ ಪಡಿಸಬೇಕಾಗಿದೆ. ಕಳೆದ ವರ್ಷ ಗರಿಷ್ಠ 150 ರೂ. ಇದ್ದ ಮಾವಿನಹಣ್ಣಿನ ಬೆಲೆ ಈ ವರ್ಷ 240 ರೂ. ಗರಿಷ್ಠ ಬೆಲೆಗೇರಿದೆ.

ಸ್ಥಳೀಯ ಬೆಳೆ ಕೊರತೆ 
ಲೋಕಲ್‌ನಲ್ಲಿ ತೋತಾಪುರಿ, ಶಿರ್ವ ಕಸಿ, ಮಲಬಾರ್‌, ನಾರಾಯಣ ಕಿಣಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿದ್ದವು. ಆದರೆ ಈ ಬಾರಿ ಮಾವಿನ ಕೃಷಿಯ ಆಸಕ್ತಿ ಕಡಿಮೆಯಾಗಿ ಬೆಲೆ ಏರಿದೆ. ಬೆಲೆ ದುಬಾರಿಯಾದ್ದರಿಂದ ಗ್ರಾಹಕರು ಮಾವಿನ ಹಣ್ಣನ್ನು ಖರೀದಿಸದೆ ಕಡಿಮೆ ದರದಲ್ಲಿ ದೊರಕುವ ಇತರೆ ಹಣ್ಣುಗಳಿಗೆ ಮೊರೆ ಹೋಗುತ್ತಿದ್ದಾರೆ.

50 – 60 ರೂ. ಬೆಲೆ ಏರಿಕೆ
ಈ ಹಿಂದೆ ಮಾರುಕಟ್ಟೆಗೆ ಸ್ಥಳೀಯ ಭಾಗಗಳಿಂದ ಸಾಕಷ್ಟು ಮಾವಿನಹಣ್ಣುಗಳು ಲಗ್ಗೆ ಇಡುತ್ತಿದ್ದವು. ಆದರೆ ಈ ವರ್ಷ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬಂದಿಲ್ಲ. ಮೈಸೂರು, ಬೆಂಗಳೂರು, ಆಂಧ್ರಪ್ರದೇಶ, ಕೇರಳ ರಾಜ್ಯಗಳಿಂದ ಆಮದು ಮಾಡಿಕೊಂಡ ಹಣ್ಣುಗಳೇ ಜಾಸ್ತಿ ಇವೆ. ಬೆಳೆ ಕಡಿಮೆಯಿರುವುದರಿಂದ ಮಧ್ಯವರ್ತಿಗಳು ಗರಿಷ್ಠ ದರಕ್ಕೆ ಮಾರಾಟ ಮಾಡುತ್ತಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಕಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಕೆ.ಜಿ.ಗೆ ಸುಮಾರು 50 – 60 ರೂ. ವರೆಗೆ ಏರಿಕೆಯಾಗಿದೆ. ಕಳೆದ ವರ್ಷ 150 ರೂ. ಇದ್ದ ಮಾವಿನ ಹಣ್ಣಿನ ಬೆಲೆ ಈ ವರ್ಷ 240 ರೂ. ಬೆಲೆ ಗೇರಿದೆ.

Advertisement

ಮಾವು ಕೊರತೆ
ವೈಜ್ಞಾನಿಕವಾಗಿ ಈ ಬಾರಿ ಮಾವಿನಹಣ್ಣು ಕಡಿಮೆ, ವ್ಯಾಪಾರವೂ ಕಡಿಮೆ. ಕೇವಲ 3 ತಿಂಗಳು ಮಾತ್ರವಿರುವ ಮಾವಿನಹಣ್ಣಿನ ಸೀಸನ್‌ನಲ್ಲಿ ಈಗಾಗಲೇ ಒಂದೂವರೆ ತಿಂಗಳು ಕಳೆದು ಹೋಗಿದೆ. ಮಾವಿನ ಮರಗಳೇ ಕಡಿಮೆಯಾಗಿದ್ದು, ಇದ್ದರೂ ಹಣ್ಣು ಕೊಯ್ಯುವವರಿಲ್ಲ. ಇನ್ನು ಉಪ್ಪಿನಕಾಯಿಗೆ ಮಿಡಿ ಕೊಯ್ದು ಮಾರಾಟ ಮಾಡುವುದರಿಂದ ಹಣ್ಣಿಗೆ ಬರ ಎದುರಾಗಿದೆ.
– ಮುಸ್ತಾಫ್, ವಿಶ್ವೇಶ್ವರಯ್ಯ ಹಣ್ಣು ತರಕಾರಿ ಮಾರುಕಟ್ಟೆ, ಉಡುಪಿ

ಫ‌ಸಲು ಒಂದೇ ರೀತಿ ಇರಲ್ಲ 
ಉಡುಪಿ ಜಿಲ್ಲೆ ಮಾವು ಬೆಳೆಯುವ ಪ್ರದೇಶವಲ್ಲ. ಇಲ್ಲಿಗೆ ಹೊರಗಿನಿಂದಲೇ ಮಾವು ಬರಬೇಕು. ಹಿಂದಿನ ವರ್ಷ ಉತ್ತಮ ಫ‌ಸಲು ಕೊಟ್ಟಿದ್ದರೆ, ಮುಂದಿನ ವರ್ಷ ಹಿಂದಿನ ವರ್ಷದಷ್ಟೇ ಫ‌ಸಲನ್ನು ಕೊಡುವುದಿಲ್ಲ. ಇದು ಮಾವು ಬೆಳೆಯ ವಿಶೇಷತೆ. ಈಗ ಸೀಸನ್‌ ಆಗಿದ್ದು ಬೇಡಿಕೆ ಇದ್ದರೂ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಬೆಲೆ ಏರಿಕೆ ಕಂಡಿದೆ.  – ಭುವನೇಶ್ವರಿ, ಜಿಲ್ಲಾ ಉಪ ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಉಡುಪಿ

— ಎಸ್‌.ಜಿ. ನಾಯ್ಕ

Advertisement

Udayavani is now on Telegram. Click here to join our channel and stay updated with the latest news.

Next