ಜೊಹಾನ್ಸ್‌ಬರ್ಗ್/ನವದೆಹಲಿ: ದಕ್ಷಿಣ ಆಫ್ರಿಕಾದ ಧರ್ಮಗುರು, ವರ್ಣಭೇದ ನೀತಿ ವಿರೋಧಿ ಹೋರಾಟಗಾರ, ನೊಬೆಲ್ ಪುರಸ್ಕೃತ ಡೆಸ್ಮಂಡ್ ಟುಟು (90) ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಬೆಳಗಿನ ಜಾವ ಕೇಪ್ ಟೌನ್‌ನಲ್ಲಿ ಅವರು ಅಸುನೀಗಿದ್ದಾಗಿ ದ. ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಪ್ರಕಟಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ವಿರುದ್ಧ ನಡೆಯುತ್ತಿದ್ದ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ದನಿಯೆತ್ತಿ, ಅವರಿಗಾಗಿ ಹೋರಾಟ ನಡೆಸಿದ ಹೆಗ್ಗಳಿಕೆ ಅವರದ್ದು. ಅಹಿಂಸಾತ್ಮಕವಾಗಿಯೇ ಅಂಥ ಕಿರುಕುಳದ ವಿರುದ್ಧ ಹೋರಾಟ ನಡೆಸಿ ಗೆದ್ದಿದ್ದಾರೆ. ಇದರ ಜತೆಗೆ ತೃತೀಯ ಲಿಂಗಿಗಳ ಪರವಾಗಿ ಹೋರಾಟ ನಡೆಸಿದ್ದ ಅವರಿಗೆ 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರು ಕೇಪ್‌ಟೌನ್‌ನಲ್ಲಿ ಆರ್ಚ್‌ಬಿಷಪ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ವಿಶ್ವಾದ್ಯಂತ ಗಣ್ಯರ ಕಂಬನಿ:
ದಕ್ಷಿಣ ಆಫ್ರಿಕಾದ ಸಾಕ್ಷಿಪ್ರಜ್ಞೆಯಾಗಿದ್ದ ಡೆಸ್ಮಂಡ್ ಟುಟು ಅವರ ಅಗಲಿಕೆಗೆ ದೇಶ-ವಿದೇಶಗಳ ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, “ತೃತೀಯ ಲಿಂಗಿಗಳಿಗೂ ಸಮಾನ ಹಕ್ಕುಗಳು ಸಿಗಬೇಕು ಎಂದು ಡೆಸ್ಮಂಡ್ ಟುಟು ಅವಿರತ ಹೋರಾಟ ನಡೆಸಿದ್ದರು. ಅವರ ಹೋರಾಟ ಜಗತ್ತಿನ ಅಸಂಖ್ಯಾತ ಮಂದಿಗೆ ಬೆಳಕಾಗಿ ಮುಂದುವರಿಯಲಿ. ಜನಾಂಗೀಯ ನಿಂದನೆ ವಿರುದ್ಧ ನಡೆಸಿದ ಅಹಿಂಸಾತ್ಮಕ ಹೋರಾಟ ಅನುಸರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು, ಜಗತ್ತಿನ ಇತರ ದೇಶಗಳ ಸರ್ಕಾರಿ ಮುಖ್ಯಸ್ಥರೂ ಟುಟು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಡೆಸ್ಮಂಡ್ ಟುಟು ಅವರೊಬ್ಬ ನೈಜ ಮಾನವತಾವಾದಿ. ಅವರು ನನ್ನ ಹಿರಿಯ ಸಹೋದರ ಮತ್ತು ಉತ್ತಮ ಸ್ನೇಹಿತರಾಗಿದ್ದರು. ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ.
– ದಲೈ ಲಾಮಾ, ಟಿಬೆಟಿಯನ್ ಧರ್ಮಗುರು