ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರವಾಗಿ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಇತರರು ಎಷ್ಟು ಸಭೆಗಳನ್ನು ಬೇಕಾದರೂ ಮಾಡಲಿ. ಯತ್ನಾಳ್ ಅವರನ್ನು ಪಕ್ಷದಿಂದ ಹೊರಗೆ ಹಾಕಲು ಆಗಲಿಲ್ಲ ಎಂದು ಅವರು ಹತಾಶೆಗೊಂಡಿರಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
ನಗರದಲ್ಲಿ ಡಿ.15ರ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ಯಾರ ಮೇಲೆ, ಏನು ಕ್ರಮ ಕೈಗೊಂಡರೆ ಯಾವ ಪರಿಣಾಮ ಬೀರುತ್ತದೆ ಎಂದು ಹೈಕಮಾಂಡ್ಗೆ ಗೊತ್ತಿದೆ. ಅಲ್ಲದೇ, ಕರ್ನಾಟಕದ ಪರಿಸ್ಥಿತಿ ಬಗ್ಗೆ ಸಂಸದರಿಗೂ ಗೊತ್ತಿದೆ. ಯತ್ನಾಳ್ ಅವರನ್ನು ಹೊರಹಾಕಿದರೆ ಮತ್ತು ಪಕ್ಷದಲ್ಲಿ ಇಟ್ಟುಕೊಂಡರೆ ಏನಾಗುತ್ತದೆ ಎಂದು ಹೈಕಮಾಂಡ್ಗೆ ಮನವರಿಕೆ ಮಾಡಿದ್ದಾರೆ. ನನ್ನ ಬಗ್ಗೆ ಲೋಕಸಭೆ ಸದಸ್ಯರಿಗೆ ವಿಶೇಷ ಪ್ರೀತಿ ಇದೆ ಎಂದರು.
ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಗೆ ಬೆಂಬಲ ಕೊಡಿ – ಜಮೀರ್ಗೆ ಯತ್ನಾಳ್ ಸವಾಲು: ವಕ್ಫ್ ವಿರುದ್ಧದ ಹೋರಾಟ ನಿರಂತರವಾಗಿ ಇರುತ್ತದೆ. ಅಧಿವೇಶನ ಮುಗಿದ ನಂತರ ಎರಡನೇ ಹಂತದಲ್ಲಿ ಬಳ್ಳಾರಿ, ವಿಜಯನಗರಕ್ಕೆ ಭೇಟಿ ನೀಡುತ್ತೇವೆ. ಮುಂದೆ ಹಂತ ಹಂತವಾಗಿ ಹೋರಾಟ ನಡೆಯಲಿದೆ. ದಾವಣಗೆರೆಯಲ್ಲಿ ಅಂತಿಮವಾಗಿ ದೊಡ್ಡ ಸಮಾವೇಶ ಮಾಡುತ್ತೇವೆ. ಕೇಂದ್ರದಲ್ಲಿ ಮುಂದಿನ ದಿನಗಳಲ್ಲಿ ವಕ್ಫ್ ಕಾಯ್ದೆಗೆ ದೊಡ್ಡ ಮಟ್ಟದಲ್ಲಿ ತಿದ್ದುಪಡಿಯಾಗುವ ವಿಶ್ವಾಸ ಇದೆ. ರಾಜ್ಯದಲ್ಲಿ ರೈತರು, ಮಠ ಮಾನ್ಯಗಳ ಜಮೀನು ಮುಟ್ಟುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಿಜವಾಗಿಯೂ ಇದೇ ಸತ್ಯವಾದರೆ ಕೇಂದ್ರದ ಕಾಯ್ದೆಗೆ ಬೆಂಬಲ ಕೊಡಿ ಎಂದು ಯತ್ನಾಳ್ ಸವಾಲು ಹಾಕಿದರು.
ವಕ್ಫ್ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ-ಯತ್ನಾಳ್: ಇದೇ ವೇಳೆ, ವಕ್ಫ್ ವರದಿ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ಅವರಿಗೆ ವಿಜಯೇಂದ್ರ ಹಣದ ಆಮಿಷವೊಡ್ಡಿದ್ದರು ಎಂಬ ಆರೋಪದ ಬಗ್ಗೆ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆಯುವ ಬದಲಿಗೆ ಈ ಕುರಿತು ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಿ. ಸಿಬಿಐ, ಇಡಿ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತದೆ ಎಂದು ಅವರೇ ಬೊಬ್ಬೆ ಹಾಕುತ್ತಾರೆ. ಈಗ ಏಕಾಏಕಿ ಪತ್ರ ಬರೆಯುತ್ತಾರೆ. ಆದರೆ, 150 ಕೋಟಿ ರೂ. ಹಗರಣ ನಡೆದಿದೆ ಎಂದು ಶಿಫಾರಸು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರವಿದೆ. ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ಮಾಡಲು ಅಭ್ಯಂತರವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಹಗರಣಗಳನ್ನೂ ಬಯಲಿಗೆ ತರುತ್ತೇವೆ ಎಂದು ಯತ್ನಾಳ್ ತಿಳಿಸಿದರು.