Advertisement
ಸದಾ ವಾಹನಗಳಿಂದ ಗಿಜಿಗುಡುವ ಟ್ಯಾನರಿ ರಸ್ತೆ, ಪಾದರಾಯನಪುರ, ಪಿಲ್ಲನಗಾರ್ಡನ್, ವೆಂಕಟೇಶಪುರ ಮ್ತತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು ಮೂರು ದಶಕಗಳಿಂದ ರಸ್ತೆ ವಿಸ್ತರಣೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು 2019ರಲ್ಲಿ !
Related Articles
Advertisement
ಸಾವಿರಾರು ದಲಿತರನ್ನು ಮದುರೈ, ವೆಲ್ಲೂರ್ ನಿಂದ ಟ್ಯಾನರಿ ಪ್ರದೇಶಕ್ಕೆ ಕರೆತರಲಾಗಿತ್ತು:
ಟ್ಯಾನರಿ ಅಂದರೆ “ಚರ್ಮ ಹದ” ಮಾಡುವ ಎಂದರ್ಥ. ಅಂದು ಇಲ್ಲಿ ಸುಮಾರು 200 ಟ್ಯಾನರಿಗಳಿದ್ದವು. ಹಲವಾರು ಕಸಾಯಿಖಾನೆಗಳಿದ್ದವು. ಬ್ರಿಟಿಷ್ ಇಂಡಿಯಾ ಕಾಲದಲ್ಲಿ ಹಲವಾರು ಚರ್ಮ ಹದ ಮಾಡುವ ಘಟಕಗಳನ್ನು ತೆರೆದಿದ್ದರು. ಅಂದು ಟ್ಯಾನರಿ ರಸ್ತೆ ಪ್ರದೇಶದಲ್ಲಿ ವಾಸವಾಗಿದ್ದ ಜನರಿಗೆ ಕಂಟೋನ್ಮೆಂಟ್ ಪ್ರವೇಶಿಸಲು ಅವಕಾಶ ನೀಡುತ್ತಿರಲಿಲ್ಲವಾಗಿತ್ತು.
ಹೀಗೆ ಚರ್ಮ ಹದ ಮಾಡುವ ಕೆಲಸಕ್ಕಾಗಿ ಮದ್ರಾಸ್ ಪ್ರೆಸಿಡೆನ್ಸಿಯ (ತಮಿಳುನಾಡು) ವೆಲ್ಲೂರು, ಮದುರೈ ಹಾಗೂ ತಿರುನೆಲ್ವೇಲಿ ಜಿಲ್ಲೆಗಳಿಂದ ಸುಮಾರು 5 ಸಾವಿರ ಮಂದಿ ತಮಿಳು ದಲಿತ ಕಾರ್ಮಿಕರನ್ನು ಬ್ರಿಟಿಷರು ಕರೆ ತಂದಿದ್ದರು. ಮೂಲತಃ ಇವರು ವಲಸಿಗರಾಗಿದ್ದಾರೆ. ಆರಂಭದಲ್ಲಿ ಇವರು ಚರ್ಮವನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ, ಅದನ್ನು ಉಪ್ಪಿನಿಂದ ಉಜ್ಜಿದ ನಂತರ 2 ವಾರಗಳ ಕಾಲ ಒಣಗಲು ಹಾಕುತ್ತಿದ್ದರು. 2006ರ ಹೊತ್ತಿಗೆ ಬಹುತೇಕ ಚರ್ಮ ಹದ ಮಾಡುವ ಘಟಕಗಳು ಮುಚ್ಚಿದ್ದವು. ಹೀಗೆ ಇಲ್ಲಿ ಕೆಲಸ ಮಾಡುತ್ತಿದ್ದವರು ಬೇರೆ, ಬೇರೆ ಉದ್ಯೋಗ ಹುಡುಕಿಕೊಂಡಿದ್ದರು. ಚರ್ಮೋದ್ಯಮ ನಂತರದಲ್ಲಿ ವಾಣಿಯಂಬಾಡಿ ಮತ್ತು ಅಂಬೂರಿನಲ್ಲಿ ಹೆಚ್ಚಾಗತೊಡಗಿತ್ತು. ಬೆಂಗಳೂರಿನಲ್ಲಿ ಕಡಿಮೆಯಾಗಿತ್ತು. ಕರ್ನಾಟಕ ಸರ್ಕಾರ ಕೂಡಾ ಗೋ ವಧೆ ನಿಷೇಧ ಕಾನೂನು ಜಾರಿಗೆ ತಂದಿತ್ತು. ಇದರಿಂದಾಗಿ ಕಸಾಯಿಖಾನೆ ಮುಚ್ಚಲ್ಪಟ್ಟಿತ್ತು.
ಡಿಜೆ ಹಳ್ಳಿ ತುಂಬಾ ಸೂಕ್ಷ್ಮಪ್ರದೇಶ!
ಡಿಜೆ ಹಳ್ಳಿ-ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆ ಪ್ರದೇಶ ತುಂಬಾ ಸೂಕ್ಷ್ಮ ಪ್ರದೇಶ ಎಂಬುದು ಈ ಹಿಂದೆಯೇ ಸಾಬೀತಾಗಿತ್ತು. ಹಲವು ಕೋಮು ಸಂಘರ್ಷ ಇಲ್ಲಿ ನಡೆದಿತ್ತು. ಹಿಂದೂಗಳ ಹಬ್ಬದ ಮೆರವಣಿಗೆ, ರಾಜಕೀಯ ಮೆರವಣಿಗೆ ಅಷ್ಟೇ ಏಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟದ ಸಂದರ್ಭದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾರಿಮುತ್ತು ಹಾಗೂ ಏಳುಮಲೈಯಂತಹ ನಟೋರಿಯಸ್ ಕ್ರಿಮಿನಲ್ ಗಳು ಇದ್ದ ಪ್ರದೇಶ ಇದಾಗಿತ್ತು. ಮಾರಿಮುತ್ತು ಕಳ್ಳಭಟ್ಟಿ ವ್ಯವಹಾರ ನಡೆಸುತ್ತಿದ್ದಳು.ಇಡೀ ಬೆಂಗಳೂರು ಪೊಲೀಸರ ರೌಡಿ ಶೀಟರ್ ಪಟ್ಟಿಯಲ್ಲಿದ್ದ ಏಕೈಕ ಮಹಿಳೆ ಮಾರಿಮುತ್ತು! 2000 ಹಾಗೂ 2005ನೇ ಇಸವಿಯಲ್ಲಿ ಜೆಡಿಎಸ್ ಟಿಕೆಟ್ ನಿಂದ ಮಾರಿಮುತ್ತು ಬಿಬಿಎಂಪಿಗೆ ಆಯ್ಕೆಯಾಗಿದ್ದಳು. 2010ರಲ್ಲಿ ನಟೋರಿಯಸ್ ರೌಡಿ, ಬದ್ಧ ವೈರಿ ಏಳುಮಲೈ ಸಹೋದರಿ ವಿ.ಪಳನಿಯಮ್ಮಾಳ್ ವಿರುದ್ಧ ಮಾರಿಮುತ್ತು ಸೋತಿದ್ದಳು. ಅಲ್ಲದೇ ಇಲ್ಲಿ ಮುಸ್ಲಿಂ ಅಂಡರ್ ವರ್ಲ್ಡ್ ಕೂಡಾ ಸಕ್ರಿಯವಾಗಿ ಕಾರ್ಯಾಚರಿಸುತ್ತಿತ್ತು. ಡಿಜೆ ಹಳ್ಳಿ, ಟ್ಯಾನರಿ ರಸ್ತೆ ಸುತ್ತಮುತ್ತ ಕಳ್ಳಭಟ್ಟಿ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿತ್ತು. 1981ರ ಜುಲೈ 7ರಂದು ಕಳ್ಳಭಟ್ಟಿ ಸೇವಿಸಿ 300 ಮಂದಿ ಸಾವಿಗೀಡಾಗಿದ್ದರು. ಆದರೆ ಈ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ! ಗುಂಡೂರಾವ್ ನೇತೃತ್ವದ ಸರ್ಕಾರ ಅಂದು ಮೃತ ಕುಟುಂಬಕ್ಕೆ ಒಂದು ಸಾವಿರ ರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡುಬಿಟ್ಟಿತ್ತು!